ವಿಜಯಪುರ: ಭೂತನಾಳ ಕೆರೆ ಪ್ರದೇಶದ ಕರಾಡದೊಡ್ಡಿ ಆವರಣದಲ್ಲಿ ಲಾಲ್‌ಬಾಗ್ ಮಾದರಿಯಲ್ಲಿ ಸುಸಜ್ಜಿತ ಸಸ್ಯಸಂಗಮ (ಟ್ರೀ ಪಾರ್ಕ್) ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚಿಸಿದ್ದಾರೆ.
ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಸ್ಯ ಸಂಗಮ ಟ್ರೀ ಪಾರ್ಕ್ ಅಭಿವೃದ್ಧಿ ಕುರಿತು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಬೆಂಗಳೂರಿನ ಕಬ್ಬನ್ ಪಾರ್ಕ್, ಲಾಲ್‌ಬಾಗ್ ಮಾದರಿಯಲ್ಲಿ ಈ ಟ್ರೀ ಪಾರ್ಕ್ ರೂಪಿಸಲು ಉದ್ದೇಶಿಸಲಾಗಿದೆ. ಸಸ್ಯಶಾಸ್ತ್ರ ವಿದ್ಯಾರ್ಥಿಗಳ ಅಧ್ಯಯನದ ಅನುಕೂಲಕ್ಕಾಗಿ ವಿವಿಧ ತಳಿ ಸಸಿಗಳನ್ನು ಅಭಿವೃದ್ಧಿ ಪಡಿಸುವ ಜೊತೆಗೆ ಜಿಲ್ಲೆಯ ಸಾರ್ವಜನಿಕರಿಗೆ ವಿಶ್ರಾಂತಿ ಕೇಂದ್ರವಾಗಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಭೂತನಾಳ ಕೆರೆ ವ್ಯಾಪ್ತಿಯಲ್ಲಿ 540 ಎಕರೆ ಪ್ರದೇಶದಲ್ಲಿ ಸಸಿ ನೆಡಲಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡುವಂತೆ ಸೂಚಿಸಿದರು.
ಕರಾಡದೊಡ್ಡಿ ಸಸ್ಯೋದಾನದಲ್ಲಿ ನೈಸರ್ಗಿಕ ಅರಣ್ಯ ಅಭಿವೃದ್ಧಿ ಜೊತೆಗೆ ವಿವಿಧ ಮಾದರಿಯ ಮತ್ತು ತಳಿಗಳ ಸಸಿಗಳನ್ನು ಸಮರ್ಪಕವಾಗಿ ನಿರ್ವಹಿಸುವ ಕುರಿತಂತೆ ಯೋಜನೆ ರೂಪಿಸಬೇಕು. ಇಲ್ಲಿಯ ವಾತಾವರಣಕ್ಕೆ ಪೂರಕವಾಗುವ ಸಸಿಗಳ ಅಭಿವೃದ್ಧಿಗೆ ಯೋಜನೆ ಹಾಗೂ ಖರ್ಚು ವೆಚ್ಚ ವರದಿ ಸಹ ಸಿದ್ಧಪಡಿಸಲಾಗಿದೆ. ಆಯುರ್ವೇದಿಕ್ ಔಷಧಿಯ ಸಸಿಗಳ ಅಭಿವೃದ್ಧಿಗೂ ವಿಶೇಷ ಗಮನ ನೀಡುವಂತೆ ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯ ವಿಭಾಗ ಅಧಿಕಾರಿಗಳಿಗೆ ಸೂಚಿಸಿದರು. ತೋಟಗಾರಿಕೆ ಆಧಾರಿತ ಚಟುವಟಿಕೆಗಳಿಗೂ ಇಲ್ಲಿ ಅವಕಾಶ ನೀಡುವ ಹಿನ್ನೆಲೆಯಲ್ಲಿ ಗ್ಲಾಸ್‌ಹೌಸ್ (ಗಾಜಿನ ಮನೆ) ನಿರ್ಮಾಣ ಸೇರಿದಂತೆ ವಿಶೇಷ ರೀತಿ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಸ್ತಾವನೆ ರೂಪಿಸುವಂತೆ ಅವರು ಸೂಚಿಸಿದರು.
ಮಕ್ಕಳ ಮನರಂಜನೆಗೂ ಪೂರಕವಾದ ಹಾಗೂ ಮಕ್ಕಳಿಗೆ ಆಕರ್ಷಕ ರೀತಿಯಲ್ಲಿ ಬಟರ್ ಫ್ಲೈ ಪಾರ್ಕ್, ಕ್ಯಾಟ್ತಸ್ ಹೌಸ್ ನಿರ್ಮಾಣಕ್ಕೂ ಚಿಂತಿಸಬೇಕು. ಬೆಂಗಳೂರಿನ ಮತ್ತು ಮೈಸೂರು ಭಾಗದ ಬಂಡಿಪುರ ಅಭಯಾರಣ್ಯ ಮೂಲಕ ಅನೇಕ ಪ್ರಾಣಿ, ಪಕ್ಷಿಗಳ ವೀಕ್ಷಣೆಗೆ ಸದಾವಕಾಶ ಪಡೆದಿರುವ ಮಾದರಿಯಲ್ಲೇ ವಿಜಯಪುರ ಜಿಲ್ಲೆಯಲ್ಲಿ ಪ್ರಾಣಿ ಸಂಗ್ರಹಾಲಯ ಮತ್ತು ಪಕ್ಷಿಧಾಮ ಅಭಿವೃದ್ಧಿಗೂ ವಿಶೇಷ ಆದ್ಯತೆ ನೀಡುವಂತೆ ಸೂಚಿಸಿದರು.
ಭೂತನಾಳ ಕೆರೆ ಉದ್ಯಾನವನದಲ್ಲಿ ಪ್ರಾಣಿ ಸಂಗ್ರಹಾಲಯ ನಿರ್ಮಿಸಲು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಪ್ರಾಣಿ ಸಂಗ್ರಹಾಲಯ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳೊಂದಿಗೂ ಜಿಲ್ಲಾಡಳಿತ ಸಮಾಲೋಚನೆ ನಡೆಸಲಿದ್ದು, ಇದಕ್ಕೆ ಪೂರಕ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು. ಈ ಸಸ್ಯಸಂಗಮ ಉದ್ಯಾನವನದಲ್ಲಿ ಕುಡಿಯುವ ನೀರು, 45 ಅಡಿ ಎತ್ತರದ ಟ್ಯಾಂಕರ್ ಹಾಗೂ ವೀಕ್ಷಣಾ ಗೋಪುರ ನಿರ್ಮಾಣ, ಪಕ್ಕದಲ್ಲೇ ಇರುವ ಮೀನುಗಾರಿಕೆ ಸಂಶೋಧನೆಯಲ್ಲಿ ಮೀನು ಅಕ್ವೇರಿಯಂ ವೀಕ್ಷಣೆಗೆ ಅವಕಾಶ ಕಲ್ಪಿಸಲು ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಭೆಗೆ ಮಾಹಿತಿ ನೀಡಿದ ಕೆಬಿಜೆಎನ್‌ಎಲ್ ಅರಣ್ಯ ವಿಭಾಗದ ಅಧಿಕಾರಿಗಳು, ಭೂತನಾಳ ಕೆರೆ ಪ್ರದೇಶ ಪ್ರವಾಸಿಗರ ತಾಣವಾಗಿ ರೂಪುಗೊಳಿಸಲು 2.77 ಕೋಟಿ ರೂ. ವೆಚ್ಚದಲ್ಲಿ ಈ ಟ್ರೀ ಪಾರ್ಕ್ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಈಗಾಗಲೇ ಭೂತನಾಳ ಕೆರೆ ವ್ಯಾಪ್ತಿಯಲ್ಲಿ ಚೆಕ್ ಡ್ಯಾಂ ನಿರ್ಮಾಣ, ಮಕ್ಕಳ ಕ್ರೀಡಾ ಚಟುವಟಿಕೆ ಸೌಲಭ್ಯ ಕಲ್ಪಿಸಲು ಟೆಂಡರ್ ಆಹ್ವಾನಿಸಲಾಗಿದೆ ಎಂದು ವಿವರಿಸಿದರು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರ ಸಂತೋಷ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ, ಅರಣ್ಯ ಇಲಾಖೆ ಸಂರಕ್ಷಣಾಧಿಕಾರಿ ಸರೀನಾ, ಕೆಬಿಜೆಎನ್‌ಎಲ್ ಆರ್‌ಏಫ್‌ಒ ಮಹೇಶ ಪಾಟೀಲ, ಡಿ.ಸಿ.ಎಫ್. ಎನ್.ಕೆ. ಬಾಗಾಯತ್ ಇದ್ದರು.