Advertisement
ವಿಕಾಸಸೌಧದಲ್ಲಿ ಶನಿವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿ, ಮಂಡಳಿ ನಿರ್ಮಿಸುವ ಕಟ್ಟಡಗಳಿಗೆ ಜಿಐಎಸ್ ತಂತ್ರಜ್ಞಾನ ಅಳವಡಿಸುವ ಸಂಬಂಧ ಸಾಕಷ್ಟು ಸಲಹೆಗಳು ಬಂದಿದ್ದವು. ಇದನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ಅನುಷ್ಠಾನ ಮಾಡುವ ಸಲುವಾಗಿ ಅಧಿಕಾರಿಗಳು ಹಾಗೂ ಸಮಾಜಮುಖೀ ಸಂಸ್ಥೆಗಳ ಜತೆಗೆ ಸಭೆ ನಡೆಸಲಾಗಿದೆ ಎಂದರು.2007ರಲ್ಲಿ ಮಂಡಳಿ ರಚನೆ ಆದಾಗಿನಿಂದ ಇದುವರೆಗೆ ನಿರ್ಮಿಸಿರುವ ಕಟ್ಟಡಗಳ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಅಂದಿನಿಂದಲೇ ಯಾವುದೇ ಕಟ್ಟಡಗಳಿಗೆ ಜಿಐಎಸ್ ಅಳವಡಿಸಿಲ್ಲ. ಇದರಿಂದಾಗಿ ಸ್ಪಷ್ಟ ಮಾಹಿತಿಗಳು ಇಲಾಖೆಯಲ್ಲಿ ಇಲ್ಲದಂತಾಗಿದೆ. ಹೀಗಾಗಿ ಜಿಐಎಸ್ ಅಳವಡಿಸಲು ಸೂಚಿಸಲಾಗಿದೆ. ಇದರಿಂದ ಪ್ರತಿ ಕಟ್ಟಡದ ನಿರ್ಮಾಣ, ವಿನ್ಯಾಸ, ಅಳತೆ, ವಿಸ್ತೀರ್ಣ, ನಿಯಮ ಉಲ್ಲಂಘನೆಯಾಗಿದ್ದರೆ ಅದರ ಮಾಹಿತಿ ಕೂಡ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಸ್ತುತ ಮಂಡಳಿಗೆ ಸುಮಾರು 1 ಸಾವಿರ ಕೋಟಿ ರೂ. ಸೆಸ್ ಬರುತ್ತಿದೆ. ಸೂಕ್ತ ರೀತಿಯಿಂದ ಸಂಗ್ರಹಣೆ ಮಾಡಿದರೆ ಕನಿಷ್ಠ 2,000 ರಿಂದ 2,500 ಕೋಟಿ ರೂ. ಉಪಕರ ಸಂಗ್ರಹವಾಗುತ್ತದೆ. ಸೆಸ್ ಹೆಚ್ಚಳ ಮಾಡುವ ಅಗತ್ಯವಿಲ್ಲ. ಇರುವುದನ್ನು ಸಂಗ್ರಹಿಸಿದರೂ ದ್ವಿಗುಣಗೊಳ್ಳುತ್ತದೆ. ಅದಕ್ಕೆ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಕಟ್ಟುನಿಟ್ಟಿನ ಕ್ರಮ ವಹಿಸಲಾಗುತ್ತದೆ. ಮನಪಾ, ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಅಳವಡಿಕೆ ಸದ್ಯಕ್ಕೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ತಂತ್ರಜ್ಞಾನ ಅಳವಡಿಕೆ ಕಷ್ಟಸಾಧ್ಯವಿದ್ದು, ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಳವಡಿಸಲು ಚಿಂತನೆ ನಡೆಸಲಾಗಿದೆ. ಕಟ್ಟಡ ನಿರ್ಮಾಣದ ಯೋಜನ ನಕ್ಷೆಗೆ ಅನುಮೋದನೆ ಪಡೆದುಕೊಂಡ ಕೂಡಲೇ ಜಿಐಎಸ್ ಅಳವಡಿಸಿದರೆ, ನಕ್ಷೆಗೆ ತಕ್ಕ ವಿನ್ಯಾಸದೊಂದಿಗೆ ಕಟ್ಟಡ ನಿರ್ಮಾಣವೂ ಆಗುತ್ತದೆ. ಯಾವುದೇ ನಿಯಮ ಉಲ್ಲಂಘನೆಗೂ ಅವಕಾಶ ಇರುವುದಿಲ್ಲ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಈ ಕುರಿತು ಇನ್ನೊಮ್ಮೆ ಸಭೆ ನಡೆಸಿ ನಿರ್ಣಯಕ್ಕೆ ಬರುವುದಾಗಿ ಸಚಿವ ಲಾಡ್ ತಿಳಿಸಿದರು.