ಮೈಸೂರು: ನಗರದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಹಿನ್ನೆಲೆಯಲ್ಲಿ ಶಾಸಕ ಎಸ್.ಎ.ರಾಮದಾಸ್ ಮಳೆ ನೀರಿನಿಂದ ತೊಂದರೆಗೊಳಗಾದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸುವ ಜತೆಗೆ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇತ್ತೀಚಿಗೆ ನಗರದಲ್ಲಿ ಸುರಿದ ಮಳೆಯಿಂದಾಗಿ ಕ್ಷೇತ್ರ ವ್ಯಾಪ್ತಿಯ ಹಲವು ಬಡಾವಣೆಗಳ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುವಂತಾಯಿತು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಪಾಲಿಕೆ 1ನೇ ವಾರ್ಡ್ ವ್ಯಾಪ್ತಿಯ ಮಧುವನ, ರಾಮಾನುಜ ರಸ್ತೆಯ ಕನಕಗಿರಿ, ವಿದ್ಯಾರಣ್ಯಪುರಂ,
ಶ್ರೀರಾಂಪುರ ಅಶ್ವಿನಿ ಕಲ್ಯಾಣ ಮಂಟಪದ ಬಳಿ, ಎಸ್‌ಬಿಎಂ ಕಾಲೋನಿ, ಕುವೆಂಪುನಗರ, ಸಿದ್ದಾರ್ಥಬಡಾವಣೆಯ ಹಲವು ರಸ್ತೆಗಳು ಸೇರಿದಂತೆ ಇನ್ನಿತರ ಕಡೆಗಳಿಗೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪಾಲಿಕೆ ಅಧಿಕಾರಿಗಳಿಗೆ ಮಳೆಯಿಂದಾಗಿ ಉಂಟಾಗಿರುವ ಸಮಸ್ಯೆಯನ್ನು ಪರಿಶೀಲಿಸಿ, ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚಿಸಿದರು.
ಈ ವೇಳೆ ಮಾತನಾಡಿದ ಅವರು, ಎಂ.ಜಿ.ರಸ್ತೆಯಲ್ಲಿರುವ ಎರಡು ಒಳ ಚರಂಡಿ ಲೈನ್‌ಗಳಿಗೆ ಮನೆಯ ತ್ಯಾಜ್ಯದ ಲೈನ್ ಸೇರಿಸಿರುವುದರಿಂದ ಅನಾಹುತಕ್ಕೆ ಕಾರಣವಾಗಿದೆ. ಹೀಗಾಗಿ ಇದನ್ನು ಪ್ರತ್ಯೇಕಗೊಳಿಸಿ ಹೊಸ ಪೈಪ್‌ಲೈನ್ ಅಳವಡಿಸುವ ಅಗತ್ಯವಿದೆ. 1ನೇ ವಾರ್ಡ್‌ನ ರಾಮಾನುಜ ರಸ್ತೆಯಲ್ಲಿರುವ ರಾಜ ಕಾಲುವೆಯಲ್ಲಿ 4 ಅಡಿಯಷ್ಟು ಊಳು ತುಂಬಿದ್ದು, ಈ ಕೂಡಲೇ ಇದನ್ನು ತೆಗೆಯಲು ಕ್ರಮ ಕೈಗೊಳ್ಳಬೇಕಿದೆ.
ನಕ್ಷೆ ಪ್ರಕಾರ 25 ಅಡಿ ಅಗಲ ಇರಬೇಕಾದ ರಾಜಕಾಲುವೆ ಈಗಾಗಲೇ ಮುಚ್ಚಿ ಹೋಗಿ, 8 ಅಡಿ ಮಾತ್ರ ಉಳಿದುಕೊಂಡಿದೆ. ಆದ್ದರಿಂದ ಪಾಲಿಕೆ ಅಧಿಕಾರಿಗಳು ಕಂದಾಯ ಇಲಾಖೆಯಿಂದ ಸರ್ವೆ ವರದಿ ತರಿಸಿಕೊಂಡು ಹಳೆಯ ನಕ್ಷೆಯಂತೆ ರಾಜಕಾಲುವೆಯನ್ನು ತೆರವುಗೊಳಿಸಬೇಕಿದೆ. ರಾಜ ಕಾಲುವೆಯ ಪಕ್ಕದಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಆದೇಶಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಜಗದೀಶ್, ಪಾಲಿಕೆ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.