ಧಾರವಾಡ: ಜಿಲ್ಲೆಯಲ್ಲಿ ನಿಪ ವೈರಾಣು ತಡೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದಿಂದ ಅಪರ ಜಿಲ್ಲಾಧಿ ಕಾರಿ ರಮೇಶ ಕಳಸದ ಅಧ್ಯಕ್ಷತೆಯಲ್ಲಿ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಗುರುವಾರ ಜರುಗಿತು.
ಜಿಲ್ಲಾ ಆರೋಗ್ಯಾಧಿಕಾರಿ ಡಾ| ಆರ್.ಎಂ. ದೊಡ್ಡಮನಿ ಮಾತನಾಡಿ, ಜಿಲ್ಲಾ ಸರಕಾರಿ ಆಸ್ಪತ್ರೆ, ಎಸ್‌ಡಿಎಂ, ಕೆಎಂಸಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ಗಳನ್ನು ತೆರೆಯಲು ಈಗಾಗಲೇ ಸಂಬಂಧಿಸಿದ ವೈದ್ಯಾ ಧಿಕಾರಿಗಳಿಗೆ ಸೂಚನೆ
ನೀಡಲಾಗಿದೆ. ಅಲ್ಲದೇ ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಕಾರ್ಯಕರ್ತರು ಮತ್ತು ಎಎನ್‌ಎಂ ಅವರಿಗೆ ತಿಳಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ನಿಪ ವೈರಾಣು ಕಂಡು ಬಂದಿಲ್ಲ. ನಿಫಾ ವೈರಾಣು ಕಂಡು ಬಂದಿರುವುದು ಕೇರಳ ರಾಜ್ಯದಲ್ಲಿ. ಅಲ್ಲಿಂದ ಧಾರವಾಡಕ್ಕೆ ವಲಸೆ ಬಂದವರು ಯಾರೂ ಇಲ್ಲ. ಸೋಂಕು ತಗುಲಿದ ಬಾವಲಿಗಳು ತಿಂದು ಬಿಟ್ಟ ಹಣ್ಣುಗಳನ್ನು ಹಂದಿ ಮತ್ತು ಇನ್ನಿತರ ಪ್ರಾಣಿಗಳು ಸೇವಿಸಿದರೆ ಅಂತಹ ಪ್ರಾಣಿಗಳಿಗೆ ತಗಲುತ್ತದೆ. ಆ ಪ್ರಾಣಿಗಳಿಂದ ಮಲ-ಮೂತ್ರ, ಜೊಲ್ಲು ಮತ್ತು ರಕ್ತದ ನೇರ ಸಂಪರ್ಕದಿಂದ ಮನುಷ್ಯರಿಗೆ ಹರಡುತ್ತದೆ ಎಂದು ತಿಳಿಸಿದರು. ಜ್ವರ, ತಲೆನೋವು, ತಲೆ ಸುತ್ತುವಿಕೆ, ಮಾನಸಿಕ ಗೊಂದಲ, ಜ್ಞಾನ ತಪ್ಪುವುದು ಸೋಂಕಿನ ಲಕ್ಷಣಗಳಾಗಿರುತ್ತವೆ. ಬಾವಲಿಗಳು ಹೆಚ್ಚಾಗಿರುವ ಪ್ರದೇಶಗಳಿಂದ ಸಂಗ್ರಹಿಸಿದ ಸೇಂದಿ, ನೀರಾ ಕುಡಿಯಬಾರದು. ಬಾವಲಿ ಕಚ್ಚಿದ ಹಣ್ಣನ್ನು ತಿನ್ನಬಾರದು. ಹಣ್ಣು-ಕಾಯಿ ಸ್ವಚ್ಛವಾಗಿ ತೊಳೆದು ತಿನ್ನಬೇಕು. ಶುದ್ಧತೆ ಕಾಪಾಡಿಕೊಳ್ಳಬೇಕು ಎಂದರು.
ಅರಣ್ಯ ಅಧಿಕಾರಿ ಮಹೇಶ ಮಾತನಾಡಿ, ಜಿಲ್ಲೆಯಲ್ಲಿ ಬಾವಲಿಗಳು ಸರ್ಕಾರಿ ಮುದ್ರಣಾಲಯ, ಪೊಲೀಸ್ ಹೆಡ್‌ಕ್ವಾರ್ಟರ್ಸ್, ಅರಣ್ಯ ಇಲಾಖೆ ಆವರಣ, ಬೇಡ್ತಿ ಹಳ್ಳ, ಕುಂಬಾರಗಣವಿ, ಕುಂಬಾರಗೊಪ್ಪ, ಕಲಘಟಗಿ ತಾಲೂಕಿನ ಕೂಡಲಗಿ, ಬೆಂಡಲ್‌ಗಟ್ಟಿ, ಸಿದ್ದನಭಾವಿ, ಕೆರೆವಾಡ, ಇಚನಹಳ್ಳಿ, ಲಕ್ಷ್ಮೀಗುಡಿ, ಹುಬ್ಬಳ್ಳಿ ತಾಲೂಕಿನಲ್ಲಿ ಕೆಎಂಸಿ ಆವರಣ, ದೇವಾಂಗಪೇಟೆ, ಅಂಚಟಗೇರಿಗಳಲ್ಲಿ ಬಾವಲಿಗಳು ಹೆಚ್ಚಾಗಿ ವಾಸಿಸುತ್ತವೆ ಎಂದು ತಿಳಿಸಿದರು. ಪಶು ಇಲಾಖೆಯ ಉಪನಿರ್ದೇಶಕ ಡಾ| ವಿಶಾಲ ಅಡಹಳ್ಳಿಕರ ಮಾತನಾಡಿ, ಧಾರವಾಡದಲ್ಲಿ ಯಾವುದೇ ಪ್ರಾಣಿ-ಪಕ್ಷಿಗಳಿಗೆ ನಿಪ ವೈರಾಣು ತಗುಲಿಲ್ಲ. ಜಿಲ್ಲೆಯಲ್ಲಿ ನಿಪ ವೈರಾಣು ಜಾಗೃತಿ ಕುರಿತು ಸಭೆಗಳನ್ನು ನಡೆಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ವಾಂತಿ ಭೇದಿ, ಡೆಂಘೀ ಜ್ವರದ ತಡೆಗಾಗಿ ಮುಂಜಾಗ್ರತಾ ಕಾರ್ಯಕ್ರಮ ಕೈಗೊಳ್ಳಲು ಪಾಲಿಸಬೇಕಾದ ಮಾಹಿತಿಗಳ ಬಗ್ಗೆ ಪಿಪಿಟಿ ಮೂಲಕ ಡಾ| ಶಿವಕುಮಾರ ಮಾವನಕರ ತಿಳಿಸಿದರು.
ಡಾ| ಪುಷ್ಪಾ, ಮಹಾನಗರ ಪಾಲಿಕೆ ವೈದ್ಯಾಧಿಕಾರಿ ಡಾ| ಪಿ.ಎನ್. ಬಿರಾದಾರ, ಡಾ| ಶೋಭಾ ಮೂಲಿಮನಿ, ಎಸ್‌ಡಿಎಂ ವೈದ್ಯಾ ಧಿಕಾರಿಗಳು, ಸಿವಿಲ್ ಆಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ| ಗಿರಿಧರ ಕುಕನೂರು ಮೊದಲಾದವರಿದ್ದರು.