ಬೆಂಗಳೂರು: ವಿಶ್ವ ಪಾರಂಪರಿಕ ತಾಣವಾಗಿರುವ ಹಂಪಿಯಲ್ಲಿನ ಮೂಲಸೌಕರ್ಯಗಳನ್ನು ಉತ್ತಮಗೊಳಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚಿಸಿದೆ. ಹಾಗೆಯೇ ವಿಶ್ವ ಪಾರಂಪರಿಕ ತಾಣಗಳಲ್ಲಿ ಮೂಲ ಸೌಕರ್ಯ ವೃದ್ಧಿ ಸಂಬಂಧ ಸರ್ಕಾರ ಸದಾ ತಜ್ಞರ ಜೊತೆ ಸಮಾಲೋಚಿಸುತ್ತಿರಬೇಕು ಎಂದು ಸಲಹೆಯನ್ನು ನೀಡಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲದ ಸುತ್ತಮುತ್ತಲಿನ ಸಂರಕ್ಷಿತ ಪ್ರದೇಶಗಳಲ್ಲಿನ ಅಕ್ರಮ ಕಟ್ಟಡಗಳ ತೆರವು ಸಂಬಂಧ 2016ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ವೇಳೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರ ಮತ್ತು ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಮೌಖೀಕವಾಗಿ ಈ ಸಲಹೆಯನ್ನು ನೀಡಿದೆ.
ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯ ಪ್ರವಾಸಿ ತಾಣಗಳಿದ್ದು, ಅವುಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯ ವೃದ್ಧಿಗೆ ಅತ್ಯುತ್ತಮ ಪದ್ಧತಿಗಳನ್ನು ಸರಕಾರ ರೂಢಿಸಿಕೊಳ್ಳಬೇಕು. ಈ ರೀತಿ ಪ್ರವಾಸಿ ಸ್ಥಳಗಳಲ್ಲಿ ಉತ್ತಮ ಮೂಲಸೌಕರ್ಯಗಳನ್ನು ನೀಡಿದರೆ ಹೆಚ್ಚಿನ ಜನರು ಆ ತಾಣಗಳಿಗೆ ಭೇಟಿ ನೀಡುತ್ತಾರೆ, ಸಹಜವಾಗಿಯೇ ಸರಕಾರಕ್ಕೆ ಆದಾಯವೂ ಹೆಚ್ಚುತ್ತದೆ ಎಂದು ನ್ಯಾಯಪೀಠ ಹೇಳಿತು.
ಪ್ರವಾಸಿ ತಾಣಗಳಲ್ಲಿ ಉತ್ತಮ ಮೂಲಸೌಕರ್ಯ ವೃದ್ಧಿಯಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ, ಅದರಿಂದ ಸರಕಾರಕ್ಕೆ ಆದಾಯವೂ ವೃದ್ಧಿಯಾಗಲಿದೆ. ಆದ್ದರಿಂದ ಈ ಸಲಹೆಯನ್ನು ಸರಕಾರಕ್ಕೆ ಮುಟ್ಟಿಸುವಂತೆ ರಾಜ್ಯ ಅಡ್ವೊಕೇಟ್ ಜನರಲ್ ಗೆ ಸೂಚನೆ ನೀಡಿತು. ಇದೇ ವೇಳೆ ರಾಜ್ಯ ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮದಲ್ಲಿ ಹಿಂದುಳಿದಿದೆ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
Related Articles
ಕರ್ನಾಟಕ 1990ರ ದಶಕದಲ್ಲಿ ಪ್ರವಾಸೋದ್ಯಮದಲ್ಲಿ ನಂಬರ್ ಒನ್ ಸ್ಥಾನದಲ್ಲಿತ್ತು. ಈಗ ಬಹುಶಃ ಮಧ್ಯಪ್ರದೇಶ ಮೊದಲ ಸ್ಥಾನದ್ಲಲಿರಬೇಕು. ಐತಿಹಾಸಿಕ ಹಂಪಿಯಲ್ಲಿ ಸದ್ಯ ಇರುವ ಮೂಲಸೌಕರ್ಯ ಪ್ರವಾಸಿಗರಿಗೆ ಸಾಲುತ್ತಿಲ್ಲ, ಅಲ್ಲಿನ ಮೂಲಸೌಕರ್ಯಗಳನ್ನು ಸಾಕಷ್ಟು ಪ್ರಮಾಣದಲ್ಲಿ ಉನ್ನತೀಕರಿಸಬೇಕಿದೆ. ಈ ಮೂಲಸೌಕರ್ಯ ಕೊರತೆ ಸಮಸ್ಯೆ ಬಗ್ಗೆ ಸರಕಾರ ಏನಾದರೂ ಮಾಡಲೇಬೇಕಿದೆ ಎಂದು ನ್ಯಾಯಾಲಯ ಹೇಳಿತು.
ಸಣ್ಣ ರಾಷ್ಟ್ರಗಳೂ ಸಹ ತಮ್ಮ ಬಜೆಟ್ ನಲ್ಲಿ ಪ್ರವಾಸಿ ತಾಣಗಳ ಮೂಲಸೌಕರ್ಯ ಅಭಿವೃದ್ಧಿಗೆ ಹಣ ಮೀಸಲಿರಿಸುತ್ತವೆ. ಹಲವು ದೇಶಗಳು ಆದಾಯಕ್ಕೆ ಪ್ರವಾಸಿ ತಾಣಗಳನ್ನೇ ನೆಚ್ಚಿಕೊಂಡಿದೆ ಎಂದೂ ನ್ಯಾಯಾಲಯ ಅಭಿಪ್ರಾಯ ಪಟ್ಟಿತು.