ಲಿಂಗಪ್ಪಯ್ಯಕಾಡು : ಆಕಸ್ಮಿಕವಾಗಿ ಪ್ರಕೃತಿ ವಿಕೋಪದಿಂದ ಮನೆಗಳಿಗೆ ಹಾನಿಯಾದಲ್ಲಿ ಕಂದಾಯ ಇಲಾಖೆಯು ಶೀಘ್ರವಾಗಿ ಸ್ಪಂದಿಸಬೇಕು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ತಹಶೀಲ್ದಾರರಿಗೆ ತಲುಪಿಸಿದಲ್ಲಿ ಸರಕಾರದ ನೆರವಿನ ಹಣವು
ಫಲಾನುಭವಿಗಳಿಗೆ ಸೂಕ್ತ ಸಮಯದಲ್ಲಿ ಕೈ ಸೇರುವಂತಾಗಲು ಪ್ರಾಮಾಣಿಕ ಪ್ರಯತ್ನ ನಡೆಸಿ ಎಂದು ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು.
ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಲಿಂಗಪ್ಪಯ್ಯ ಕಾಡಿನ ನಿವಾಸಿ ಸಿದ್ದಮ್ಮ ಎಂಬವರ ಮನೆಯು ಇತ್ತೀಚೆಗೆ ಮಳೆಯಿಂದ ಹಾನಿಯಾದ ಹಿನ್ನೆಲೆಯಲ್ಲಿ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಕಂದಾಯ ಇಲಾಖೆಯ ಅಧಿ ಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಬಡವರ್ಗದ ಕಾರ್ಮಿಕರೇ ಇರುವ ಈ ಪ್ರದೇಶದಲ್ಲಿ ಸರಕಾರದಿಂದ ಹಲವಾರು ಯೋಜನೆಗಳ ಅನುದಾನವು ಈಗಾಗಲೇ ಬಿಡುಗಡೆಯಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಸಹ ಇಲ್ಲಿನ ಸಮಸ್ಯೆಗಳಿಗೆ ಧ್ವನಿಯಾಗಿ ಅದನ್ನು ನಿವಾರಿಸುವಲ್ಲಿ ಶ್ರಮಿಸಬೇಕು ಎಂದರು.
ಕಾಂಗ್ರೆಸ್ ಸೇವಾದಳದ ನಾಯಕ ಭೀಮಾಶಂಕರ್ ಆರ್.ಕೆ., ಕಾಂಗ್ರೆಸ್‌ನ ಸ್ಥಳೀಯ ನಾಯಕರಾದ ಮಂಜುನಾಥ ಕಂಬಾರ, ಬಸವರಾಜ ಹರವಾಳ, ವೀರೇಸ್ವಾಮೀ ಹಿರೇಮಠ್, ಉದ್ಯಮಿ ಶರವು, ಅಜೀಜ್ ಕೆ.ಎಸ್.ರಾವ್.ನಗರ, ಸಾಮಾಜಿಕ ಕಾರ್ಯಕರ್ತ ಮಂಜುನಾಥ ಆರ್.ಕೆ., ಮೂಲ್ಕಿ ವಿಶೇಷ ತಹಶೀಲ್ದಾರ್ ಕಚೇರಿಯ ಕಂದಾಯ ನಿರೀಕ್ಷಕ ದಿಲೀಪ್ ರಾಥೋಡ್ ಉಪಸ್ಥಿತರಿದ್ದರು.