Advertisement

ನಕ್ಷೆ ನೀಡಲು ಸೂಚನೆ; ಶೀಘ್ರ ಇತ್ಯರ್ಥಕ್ಕೆ ಡಿಸಿ ಆದೇಶ

07:47 PM Sep 29, 2020 | mahesh |

ಕುಂದಾಪುರ: ಕೋಡಿ ಸಮುದ್ರ ತೀರದಲ್ಲಿ ಅನೇಕ ವರ್ಷಗಳಿಂದ ವಾಸವಿರುವ 118 ಮೀನುಗಾರ ಕುಟುಂಬಗಳಿಗೆ ಸಿಆರ್‌ಝಡ್‌ ಪ್ರದೇಶ ಎಂದು 94ಸಿಸಿ ಹಕ್ಕುಪತ್ರ ನಿರಾಕರಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿದಿದ್ದು ಇದೀಗ ತಹಶೀಲ್ದಾರ್‌ ಸರ್ವೆ ಇಲಾಖೆಗೆ ನೋಟಿಸ್‌ ಮಾಡಿದ್ದಾರೆ.

Advertisement

ನಿಯಮ ಬದಲು
ಸಿಒಆರ್‌ಝೆಡ್‌ ತಿದ್ದುಪಡಿಯಾದ ನಿಯಮಗಳ ಪ್ರಕಾರ ಇವರಿಗೆ ಹಕ್ಕುಪತ್ರ ಪಡೆಯುವ ಅರ್ಹತೆಯಿದ್ದರೂ ತಾಲೂಕು ಆಡಳಿತದ ನಿಧಾನಗತಿಯ ಧೋರಣೆಯಿಂದ ಇಲ್ಲಿನ ನಿವಾಸಿಗಳಿಗೆ ಅನ್ಯಾಯವಾಗುತ್ತಿದೆ. ಸಿಆರ್‌ಝೆಡ್‌ ಇಲಾಖೆ ಕೂಡಾ ನಿರಾಕ್ಷೇಪಣಾ ಪತ್ರ ನೀಡಲು ಮಂದಗತಿ ಮಾಡುತ್ತಿತ್ತು. ಜನಪ್ರತಿನಿಧಿಗಳ ಮಧ್ಯಪ್ರವೇಶದ ಬಳಿಕ ಸಮಸ್ಯೆ ಒಂದಷ್ಟು ಸುಧಾರಿಸಿದೆ.

ಹಕ್ಕುಪತ್ರ ಇಲ್ಲ
ಕಳೆದ ಎರಡು ವರ್ಷಗಳಿಂದ 94ಸಿಸಿಗಾಗಿ ಇಲ್ಲಿನವರ ಅಲೆದಾಟ ನಿಂತಿಲ್ಲ. ಭೂಮಿ ಇದ್ದರೂ ದಾಖಲೆ ಇಲ್ಲ ಎಂಬ ಸ್ಥಿತಿ. ತಲೆತಲಾಂತರಗಳಿಂದ ಈ ಭಾಗದಲ್ಲಿ ಮೀನುಗಾರ ಕುಟುಂಬಗಳು ನೆಲೆಸಿದ್ದರೂ ಇನ್ನೂ ಸ್ವಂತ ನಿವೇಶನ ಹೊಂದಿಲ್ಲ. ಸಣ್ಣಪುಟ್ಟ ಮನೆಗಳಲ್ಲಿ ವಾಸಿಸುತ್ತಿದ್ದರೂ ಅದಕ್ಕೆ ದಾಖಲೆಗಳಿಲ್ಲ. ಹಾಗಾಗಿ ಇವರಿಗೆ ಸರಕಾರದ ವಸತಿ ಯೋಜನೆಗಳ ಪ್ರಯೋಜನ ಲಗಾವು ಆಗುವುದಿಲ್ಲ. ಬ್ಯಾಂಕಿನಿಂದ ಸಾಲ ತೆಗೆಯಲಾಗುವುದಿಲ್ಲ. ತಮ್ಮದೇ ಭೂಮಿ ಎಂದು ಹೇಳಿಕೊಳ್ಳುವಂತಿಲ್ಲ. ಹೇಳಿದರೂ ನೀಡಲು ದಾಖಲೆ ಏನೂ ಇಲ್ಲ.

ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ಪತ್ರ
ಇದೀಗ ತಹಶೀಲ್ದಾರರು ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ಪತ್ರ ಬರೆದು ಕೋಡಿಯ 118 ಜನರ ಅರ್ಜಿ ಇತ್ಯರ್ಥ ಪಡಿಸುವ ಸುಲವಾಗಿ ಮೋಜಣಿ ನಕ್ಷೆ ಒದಗಿಸಬೇಕು. ಇದಕ್ಕಾಗಿ ಫೆ.13ರಂದು ಈ ಕಚೇರಿಯಿಂದ, ಜು.24ರಂದು ಜಿಲ್ಲಾಧಿಕಾರಿ ಕಚೇರಿಯಿಂದಲೂ ಪತ್ರ ಬರೆಯಲಾಗಿದೆ. ಈವರೆಗೂ ಮೋಜಣಿ ನಕ್ಷೆ ನೀಡದ ಕಾರಣ ತತ್‌ಕ್ಷಣ ಒದಗಿಸಬೇಕು. ಜಮೀನಿನಲ್ಲಿ ಅಳತೆ ಮಾಡಿ ನಕ್ಷೆ ಒದಗಿಸಬೇಕು. ಜಿಲ್ಲಾಧಿಕಾರಿಗಳು ಈ ಪ್ರಕರಣವನ್ನು ವಿಳಂಬ ಮಾಡದಂತೆ ಸೂಚನೆ ನೀಡಿದ್ದಾರೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

“ಸುದಿನ’ ವರದಿ
94 ಸಿಸಿಯಲ್ಲಿ ಹಕ್ಕುಪತ್ರ ಪಡೆಯಲು ಪುರಸಭೆ ವ್ಯಾಪ್ತಿಯ ಕೋಡಿ ಪ್ರದೇಶದ 118 ಮಂದಿ ಅರ್ಜಿ ಸಲ್ಲಿಸಿದ್ದರೂ ಸಿಆರ್‌ಝೆಡ್‌ ಕಾರಣ ನೀಡಿ ನಿರಾಕರಿಸಲಾಗಿತ್ತು. ಸಿಆರ್‌ಝೆಡ್‌ ಕಾಯ್ದೆಯಲ್ಲಿ ಬದಲಾವಣೆಯಾದ ಕಾರಣ ಇವರಿಗೆ ಹಕ್ಕುಪತ್ರ ಪಡೆಯಲು ಅವಕಾಶ ಇದೆ ಎಂದು “ಉದಯವಾಣಿ’ “ಸುದಿನ’ ಜ.24ರಂದು ವರದಿ ಮಾಡಿತ್ತು. ಅದಾದ ಬಳಿಕ ಇವರ ಪೈಕಿ ಅನೇಕರಿಗೆ ಸಿಆರ್‌ಝೆಡ್‌ನಿಂದ ನಿರಾಕ್ಷೇಪಣಾ ಪತ್ರ ದೊರೆತಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next