ಹುಬ್ಬಳ್ಳಿ: ನೆರೆಯಿಂದ ಜಿಲ್ಲೆಯಲ್ಲಿ ಹಾನಿಯಾದ ಪ್ರದೇಶಗಳಲ್ಲಿ ಖಾಸಗಿ ಕಂಪೆನಿಗಳ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯಲ್ಲಿ ಮೂಲಸೌಲಭ್ಯ ಕಲ್ಪಿಸುವ ಕುರಿತು ತಯಾರಿಸಿರುವ ವಿಸ್ತೃತ ಯೋಜನೆ ಸಮರ್ಪಕವಾಗಿಲ್ಲ. ಮುಂದಿನ 10 ದಿನದಲ್ಲಿ ಹೊಸ ವಿಸ್ತೃತ ಯೋಜನೆ ಸಿದ್ಧಪಡಿಸುವಂತೆ ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಜಿಲ್ಲಾಧಿಕಾರಿಗೆ ಸೂಚಿಸಿದರು.
ಐಟಿ ಪಾರ್ಕ್‌ನಲ್ಲಿರುವ ಕೆಯುಐಡಿಎಫ್‌ಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನೆರೆ ಹಾವಳಿಯಿಂದ ಹಾನಿಯಾದ ಸಂತ್ರಸ್ತರ ನೆರವಿಗೆ ಖಾಸಗಿ ಕಂಪೆನಿಗಳು ಮುಂದೆ ಬಂದಿವೆ. ಕೆಲವೊಂದು ಕಂಪನಿಗಳ ಅಧಿಕಾರಿಗಳನ್ನು ಸಂಪರ್ಕಿಸಿ ಸಿಎಸ್‌ಆರ್ ಯೋಜನೆಯ ಅನುದಾನ ಬಳಸಿಕೊಳ್ಳಲು ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಸಿಎಸ್‌ಆರ್ ಯೋಜನೆ ಮಾರ್ಗಸೂಚಿಗಳ ಪ್ರಕಾರ ವಿಸ್ತೃತ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಹಾನಿಯಾಗಿರುವ ಅಂಗನವಾಡಿ, ಶಾಲೆ ಕಟ್ಟಡ, ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಸ್ಟೆಲ್ಗಳ ನಿರ್ಮಾಣಕ್ಕೆ ಒತ್ತು ನೀಡಬೇಕಾಗಿದೆ. ಈ ಸೌಲಭ್ಯಗಳು ಸಾರ್ವಜನಿಕರಿಗೆ ಶೀಘ್ರದಲ್ಲಿ ಒದಗಿಸುವ ಕಾರಣಕ್ಕೆ ಇವುಗಳ ಮೇಲೆ ಹೆಚ್ಚು ಕೇಂದ್ರೀಕರಿಸಬೇಕು. ಈ ಸೌಲಭ್ಯಗಳನ್ನು ಒಳಗೊಂಡಂತೆ ಗ್ರಾಮವಾರು ಕ್ರಿಯಾಯೋಜನೆ ಸಿದ್ಧಪಡಿಸಬೇಕು. ನೆರೆ ಸಂತ್ರಸ್ತರಿಗೆ ನೆರವು ನೀಡಲು ದಾನಿಗಳು ಮುಂದೆ ಬಂದಿರುವಾಗ ಉತ್ತಮ ರೀತಿಯಲ್ಲಿ ಸ್ಪಂದಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಡೆಸ್ಕ್ ಹೊಂದಬೇಕು ಎನ್ನುವ ಗುರಿ ಹೊಂದಿದ್ದು, 2020-21ರೊಳಗೆ ಬಾಕಿ ಉಳಿದಿರುವ ಶಾಲೆಗಳಿಗೆ ಡೆಸ್ಕ್ ವಿತರಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡುವಂತೆ ಡಿಡಿಪಿಐ ಅವರಿಗೆ ಸೂಚನೆ ನೀಡಲಾಗಿತ್ತು ಎಂದು ಸಚಿವ ಪ್ರಹ್ಲಾದ ಜೋಶಿ ಪ್ರಸ್ತಾಪಿಸಿದರು. ಇನ್ನೂ 1800 ಡೆಸ್ಕ್ ನೀಡಿದರೆ ಎಲ್ಲ ಶಾಲೆಗಳಿಗೆ ನೀಡಿದಂತಾಗಿದೆ ಎಂದು ಡಿಡಿಪಿಐ ಗಜಾನನ ಮನ್ನಿಕೇರಿ ಮಾಹಿತಿ ನೀಡಿದರು. ಈ ಮಾಹಿತಿ ತಪ್ಪಾಗಿದ್ದು, ಕನಿಷ್ಠ 5-6 ಸಾವಿರ ಡೆಸ್ಕ್ಗಳ ಅಗತ್ಯವಿರಬಹುದು. ಮತ್ತೂಮ್ಮೆ ಪರಿಶೀಲಿಸುವಂತೆ ಸೂಚಿಸಿದ ಸಚಿವರು, ಶೌಚಾಲಯದ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಸಭೆ ಮುಕ್ತಾಯದ ಬಳಿಕೆ ಮಾಹಿತಿ ನೀಡಿದ ಮನ್ನಿಕೇರಿ ಇನ್ನೂ 6 ಸಾವಿರ ಡೆಸ್ಕ್ಗಳ ಅಗತ್ಯವಿದೆ ಎಂದು ತಿಳಿಸಿದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಸಿಎಸ್‌ಆರ್ ಯೋಜನೆಯನ್ನು ಆಯಾ ಕಂಪೆನಿಗಳೇ ನಿರ್ವಹಿಸುವುದು ಉತ್ತಮ. ಸರಕಾರದ ಮೂಲಕ ಅನುಷ್ಠಾನಕ್ಕೆ ಮುಂದಾದರೆ ಸಾಕಷ್ಟು ವಿಳಂಬಕ್ಕೆ ಕಾರಣವಾಗುತ್ತದೆ. ಕಷ್ಟದಲ್ಲಿರುವ ಸಂತ್ರಸ್ತರಿಗೆ ಸ್ಪಂದಿಸಿದಂತೆ ಆಗುವುದಿಲ್ಲ. ಹೀಗಾಗಿ ಆಯಾ ಕಂಪನಿಗಳು ಅನುಷ್ಠಾನ ಮಾಡುವುದು ಸೂಕ್ತವಾಗಿದೆ ಎಂದರು.
ಸಚಿವರ ಆಪ್ತ ಕಾರ್ಯದರ್ಶಿ ರಿತೇಶ ಚವ್ಹಾಣ, ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಪಂ ಸಿಇಒ ಡಾ| ಬಿ.ಸಿ. ಸತೀಶ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿನಾಯಕ ಪಾಲನಕರ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ತಹಶೀಲ್ದಾರರು ಇದ್ದರು.