ಹುಣಸೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ರಸ್ತೆ ಬದಿ ಅಂಗಡಿಗಳು, ಫಾಸ್ಟ್‌ಫುಡ್‌ಗಳನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಆದರೆ, ಬೀದಿಬದಿ ವ್ಯಾಪಾರಿಗಳು ಇದಕ್ಕೆ ಪರ-ವಿರೋಧ ನಿಲುವು ವ್ಯಕ್ತಪಡಿಸಿದ್ದಾರೆ.
ಶಾಸಕ ಎಚ್.ಪಿ. ಮಂಜುನಾಥ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ತುರ್ತು ಸಭೆಯಲ್ಲಿ ಆರೋಗ್ಯಾಧಿಕಾರಿಗಳ ಸಲಹೆ ಮೇರೆಗೆ ತಾಲೂಕಿನಾದ್ಯಂತ ರಸ್ತೆ ಬದಿಯ ಫಾಸ್ಟ್‌ಫುಡ್, ಗೋಬಿಮಂಚೂರಿ, ಪಾನಿಪುರಿ ಅಂಗಡಿಗಳನ್ನು ಬಂದ್ ಮಾಡಬೇಕೆಂಬ ಸೂಚನೆಯಂತೆ ಭಾನುವಾರ ಎಲ್ಲಡೆ ರಸ್ತೆ ಬದಿ ವ್ಯಾಪಾರಿಗಳು ಸ್ಪಂದಿಸಿ ಬಂದ್ ಮಾಡಿದ್ದರು.
ಈ ನಡುವೆ, ಭಾನುವಾರ ನಗರದ ಮುನೇಶ್ವರ ದೇವಾಲಯದ ಸಮುದಾಯ ಭವನದಲ್ಲಿ ರಾಜ್ಯ ರಸ್ತೆ ಬದಿ ವ್ಯಾಪಾರಿಗಳ ಸಂಘದ ಜಂಟಿ ಕಾರ್ಯದರ್ಶಿ ಎಚ್.ಸಿ.ಮಂಜುನಾಥ್ ಅಧ್ಯಕ್ಷತೆಯಲ್ಲಿ ನೂರಕ್ಕೂ ಹೆಚ್ಚು ಫುಟ್‌ಪಾತ್ ವ್ಯಾಪಾರಿಗಳ ಸಭೆ ನಡೆಸಲಾಯಿತು.
ತಾಲೂಕು ಆಡಳಿತ ಹಾಗೂ ನಗರಸಭೆಯ ಸೂಚನೆಯಂತೆ ವ್ಯಾಪಾರ ಬಂದ್ ಮಾಡುವ ಬಗ್ಗೆ ಸಭೆಯಲ್ಲಿ ಪರ-ವಿರೋಧ ವ್ಯಕ್ತವಾಯಿತು. ಕೆಲಕಾಲ ಗೊಂದಲವೂ ಉಂಟಾಯಿತು. ಈ ವೇಳೆ, ಹಲವರು ವ್ಯಾಪಾರ ನಿಲ್ಲಿಸಿದರೆ ಜೀವನ ನಡೆಸುವುದು, ಬಾಡಿಗೆ ಕಟ್ಟುವುದು, ಕಾರ್ಮಿಕರಿಗೆ ಸಂಬಳ ನೀಡಲು ಕಷ್ಟವಾಗಲಿದೆ ಎಂದು ಅಳಲು ತೋಡಿಕೊಂಡರು.
ಕೆಲವರು, ದೇಶದೆಲ್ಲೆಡೆ ಕೊರೊನಾ ವೈರಸ್ ಹರಡುವ ಭೀತಿಯಿಂದ ಎಲ್ಲಾÉ ವಹಿವಾಟುಗಳನ್ನು ಸ್ಥಗಿತಗೊಳಿಸಿದ್ದಾರೆ, ನಮ್ಮ ಹಾಗೂ ನಮ್ಮ ಕುಟುಂಬಗಳ ಭವಿಷ್ಯದ ದೃಷ್ಟಿಯಿಂದ ವಾರ ಕಾಲ ವ್ಯಾಪಾರ ಸ್ಥಗಿತಗೊಳಿಸುವುದು ಒಳಿತು ಎಂದು ತಿಳಿಸಿದರು. ಇದಕ್ಕೆ ಬಹುತೇಕರು ವಿರೋಧ ವ್ಯಕ್ತಪಡಿಸಿ ವ್ಯಾಪಾರ ನಡೆಸೋಣ ಎಂದು ಸಭೆಯಿಂದ ನಿರ್ಗಮಿಸಿದ್ದರಿಂದ ಸೋಮವಾರ ಯಾವ ನಿರ್ಧಾರ ಕೈಗೊಳ್ಳುವರೋ ಎಂಬುದನ್ನು ಕಾದು ನೋಡಬೇಕಿದೆ.
ಸರಕಾರದ ಸೂಚನೆಯಂತೆ ಮುನ್ನೆಚ್ಚರಿಕೆಯಾಗಿ ನಗರಸಭೆಯ ಮೂರು ಆಟೋಗಳಲ್ಲಿ ಕೊರೊನಾ ವೈರಸ್ ಮುನ್ನೆಚ್ಚರಿಕೆ ಬಗ್ಗೆ ಪ್ರಚಾರ ನಡೆಸಿ ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲೆಡೆ ಸ್ವತ್ಛತೆಗೆ ಆದ್ಯತೆ ನೀಡಲಾಗಿದೆ, ಮನೆಗಳವರು, ವ್ಯಾಪಾರಸ್ಥರು ನಗರಸಭೆಯೊಂದಿಗೆ ಸಹಕಾರ ನೀಡಬೇಕು ಎಂದು ಹಿರಿಯ ಆರೋಗ್ಯ ನಿರೀಕ್ಷಕ ಸತೀಶ್ ತಿಳಿಸಿದರು.
ಕೊರೋನಾ ವೈರಸ್ ಮುನ್ನೆಚ್ಚರಿಕೆಯಾಗಿ ನಗರದಾದ್ಯಂತ ಇರುವ ಫುಟ್‌ಪಾತ್ ವ್ಯಾಪಾರಿಗಳು, ರಸ್ತೆ ಬದಿಯ ಎಲ್ಲಾ ಅಂಗಡಿಗಳನ್ನು ಮುಚ್ಚುವಂತೆ ಮನವಿ ಮಾಡಲಾಗಿದೆ. ವ್ಯಾಪಾರಸ್ಥರು ಸಹಕಾರ ನೀಡಬೇಕು. ಪರವಾನಗಿ ಇಲ್ಲದ, ಸ್ವತ್ಛತೆಗೆ ಆದ್ಯತೆ ನೀಡದಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು.
-ಮಂಜುನಾಥ್, ನಗರಸಭೆ ಪ್ರಭಾರ ಪೌರಾಯುಕ್ತ