ಹಾವೇರಿ: ಉದ್ಯೋಗ ಅರಸಿ ಜಿಲ್ಲೆಗೆ ಆಗಮಿಸಿ ನೆಲೆಸಿರುವ ಕಾರ್ಮಿಕರಿಗೆ ಹಾಗೂ ಇತರೆ ರಾಜ್ಯದ ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತದಿಂದ ಕಾರ್ಮಿಕ ಇಲಾಖೆ ಮೂಲಕ ಊಟದ ವ್ಯವಸ್ಥೆ, ದಿನಸಿ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ.
ಆದಾಗ್ಯೂ ಇನ್ನೂ ನೆರವಿನ ಅಗತ್ಯವಿರುವ ಕಾರ್ಮಿಕರನ್ನು ಗುರುತಿಸುವಂತೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ಸೂಚನೆ ನೀಡಿದರು.
ಈವರೆಗೆ ಅತ್ಯಗತ್ಯ ಆಹಾರ ಸಾಮಗ್ರಿ ದೊರೆಯದೆ ತೊಂದರೆಯಲ್ಲಿರುವ ವಲಸೆ ಕಾರ್ಮಿಕರು, ಭಿಕ್ಷುಕರು, ನಿರಾಶ್ರಿತರು, ಅಲೆಮಾರಿಗಳು, ರೈಲ್ವೆ ಕಾರ್ಮಿಕರು, ರಸ್ತೆ ಕೆಲಸ ಮಾಡುವ ಕಾರ್ಮಿಕರು, ಕ್ಷೌರಿಕರು, ಬ್ಯೂಟಿಪಾರ್ಲರ್, ಆಟೋ ಹಾಗೂ ವಿವಿಧ ಟ್ಯಾಕ್ಸಿ ಡ್ರೈವರ್ ಗಳು, ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ ಕಾರ್ಮಿಕರನ್ನು ಗುರುತಿಸಿ ಆಹಾರ ಸಾಮಗ್ರಿ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಈ ಕುರಿತು ತುರ್ತಾಗಿ ವರದಿ ನೀಡಬೇಕು ಎಂದರು.
ಕಾರ್ಮಿಕ ಇಲಾಖೆಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ, ವಲಸೆ ಕಾರ್ಮಿಕರಿಗೆ ಆಹಾರ ಸಾಮಗ್ರಿ ವಿತರಿಸಲಾಗಿದೆ. ಎರಡನೇ ಹಂತದಲ್ಲಿ ಅಗತ್ಯ ದಿನಸಿ ವಿತರಿಸಬೇಕಾಗಿದೆ. ಪಡಿತರ ಕಾರ್ಡ್ ಇಲ್ಲದೆ ದಿನಸಿಗಾಗಿ ತೊಂದರೆಪಡುತ್ತಿರುವ ಇತರ ಕಾರ್ಮಿಕರಿಗೂ ಆಹಾರ ಪದಾರ್ಥಗಳನ್ನು ಒದಗಿಸಲು ಉದ್ದೇಶಿಸಲಾಗಿದೆ.
ತಾಲೂಕಾವಾರು ಕಾರ್ಮಿಕರ ಪಟ್ಟಿ ಆಯಾ ತಹಶೀಲ್ದಾರ್ ಬಳಿ ಇದೆ. ಈ ಪಟ್ಟಿ ಆಧರಿಸಿ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪಟ್ಟಿಯಲ್ಲಿ ಇಲ್ಲದೆ ದಿನಸಿ ಅಗತ್ಯವಿರುವ ಕುಟುಂಬಗಳನ್ನು ಗುರುತಿಸಿ ವರದಿ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಸೂಚನೆ ನೀಡಿದರು. ಡಿಡಿಪಿಐ ಅಂದಾನೆಪ್ಪ ವಡಗೇರಿ, ಕಾರ್ಮಿಕ ಇಲಾಖಾಧಿಕಾರಿ ಲಲಿತಾ ಸಾತೇನಹಳ್ಳಿ, ಎಲ್ಲ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಮಾಜ ಕಲ್ಯಾಣಾಧಿಕಾರಿಗಳು ಇದ್ದರು.