Advertisement

ಬಫ‌ರ್‌ ಝೋನ್‌ ಮೇಲ್ಮವಿಗೆ ಸೂಚನೆ

11:38 AM Jun 29, 2018 | |

ಬೆಂಗಳೂರು: ಕೆರೆ, ರಾಜಕಾಲುವೆ ಬಫ‌ರ್‌ ಝೋನ್‌ ವ್ಯಾಪ್ತಿ ಹಾಗೂ ಅಕ್ರಮ-ಸಕ್ರಮ ಪ್ರಕರಣ ಸಂಬಂಧ ಮೇಲ್ಮನವಿ ಸಲ್ಲಿಸುವಂತೆ ಮೇಯರ್‌ ಆರ್‌.ಸಂಪತ್‌ರಾಜ್‌ ಕಾನೂನು ಕೋಶಕ್ಕೆ ಸೂಚಿಸಿದರು. ಬಿಬಿಎಂಪಿಯ ಮಾಸಿಕ ಸಭೆಯಲ್ಲಿ ಮಾತನಾಡಿದರು.

Advertisement

ಸರ್ಕಾರ ಕೆರೆ ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆಗೆ ತಿದ್ದುಪಡಿ ಪ್ರಕಾರ ಕೆರೆಯಂಚಿನಿಂದ 30 ಮೀ.ಗಳಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸಬಹುದಾಗಿದೆ. ಆದರೆ, ನಗರ, ಪಟ್ಟಣ ಯೋಜನಾ ಕಾಯ್ದೆಯಂತೆ ಕೆರೆಯಿಂದ 30 ಮೀ.ಗಳಲ್ಲಿ ಯಾವುದೇ ಕಾಮಗಾರಿ ನಡೆಸುವಂತಿಲ್ಲ. ಈಗ ಯಾವುದನ್ನು ಪಾಲಿಸಬೇಕು ಎಂಬ ಗೊಂದಲ ಜನರಲ್ಲಿ ಮೂಡಿದ್ದು, ಇದನ್ನೆ ಲಾಭವಾಗಿಸಿಕೊಂಡು ಬಿಡಿಎ ಹವಣಿಸುತ್ತಿದೆ ಎಂಬ ಮಾತು ಕೇಳಿಬರುತ್ತಿದೆ ಎಂದರು.

ಕೆರೆಯಿಂದ 75 ಮೀ. ನಿರ್ಬಂಧ ಪ್ರದೇಶ ಜಾರಿಗೊಳಿಸಬೇಕಾದರೆ, ಅರ್ಧ ಬೆಂಗಳೂರನ್ನು ಒಡೆಯಬೇಕಾಗುತ್ತದೆ. ಹೀಗಾಗಿ ನ್ಯಾಯಾಲಯಕ್ಕೆ ಈ ಕುರಿತು ಮನವರಿಕೆ ಮಾಡಿಕೊಡಲು ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಇದಕ್ಕೆ ಆಯುಕ್ತ ಮಹೇಶ್ವರರಾವ್‌ ಪ್ರತಿಕ್ರಿಯಿಸಿ, ಈ ವಿಷಯವಾಗಿ ಬೆಂಗಳೂರು ನಗರಕ್ಕೆ ಪ್ರತ್ಯೇಕ ಕಾನೂನು ರೂಪಿಸುವಂತೆ ಸಂಬಂಧಪಟ್ಟ ಇಲಾಖೆಗೆ ಕೋರಲಾಗುವುದು ಎಂದರು.

ಇದಕ್ಕೆ ಧ್ವನಿಗೂಡಿಸಿದ ಮೇಯರ್‌, ರಾಜಕಾಲುವೆ ಸಂರಕ್ಷಿತ ವಲಯ, ಅಕ್ರಮ-ಸಕ್ರಮದಂತಹ ಪ್ರಕರಣದಲ್ಲಿನ ಗೊಂದಲ ನಿವಾರಣೆಗೆ ಹಾಗೂ ಶೀಘ್ರ ಇತ್ಯರ್ಥಕ್ಕೆ ಅರ್ಜಿ ಸಲ್ಲಿಸುವಂತೆ ಕಾನೂನು ವಿಭಾಗಕ್ಕೆ ಸೂಚಿಸಿದರು. ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಪದ್ಮನಾಭರೆಡ್ಡಿ, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ), ಕೆರೆಗಳ ಅಂಚಿನಿಂದ 75 ಮೀ. ವ್ಯಾಪ್ತಿ ಬಫ‌ರ್‌ ವ್ಯಾಪ್ತಿ ಕಾಯ್ದುಕೊಳ್ಳಬೇಕೆಂಬ ಆದೇಶ ಬೆಂಗಳೂರಿಗೆ ಮಾತ್ರ ಅನ್ವಯವಾಗುತ್ತದೆ. ಈ ಆದೇಶದಿಂದ ಈಗಾಗಲೇ ಕಟ್ಟಡ ನಿರ್ಮಿಸಿರುವವರಿಗೆ ಕಟ್ಟಡ ನವೀಕರಣಕ್ಕಾಗಿ ಪಾಲಿಕೆಯಿಂದ ನಕ್ಷೆ ನೀಡಲಾಗುತ್ತಿಲ್ಲ ಎಂದರು.

ಆರ್‌ಐ, ಆರ್‌ಒಗಳ ವರ್ಗಾವಣೆ: ತೆರಿಗೆ ವಸೂಲಿ ಹಾಗೂ ಆರ್‌ಐ, ಆರ್‌ಒಗಳ ಕರ್ತವ್ಯ ಲೋಪದ ಬಗ್ಗೆ ಪ್ರಸ್ತಾಪಿಸಿದ ಮೇಯರ್‌, ಹಲವಾರು ವರ್ಷಗಳಿಂದ ಒಂದೇ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿರುವ ಆರ್‌ಐ ಮತ್ತು ಆರ್‌ಒಗಳ ವರ್ಗಾವಣೆ ಮಾಡಬೇಕಿದೆ.

Advertisement

ಕಳೆದೆರಡು ವರ್ಷಗಳ ಹಿಂದೆ ವರ್ಗಾವಣೆಯಾದಂತಹ ಆರ್‌ಐ ಮತ್ತು ಎಆರ್‌ಒಗಳು ತಿಂಗಳಾಗುವುದರೊಳಗೆ ಹಿಂದಿನ ಸ್ಥಳಕ್ಕೆ ವಾಪಸಾಗಿದ್ದು, ಅಂತಹವರನ್ನು ವರ್ಗಾವಣೆ ಮಾಡಬೇಕಿದೆ ಎಂದರು. ಸ್ಥಾಯಿ ಸಮಿತಿಗಳ ಅಧಿಕಾರ ವ್ಯಾಪ್ತಿ ಹೆಚ್ಚಿಸಲು ಕೆಎಂಸಿ ಕಾಯ್ದೆಗೆ ತಿದ್ದುಪಡಿ ತರಲು, ಉಪಸಮಿತಿ ರಚಿಸಬೇಕೆಂಬ ಬೇಡಿಕೆಯಿದೆ. ಈ ಕುರಿತು ಸಮಗ್ರ ಚರ್ಚೆ ನಡೆಸಿ ಉಪಸಮಿತಿ ರಚಿಸಲಾಗುವುದು ಎಂದರು.

ಕಾಂಪ್ಯಾಕ್ಟರ್‌ ಲೆಕ್ಕಕ್ಕೆ ಸಿಗುತ್ತಿಲ್ಲ: ಆಟೋ ಟಿಪ್ಪರ್‌ ಹಾಗೂ ಕಾಂಪ್ಯಾಕ್ಟರ್‌ಗಳ ಲೆಕ್ಕ ಸರಿಯಾಗಿ ಸಿಗುತ್ತಿಲ್ಲ. ಹೀಗಾಗಿ ಅವುಗಳ ಪರಿಶೀಲನೆಗೆ ಮುಂದಾಗಿದ್ದು, ಎಲ್ಲ ಆಟೋ ಟಿಪ್ಪರ್‌ ಮತ್ತು ಕಾಂಪ್ಯಾಕ್ಟರ್‌ಗಳಿಗೆ ಜಿಪಿಎಸ್‌ ಅಳವಡಿಸಲು ನಿರ್ಧರಿಸಲಾಗಿದೆ.

ಆದರೆ, ವಾಹನಗಳ ಬಗ್ಗೆ ಲೆಕ್ಕ ಸಿಕ್ಕಿಲ್ಲ ಎಂದು ಜಂಟಿ ಆಯುಕ್ತ ಸಫ್ರಾಜ್‌ ಖಾನ್‌ ಸ್ಪಷ್ಟನೆ ನೀಡಿದರು.  ಇದಕ್ಕೂ ಮೊದಲು ಕಸ ವಿಲೇವಾರಿ ಮಾಡುವ ಕಾಂಪಾಕ್ಟರ್‌ ಹಾಗೂ ಆಟೋ ಟಿಪ್ಪರ್‌ಗಳ ನಾಪತ್ತೆ ಪ್ರಕರಣದ ಬಗ್ಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಈ ಕುರಿತು ಉತ್ತರ ನೀಡುವಂತೆ ಆಗ್ರಹಿಸಿದ್ದರು. 

ಪ್ರತ್ಯೇಕ ಮುಖ್ಯ ಇಂಜಿನಿಯರ್‌: ನಗರದಲ್ಲಿ ರಸ್ತೆಗುಂಡಿ ಹಾಗೂ ಕಸದ ಸಮಸ್ಯೆ ನಿವಾರಣೆಗಾಗಿ ಒಬ್ಬರು ಪ್ರತ್ಯೇಕ ಮುಖ್ಯ ಎಂಜಿನಿಯರ್‌ ಅನ್ನು ನೇಮಿಸಲಾಗುವುದು. ಆ ಮೂಲಕ ಸಮಪರ್ಕವಾಗಿ ರಸ್ತೆಗುಂಡಿಗಳ ದುರಸ್ತಿ, ಬ್ಲಾಕ್‌ಸ್ಪಾಟ್‌ಗಳ ತೆರವು ಸೇರಿದಂತೆ ಇತರೆ ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳಲಾಗುವುದು ಎಂದ ಮೇಯರ್‌, ಮುಂದಿನ 15 ದಿನಗಳಲ್ಲಿ ನಗರದಲ್ಲಿನ ಎಲ್ಲ ರಸ್ತೆಗುಂಡಿಗಳನ್ನು ದುರಸ್ತಿಗೊಳಿಸಬೇಕು ಎಂದು ಸೂಚಿಸಿದರು.

ಶಾಸಕರ ವಿರುದ್ಧ ದೂರು: ಪಾಲಿಕೆ ಸಭೆಯಲ್ಲಿ ಮಾಜಿ ಮೇಯರ್‌ ಸೇರಿದ ಮೂವರು ಮಹಿಳಾ ಸದಸ್ಯರು ಶಾಸಕರುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿ.ಪದ್ಮಾವತಿ ರಾಜಾಜಿನಗರ ಶಾಸಕ ಸುರೇಶ್‌ಕುಮಾರ್‌, ಲಗ್ಗೆರೆ ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಆರ್‌.ಆರ್‌.ನಗರ ಶಾಸಕ ಮುನಿರತ್ನ ಹಾಗೂ ಪೀಣ್ಯ ಕೈಗಾರಿಕಾ ಪ್ರದೇಶ ವಾರ್ಡ್‌ ಸದಸ್ಯೆ ಲಲಿತಾ ಅವರು ದಾಸರಹಳ್ಳಿ ಶಾಸಕ ಮಂಜುನಾಥ್‌ ವಿರುದ್ಧ ದೂರಿದರು. 

ಶಾಸಕರು ತಮ್ಮ ವಾರ್ಡ್‌ಗಳಲ್ಲಿ ನಡೆಸಲಾಗುತ್ತಿರುವ ಅಭಿವೃದ್ಧಿಗೆ ಕಾಮಗಾರಿಗಳಿಗೆ ತಡೆಯೊಡ್ಡುತ್ತಿದ್ದು, ಈಗಾಗಲೇ ಆರಂಭಿಸಿರುವ ಕೆಲಸಗಳನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಆರೋಪಿಸಿದರು. ಅದಕ್ಕೆ ಉತ್ತರಿಸಿದ ಮೇಯರ್‌, ಅಧಿಕಾರಿಗಳು ಶಾಸಕರು ಮತ್ತು ಸದಸ್ಯರ ನಡುವೆ ಕೊಂಡಿಯಾಗಿ ಕೆಲಸ ಮಾಡಬೇಕೆ ಹೊರತು, ರಾಜಕಾರಣಿಗಳಂತೆ ವರ್ತಿಸಬಾರದು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಶಾಸಕರ ಕಿರುಕುಳ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ – ಜೆಡಿಎಸ್‌ ಸದಸ್ಯರು ನಡುವಿನ ವಾಗ್ವಾದ ತಾರಕಕ್ಕೇರಿದದಾಗ ಬಿಜೆಪಿ ಸದಸ್ಯರು, ಜನರ ಸಮಸ್ಯೆ ಬಗ್ಗೆ ಚರ್ಚೆಗೆ ಬದಲು ಕಿತ್ತಾಟಕ್ಕೆ ಸಭೆಯನ್ನು ಬಲಿ ಮಾಡುತ್ತಿದ್ದೀರಾ ಎಂದು ಆರೋಪಿಸಿ ಸಭಾತ್ಯಾಗ್ಯ ಮಾಡಿದರು. ಪಾಲಿಕೆ ಸದಸ್ಯರ ಮೇಲೆ ಕ್ರಿಮಿನಲ್‌ ಮೊಕದ್ದಮೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.

ನಕಲಿ ಮತದಾರರ ಸರ್ವೆ: ಮಾಜಿ ಮೇಯರ್‌ ಪದ್ಮಾವತಿ ಅವರು, ವಿಧಾನಸಭೆ ಚುನಾವಣೆ ವೇಳೆ ಇಸ್ಕಾನ್‌ನ 180 ಸಿಬ್ಬಂದಿ ನಕಲಿ ಮತದಾನ ಮಾಡಿದ್ದಾರೆ. ಹೀಗಾಗಿ ನಕಲಿ ಮತದಾರರಿಗೆ ಕಡಿವಾಣ ಹಾಕಲು ಕ್ರಮಕೈಗೊಳ್ಳಬೇಕಿದೆ ಎಂದರು. ಅದಕ್ಕೆ ಸ್ಪಂದಿಸಿದ ಮೇಯರ್‌, ಮತದಾರರ ಗುರುತಿನ ಚೀಟಿಯಲ್ಲಿನ ಲೋಪಗಳು ಹಾಗೂ ನಕಲಿ ಮತದಾರರ ಪತ್ತೆಗೆ ಸರ್ವೆ ನಡೆಸುವ ಸಂಬಂಧ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next