ಕಲಬುರಗಿ: ಜಿಲ್ಲಾಮಟ್ಟದಲ್ಲಿ ಆಯಾ ಇಲಾಖೆಗಳಿಗೆ 2021-22 ಸಾಲಿನಲ್ಲಿ ಕರ್ನಾಟಕ ಅನುಸೂಚಿತ ಜಾತಿ ಉಪಯೋಜನೆ ಮತ್ತು ಅನುಸೂಚಿತ ಬುಡಕಟ್ಟುಗಳ ಉಪಯೋಜನೆ ಅಡಿಯಲ್ಲಿ ಬಿಡುಗಡೆ ಮಾಡಿರುವ ಅನುದಾನವನ್ನು ಖರ್ಚು ಮಾಡದೆ ಉಳಿಸಿಕೊಂಡರೆ, ಅಂತಹ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ 2021-22 ಸಾಲಿನಲ್ಲಿ ಎಸ್‌ಸಿಪಿ ಹಾಗೂ ಟಿಎಸ್‌ಪಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
2021-22 ಸಾಲಿನ ಆರ್ಥಿಕ ವರ್ಷ ಇದೇ ಮಾರ್ಚ್ 31ಕ್ಕೆ ಅಂತ್ಯವಾಗುತ್ತಿದೆ. ಅಷ್ಟರೊಳಗೆ ಬಿಡುಗಡೆಯಾಗಿರುವ ಅನುದಾನ ಬಳಸಿಕೊಂಡು ನಿಗದಿತ ಗುರಿ ಸಾಧಿಸಬೇಕು. ಇಲ್ಲದಿದ್ದರೆ ಜಿಲ್ಲೆಯ ಮುಖ್ಯಸ್ಥರೇ ಹೊಣೆ ಯಾಗಲಿದ್ದು, ಕರ್ನಾಟಕ ಅನುಸೂಚಿತ ಜಾತಿ ಉಪಯೋಜನೆ ಮತ್ತು ಅನುಸೂಚಿತ ಬುಡಕಟ್ಟು (ಉಪ ಹಂಚಿಕೆ ಅನಿಯಮ-2013) ಮತ್ತು ನಿಯಮಗಳು-2017 ಕಾಯಿದೆ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಡಾ| ಬಿ.ಆರ್. ಅಂಬೇಡ್ಕರ್ ಅಭಿ ವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿರುವುದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ. ಆದರೆ, ಅನುದಾನ ಸರಿಯಾಗಿ ಖರ್ಚು ಮಾಡುತ್ತಿಲ್ಲ ಎಂದು ಉಭಯ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡ ಅವರು, ಶೀಘ್ರ ಫಲಾನುಭವಿಗಳ ಗುರುತಿಸಿ ಅನುದಾನ ಖರ್ಚು ಮಾಡ ಬೇಕೆಂದು ಸೂಚಿಸಿದರು.
ಹಾಗೆಯೇ ಇಲಾಖೆಗಳ ಪ್ರಗತಿ ಬಗ್ಗೆ ಅಂಕಿ-ಅಂಶಗಳ ಮಾಹಿತಿ ನೀಡದ ಇಲಾಖೆಗಳ ಅಧಿಕಾರಿಗಳಿಗೂ ನೋಟಿಸ್ ನೀಡುವಂತೆ ಸೂಚಿಸಿದರು. ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆ ಕಾಮಗಾರಿಗಳನ್ನು ನಿಗದಿ ಪಡಿಸಿದ ಸ್ಥಳದಲ್ಲಿ ನಡೆಸುತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಈ ಸಂಬಂಧ ನಿಗದಿತ ಸ್ಥಳದಲ್ಲಿಯೇ ಕಾಮಗಾರಿ ನಡೆಸಿರುವ ಬಗ್ಗೆ ಜಿಲ್ಲಾ ಇಲಾಖೆ ಮುಖ್ಯಸ್ಥರು ದೃಢೀಕರಣ ನೀಡಬೇಕು ಎಂದು ಸೂಚಿಸಿದರು.