ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಈ ಹಿಂದೆ ಇದ್ದ ಸ್ಥಳದಲ್ಲೇ ಜಿಲ್ಲಾ ಆಸ್ಪತ್ರೆಯನ್ನು ತುರ್ತಾಗಿ ಆರಂಭಿಸುವಂತೆ ವಸತಿ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ, ಜಿಲ್ಲೆಯಲ್ಲಿ ಮಳೆ ಪ್ರವಾಹದಿಂದ ಆಗಿರುವ ಹಾನಿ, ಪರಿಹಾರ ಕ್ರಮಗಳ ಸಂಬಂಧ ನಡೆದ ಸಭೆಯ ವೇಳೆ ಸಚಿವರು ಈ ಸೂಚನೆ ನೀಡಿದರು. ಈ ಹಿಂದಿನ ಸಭೆಯಲ್ಲಿಯೇ ಜಿಲ್ಲಾ ಆಸ್ಪತ್ರೆ ನಗರದ ಕೇಂದ್ರ ಭಾಗದಲ್ಲಿಯೇ ಈ ಹಿಂದೆ ಇದ್ದಂತೆಯೇ ಆರಂಭಿಸುವ ನಿಟ್ಟಿನಲ್ಲಿ ಸೂಕ್ತ ಸಮಾಲೋಚನೆ ನಡೆಸುವಂತೆ ಸೂಚಿಸಿದ್ದೆ. ಈ ಸಂಬಂಧ ಏನು ಕ್ರಮಗಳಾಗಿವೆ ಎಂದು ಸಚಿವರು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.
ವೈದ್ಯರು, ಸಿಬ್ಬಂದಿಯನ್ನು ಮತ್ತೆ ವಾಪಸ್ ನಿಯೋಜಿಸಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ ಉತ್ತರಿಸಿ ಆಸ್ಪತ್ರೆ ಆರಂಭ ಸಂಬಂಧ ಸಭೆ ನಡೆಸಲಾಗಿದೆ. ಚಾಮರಾಜ ನಗರ ಜಿಲ್ಲಾ ವೈದ್ಯಕೀಯ ಕಾಲೇಜಿನ ಬೋಧನಾ ಆಸ್ಪತ್ರೆಯಲ್ಲಿ ನಿಯೋಜನೆ ಗೊಂಡಿರುವ ಜಿಲ್ಲಾ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಯನ್ನು ಮತ್ತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವಾಪಸ್ಸು ನಿಯೋಜಿಸಿದಲ್ಲಿ ಆಸ್ಪತ್ರೆ ನಿರ್ವಹಣೆ ಮಾಡಬಹುದಾಗಿದೆ ಎಂದರು.
ಜಿಲ್ಲಾ ಆಸ್ಪತ್ರೆಯನ್ನು ಕೂಡಲೇ ಆರಂಭಿಸಿ: ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ ಈಗಿರುವ ವೈದ್ಯಕೀಯ ಕಾಲೇಜಿನ ಬೋಧನಾ ಆಸ್ಪತ್ರೆ ಪಟ್ಟಣದಿಂದ 7 ಕಿ.ಮೀ ದೂರದಲ್ಲಿದೆ. ತುರ್ತು ಸಂದರ್ಭಗಳಲ್ಲಿ ಜನರಿಗೆ ತೀವ್ರ ಅನಾನುಕೂಲವಾಗುತ್ತಿದೆ. ಮೆಡಿಕಲ್ ಕಾಲೇಜು ಬೋಧನಾ ಆಸ್ಪತ್ರೆಗೆ ಪ್ರತ್ಯೇಕ ವ್ಯವಸ್ಥೆಯಾಗಲಿ. ಈ ಹಿಂದೆ ನಗರದ ಮುಖ್ಯ ಭಾಗದಲ್ಲಿ ಇದ್ದಂತೆಯೇ ಜಿಲ್ಲಾ ಆಸ್ಪತ್ರೆಯನ್ನು ಕೂಡಲೇ ಆರಂಭಿಸಿ. ವೈದ್ಯರು ಮತ್ತು ಸಿಬ್ಬಂದಿಯನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿ ಎಂದು ಸೂಚಿಸಿದರು.
ಜಿಲ್ಲಾಸ್ಪತ್ರೆಯನ್ನು ಮುಚ್ಚದೇ ಹಿಂದಿ ನಂತೆಯೇ ನಡೆಸಿಕೊಂಡು ಹೋಗಬೇಕು. ಈ ಸಂಬಂಧ ಜಿಲ್ಲಾಧಿಕಾರಿಯವರು ಸೂಕ್ತ ಕ್ರಮ ಕೈಗೊಳ್ಳಬೇಕು. ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದರೂ ಅದನ್ನು ಬಗೆ ಹರಿಸಿಕೊಡುತ್ತೇನೆ ಎಂದರು.
ಸರ್ಕಾರಿ ವೈದ್ಯಕೀಯ ಕಾಲೇಜಿನ ಡೀನ್ ಡಾ. ಸಂಜೀವ್ ಇದಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಲು ಸೂಚನೆ ನೀಡಬೇಕೆಂದು ಹೇಳಿದರು.
ಇದರಿಂದ ಸಿಟ್ಟಿಗೆದ್ದ ಸೋಮಣ್ಣ, ಈ ಸಂಬಂಧ ಈಗಾಗಲೇ ಮಾತನಾಡಿದ್ದೇನೆ. ನೀವು ಮೊದಲು 6 ತಿಂಗಳು ರಜೆ ಹಾಕಿ ಹೋಗಿ. ಆಗ ಎಲ್ಲ ಸರಿ ಹೋಗುತ್ತದೆ ಎಂದು ಕಿಡಿಕಾರಿದರು. ಈ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಇದ್ದಂತಹ ಸಿಬ್ಬಂದಿ ನಿಯೋಜಿಸಿ, ಕೆಲಸ ನಡೆಯಲಿ. ಆ ನಂತರ ಏನೇ ಸಮಸ್ಯೆ ಬಂದರೂ ಬಗೆ ಹರಿಸುವುದಾಗಿ ಉಸ್ತುವಾರಿ ಸಚಿವರು ಹೇಳಿದರು.