ಸಾಗರ: ಕೆಲವು ವೈದ್ಯರು ಅವರಿಗೆ ನಿಗದಿಪಡಿಸಿದ ಸಮಯವನ್ನು ಮೀರಿ ವಿಳಂಬವಾಗಿ ಬರುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇಂತಹ ಇಬ್ಬರು ವೈದ್ಯರಿಗೆ ಈಗಾಗಲೇ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಶಾಸಕ, ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ಉಪವಿಭಾಗೀಯ ಆಸ್ಪತ್ರೆಗೆ ಸೋಮವಾರ ದಿಢೀರ್ ಭೇಟಿ ನೀಡಿ ವಾರ್ಡ್‌ಗಳಲ್ಲಿ ದಾಖಲಾಗಿರುವ ರೋಗಿಗಳ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವೈದ್ಯ ಸಿಬ್ಬಂದಿಗಳು ಈ ಸಂದರ್ಭದಲ್ಲಿ ರಜೆ ಹಾಕಬಾರದು. ಕೆಲವು ವೈದ್ಯರು 11 ಗಂಟೆಯಾದರೂ ಕರ್ತವ್ಯಕ್ಕೆ ಹಾಜರಾಗದೆ ಇರುವುದು ನನ್ನ ಗಮನಕ್ಕೆ ಬಂದಿದೆ. ಅಂತಹವರ ವಿರುದ್ದ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇಂತಹ ವರ್ತನೆ ಪುನಾವರ್ತನೆಯಾದರೆ ಸಸ್ಪೆಂಡ್ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಡೆಂಗ್ಯೂ ಜ್ವರ ಹೆಚ್ಚುತ್ತಿದ್ದು, ಹೆಚ್ಚು ಮುತುವರ್ಜಿಯಿಂದ ವೈದ್ಯ ಸಿಬ್ಬಂದಿಗಳು ಕೆಲಸ ಮಾಡಬೇಕು. ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಪ್ರತಿದಿನ 20ರಿಂದ 30 ಪ್ರಕರಣಗಳು ದಾಖಲಾಗುತ್ತಿದೆ. ಆಸ್ಪತ್ರೆಯಲ್ಲಿ ಬೆಡ್ ಹಾಕಲು ಜಾಗ ಇಲ್ಲದೆ ತುರ್ತು ಸಂದರ್ಭದಲ್ಲಿ ಹೆಚ್ಚುವರಿ ಬೆಡ್ ಕೆಳಗೆ ಸಹ ಹಾಕಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಅಕ್ಕಪಕ್ಕದ ತಾಲೂಕುಗಳಾದ ಸೊರಬ, ಶಿಕಾರಿಪುರ, ಸಿದ್ದಾಪುರ ಭಾಗದಿಂದ ಸಹ ಇಲ್ಲಿ ಉತ್ತಮ ಆರೋಗ್ಯ ಸೇವೆ ಸಿಗುತ್ತದೆ ಎಂದು ರೋಗಿಗಳು ತಪಾಸಣೆಗೆ ಬರುತ್ತಿದ್ದಾರೆ. ಇದು ವೈದ್ಯ ಸಿಬ್ಬಂದಿ ಮೇಲೆ ಒತ್ತಡ ತರುತ್ತಿದೆ. ಆಯಾ ತಾಲೂಕಿನಲ್ಲಿ ಸೂಕ್ತ ವೈದ್ಯಸಿಬ್ಬಂದಿ ನೇಮಕ ಮಾಡಿಕೊಂಡಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಿವಿಲ್ ಸರ್ಜನ್ ಡಾ. ಕೆ.ಪರಪ್ಪ, ಮಾಜಿ ತಾಪಂ ಸದಸ್ಯ ಸೋಮಶೇಖರ ಲ್ಯಾವಿಗೆರೆ, ತಾರಾಮೂರ್ತಿ, ಅಶೋಕ ಬೇಳೂರು, ರವಿಕುಮಾರ್ ಇನ್ನಿತರರು ಹಾಜರಿದ್ದರು.