Advertisement

“ಲೋಕಲ್‌ ಫೈಟ್‌’ಗೆ ಇಂದು ಅಧಿಸೂಚನೆ ಪ್ರಕಟ

11:30 PM May 08, 2019 | Lakshmi GovindaRaj |

ಬೆಂಗಳೂರು: ಮೇ 29ರಂದು ಮತದಾನ ನಡೆಯಲಿರುವ ರಾಜ್ಯದ 63 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಗುರುವಾರ ಅಧಿಕೃತವಾಗಿ ಅಧಿಸೂಚನೆ ಹೊರಬೀಳಲಿದ್ದು, ಆಯಾ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದಾರೆ.

Advertisement

ಅದರಂತೆ ಮೇ 9ರಿಂದಲೇ ಎಲ್ಲಾ ಕಡೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. 2019ರ ಮಾರ್ಚ್‌ ಹಾಗೂ ಜುಲೈನಲ್ಲಿ ಅವಧಿ ಪೂರ್ಣಗೊಳ್ಳಲಿರುವ ರಾಜ್ಯದ 103 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ಬಾಕಿ ಇರುವ 39 ನಗರ ಸ್ಥಳೀಯ ಸಂಸ್ಥೆಗಳನ್ನು ಹೊರತುಪಡಿಸಿ, ಉಳಿದ 63 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ಮೇ 2ರಂದು ವೇಳಾಪಟ್ಟಿ ಪ್ರಕಟಿಸಿತ್ತು.

ರಾಜ್ಯದ 22 ಜಿಲ್ಲೆಗಳಲ್ಲಿ 8 ನಗರಸಭೆ, 33 ಪುರಸಭೆ ಹಾಗೂ 22 ಪಟ್ಟಣ ಪಂಚಾಯಿತಿಗಳು ಸೇರಿ ಒಟ್ಟು 63 ನಗರ ಸ್ಥಳೀಯ ಸಂಸ್ಥೆಗಳ 1,361 ವಾರ್ಡ್‌ಗಳಲ್ಲಿ ಚುನಾವಣೆ ನಡೆಯಲಿದೆ. ಇದರ ಜೊತೆಗೆ ಬಿಬಿಎಂಪಿಯ ಎರಡು ವಾರ್ಡ್‌, ತುಮಕೂರು ಮಹಾನಗರ ಪಾಲಿಕೆ, ಬೆಂಗಳೂರು ನಗರ ಜಿಲ್ಲೆಯ ಹೆಬ್ಬಗೋಡಿ ನಗರಸಭೆ, ಬೆಳಗಾವಿ ಜಿಲ್ಲೆಯ ಸದಲಗಾ ಪುರಸಭೆ ಮತ್ತು ಮುಗಳಖೋಡ ಪುರಸಭೆಯ ಒಂದೊಂದು ವಾರ್ಡ್‌ಗೆ ಉಪ ಚುನಾವಣೆ ನಡೆಯಲಿದೆ.

ಮೇ 29ಕ್ಕೆ ಮತದಾನ: ಮೇ 29ರಂದು ಮತದಾನ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಮೇ 16 ಕೊನೆ ದಿನ. ಮೇ 17ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್‌ ಪಡೆದುಕೊಳ್ಳಲು ಮೇ 20 ಕೊನೆ ದಿನ. ಮೇ 31ರಂದು ಮತಗಳ ಎಣಿಕೆ ನಡೆಯಲಿದೆ.

ಎಲ್ಲೆಲ್ಲಿ ಚುನಾವಣೆ?
8 ನಗರಸಭೆ: ಹಿರಿಯೂರು, ಹರಿಹರ, ಶಿಡ್ಲಘಟ್ಟ, ಸಾಗರ, ತಿಪಟೂರು, ನಂಜನಗೂಡು, ಬಸವಕಲ್ಯಾಣ, ಶಹಾಪುರ.

Advertisement

33 ಪುರಸಭೆ: ಆನೇಕಲ್‌, ದೇವನಹಳ್ಳಿ, ನೆಲಮಂಗಲ, ಬಂಗಾರಪೇಟೆ, ಶ್ರೀನಿವಾಸಪುರ, ಮಾಲೂರು, ಬಾಗೇಪಲ್ಲಿ, ಶಿಕಾರಿಪುರ, ಪಾವಗಡ, ಕುಣಿಗಲ್‌, ಕೆ.ಆರ್‌. ನಗರ, ಬನ್ನೂರು, ಕಡೂರು, ಮೂಡಬಿದಿರೆ, ಮಳವಳ್ಳಿ, ಕೆ.ಆರ್‌. ಪೇಟೆ, ಶ್ರೀರಂಗಪಟ್ಟಣ, ಗುಂಡ್ಲುಪೇಟೆ, ಬಾಗೇವಾಡಿ, ಇಂಡಿ, ತಾಳಿಕೋಟೆ, ನವಲಗುಂದ, ಮುಂಡರಗಿ, ನರಗುಂದ, ಬ್ಯಾಡಗಿ, ಶಿಗ್ಗಾಂವ, ಭಟ್ಕಳ, ಭಾಲ್ಕಿ, ಹುಮ್ನಾಬಾದ್‌, ಚಿಟಗುಪ್ಪ, ಸಂಡೂರು, ಹರಪನಹಳ್ಳಿ, ಹೂವಿನಹಡಗಲಿ.

22 ಪಟ್ಟಣ ಪಂಚಾಯಿತಿ: ಮೊಳಕಾಲ್ಮೂರು, ಹೊಳಲ್ಕೆರೆ, ಶಿರಾಳಕೊಪ್ಪ, ಸೊರಬ, ಹೊಸನಗರ, ತುರುವೇಕೆರೆ, ಕೊಪ್ಪ, ಶೃಂಗೇರಿ, ಮೂಡಿಗೆರೆ, ನರಸಿಂಹರಾಜಪುರ, ಮೂಲ್ಕಿ, ಸುಳ್ಯ, ಆಲೂರು, ಅರಕಲಗೂಡು, ಯಳಂದೂರು, ಹನೂರು, ಕಲಘಟಗಿ, ಅಳ್ನಾವರ, ಹೊನ್ನಾವರ, ಸಿದ್ದಾಪುರ, ಔರಾದ್‌, ಕಮಲಾಪುರ.

Advertisement

Udayavani is now on Telegram. Click here to join our channel and stay updated with the latest news.

Next