Advertisement

ತಪ್ಪು ಮಾಹಿತಿ ನೀಡಿದವರಿಗೆ ನೋಟಿಸ್‌

07:25 AM Feb 12, 2019 | Team Udayavani |

ರಾಮನಗರ: ಕೆಡಿಪಿ ಸಭೆಗೆ ತಪ್ಪು, ಅಪೂರ್ಣ ಮಾಹಿತಿಯನ್ನು ನೀಡುವ ಅಧಿಕಾರಿಗಳ ವಿರುದ್ಧ ಕರ್ತವ್ಯ ಲೋಪದ ನೋಟಿಸ್‌ ಜಾರಿ ಮಾಡಬೇಕು ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಮುಲ್ಲೆ„ ಮುಹಿಲನ್‌ ಅವರು ಜಿಲ್ಲಾ ಪಂಚಾಯ್ತಿಯ ಉಪಕಾರ್ಯದರ್ಶಿ ಉಮೇಶ್‌ ಅವರಿಗೆ ಸೂಚನೆ ನೀಡಿದರು.

Advertisement

ನಗರದ ಜಿಪಂ ಭವನ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿ, ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡಿರುವ ಸರ್ಕಾರದ ಕಾರ್ಯಕ್ರಮಗಳ ಪ್ರಗತಿಯ ವರದಿಯಲ್ಲಿ ಆರ್ಥಿಕ ಮತ್ತು ಭೌತಿಕ ಪ್ರಗತಿಯ ಅಂಕಿ, ಅಂಶಗಳಲ್ಲಿ ವ್ಯತ್ಯಾಸಗಳು ಇರುವುದನ್ನು ಗಮನಿಸಿ, ಕೇಳಿದ ಸಮಜಾಯಿಷಿಗೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡದಿದ್ದ ರಿಂದ ಕೆಂಡಾಮಂಡಲರಾದ ಸಿಇಒ ಅವರು, ಕರ್ತವ್ಯ ಲೋಪದ ಆರೋಪದ ನೋಟಿಸ್‌ ಜಾರಿ ಮಾಡುವಂತೆ ಸೂಚನೆ ನೀಡಿದರು.

ಆರ್ಥಿಕ ಪ್ರಗತಿ ಶೇ.100, ಭೌತಿಕ ಪ್ರಗತಿ?: ಕೆಡಿಪಿ ಸಭೆಗೆ ವಿವಿಧ ಇಲಾಖೆಗಳು ನೀಡಿದ ಮಾಹಿತಿಯಲ್ಲಿ ವಿವಿಧ ಕಾರ್ಯಕ್ರಮಗಳ ಪ್ರಗತಿಯಲ್ಲಿ ಆರ್ಥಿಕ ಪ್ರಗತಿಯನ್ನು ಶೇ.100 ಎಂದು ತೋರಿಸಿದ್ದರು. ಆದರೆ, ಭೌತಿಕ ಪ್ರಗತಿಯ ಅಂಕಿ, ಅಂಶಗಳು ಅದಕ್ಕೆ ತಕ್ಕದಾಗಿರಲಿಲ್ಲ. ಹೀಗಾಗಿ ಸಿಇಒ ಅವರು ಅಂಕಿ, ಅಂಶಗಳು ತಾಳೆ ಆಗುತ್ತಿಲ್ಲ ಎಂದು ಅಧಿಕಾರಿಗಳಿಂದ ಉತ್ತರ ಬಯಸಿದರು.

ಆದರೆ, ಯಾವ ಅಧಿಕಾರಿಯೂ ಸಮರ್ಪಕ ಉತ್ತರ ನೀಡಲಿಲ್ಲ. ಇನ್ನೊಂದೆಡೆ ಪ್ರಗತಿಯನ್ನು ಶೇಕಡವಾರು ಅಂಕಿಗಳಲ್ಲಿ ಕೊಟ್ಟಿರಲಿಲ್ಲ, ಇದು ಜಾಣ್ಮೆಯ ತಪ್ಪ ಎಂದು ಸಿಇಒ ಅವರು ಗುಡುಗಿದರು. ಕೆಡಿಪಿ ಸಭೆಗೆ ಸರಿಯಾದ ಅಂಕಿ-ಅಂಶಗಳನ್ನು ನೀಡದ ಅಧಿಕಾರಿಗಳಿಗೆ ಕರ್ತವ್ಯ ಲೋಪದ ನೋಟಿಸ್‌ ಜಾರಿ ಮಾಡುವ ಕಠಿಣ ನಿರ್ಧಾರ ಕೈಗೊಂಡರು.

ಅಧಿಕಾರಿಗಳಿಗೆ ಸಿಇಒ ತರಾಟೆ: ಕಾರ್ಮಿಕ ಇಲಾಖೆಯ ಆಧಿಕಾರಿಗಳು ಪಿಎಫ್, ಇಎಸ್‌ಐ ನೀಡದ ಕಿಯೋನಿಕ್ಸ್‌ ವಿರುದ್ಧ ದೂರು ದಾಖಲಿಸುತ್ತಿರುವುದಾಗಿ ಹೇಳಿದರು. ಮಧ್ಯೆ ಪ್ರವೇಶಿಸಿದ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್‌, ಪಂಚಾಯತ್‌ ರಾಜ್‌ ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ಹೊರಗುತ್ತಿಗೆಯಲ್ಲಿರುವ ನೌಕರರಿಗೆ ಆರೇಳು ತಿಂಗಳಿಂದ ವೇತನ ಪಾವತಿಯಾಗಿಲ್ಲ ಎಂದರು.

Advertisement

ಈ ಮಾಹಿತಿಗೆ ಕೆರಳಿದ ಸಿಇಒ, ಆರ್‌ಡಿಪಿಆರ್‌ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಆರೇಳು ತಿಂಗಳು ಸಂಬಳ ಸಿಗದಿದ್ದರೆ, ಆ ನೌಕರರು ತಮ್ಮ ಕಟುಂಬಗಳನ್ನು ಹೇಗೆ ಪೋಷಿಸುತ್ತಾರೆ ಎಂದು ಪ್ರಶ್ನಿಸಿದರು. ಅಧಿಕಾರಿಗಳಿಗೆ ಸಂಬಳ ಸಿಗದಿದ್ದರೆ ಕೆಲಸ ಮಾಡ್ತೀರ ಎಂದು ತರಾಟೆಗೆ ತೆಗೆದುಕೊಂಡರು.

ಸಲಕರಣೆ ವಿತರಣೆಗೆ ಸೂಚನೆ: ರೇಷ್ಮೆ ಇಲಾಖೆಯ ಮೂಲಕ ಸಲಕರಣೆ ವಿತರಿಸುವ ಫ‌ಲಾನುಭವಿಗಳ ಪಟ್ಟಿಯನ್ನು ಆಯಾ ವ್ಯಾಪ್ತಿಯ ಜಿಪಂ ಸದಸ್ಯರ ಒಪ್ಪಿಗೆ ಪಡೆದು ವಿತರಿಸುವಂತೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಪಂ ಅಧ್ಯಕ್ಷ ಎಂ.ಎನ್‌.ನಾಗರಾಜ್‌ ಸೂಚನೆ ನೀಡಿದರು. ರೇಷ್ಮೆ ಇಲಾಖೆಯ ಮೂಲಕ ವಿತರಣೆಯಾಗುತ್ತಿರುವ ಸೋಲಾರ್‌ ಲೈಟ್‌ಗಳು ಕಳಪೆಯಾಗಿವೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್‌ ದೂರಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ದೊಡ್ಡ ಮರಳವಾಡಿ ಹಾಗೂ ಹಾರೋಹಳ್ಳಿಗೆ ಆ್ಯಂಬುಲೆನ್ಸ್‌ಗಳನ್ನು ಒದಗಿಸಲಾಗಿದೆ ಎಂದು ಡಿಎಚ್ಒ ಡಾ.ಅಮರನಾಥ್‌ ತಿಳಿಸಿದರು. ಜಿಪಂ ಉಪಕಾರ್ಯದರ್ಶಿ ಉಮೇಶ್‌, ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸ ಮೂರ್ತಿ, ಮುಖ್ಯ ಯೋಜನಾಧಿಕಾರಿ ದೀಪಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next