Advertisement

ಪಿಯು ಪರೀಕ್ಷೆ ಸುಸೂತ್ರವಾಗಿ ನಡೆಸಲು ಸೂಚನೆ

04:42 AM Feb 26, 2019 | Team Udayavani |

ಕಲಬುರಗಿ: ಪ್ರಸಕ್ತ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯು. ಪರೀಕ್ಷೆ ಮಾ.1ರಿಂದ 18ರ ವರೆಗೆ ನಡೆಯಲಿದೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಿ ಸುಸೂತ್ರವಾಗಿ ಪರೀಕ್ಷೆ ನಡೆಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ರೂಟ್‌ ಅಧಿಕಾರಿಗಳು ಮತ್ತು ಪರೀಕ್ಷಾ ಕೇಂದ್ರದ ಮುಖ್ಯ ಮೇಲ್ವಿಚಾರಕರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರದ 25 ಕೇಂದ್ರ ಮತ್ತು 22 ತಾಲೂಕು ಕೇಂದ್ರಗಳು ಸೇರಿದಂತೆ ಒಟ್ಟು 47 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. 15195 ಪುರುಷ ವಿದ್ಯಾರ್ಥಿಗಳು ಹಾಗೂ 13738 ವಿದ್ಯಾರ್ಥಿನಿಯರು ಸೇರಿ 28,933 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.

ಇದರಲ್ಲಿ 22,729 ಫ್ರೆಶರ್, 5001 ರಿಪೀಟರ್ ಮತ್ತು 1023 ಖಾಸಗಿ ವಿದ್ಯಾರ್ಥಿಗಳು ಇದ್ದಾರೆ. ಪರೀಕ್ಷೆ ಸುಗಮವಾಗಿ ನಡೆಯುವಂತೆ 47 ಕೇಂದ್ರಗಳಿಗೂ ಮುಖ್ಯ ಅಧೀಕ್ಷಕರು ಹಾಗೂ ನಕಲು ತಡೆಯಲು ತಾಲೂಕು ಮಟ್ಟದಲ್ಲಿ ಫ್ಲೈಯಿಂಗ್‌ ಸ್ಕ್ವಾಡ್‌, ಪ್ರತಿ ಕೇಂದ್ರಕ್ಕೆ ಇಬ್ಬರಂತೆ ಸಿಟ್ಟಿಂಗ್‌ ಸ್ಕ್ವಾಡ್‌ ನೇಮಿಸಲಾಗಿದೆ. ಬೇರೆ ಜಿಲ್ಲೆಯಿಂದಲೂ ಸಿಟ್ಟಿಂಗ್‌ ಸ್ಕ್ವಾಡ್‌ ಬರುವ ನಿರೀಕ್ಷೆ ಇದೆ.

ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಹೋಗಲು ಕ್ಷೇತ್ರ ಶಿಕ್ಷಣಾಧಿಕಾರಿ ನೇತೃತ್ವದಲ್ಲಿ ಮೂರು ಜನರ 13 ರೂಟ್‌ ಅಧಿಕಾರಿಗಳ ತಂಡ ರಚಿಸಲಾಗಿದೆ. ವಾಹನಕ್ಕೆ ಜಿಪಿಆರ್‌ ಎಸ್‌ ಸಹ ಅಳವಡಿಸಲಾಗಿದೆ. ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಹೇಳಿದರು.

Advertisement

ಪರೀಕ್ಷಾ ಕೇಂದ್ರದ ಅಧೀಕ್ಷಕರು ಕೇಂದ್ರದಲ್ಲಿಯೇ ಹಾಜರಿದ್ದು, ಪಿಯುಸಿ ಮಂಡಳಿನಿರ್ದೇಶನದಂತೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಪರೀಕ್ಷೆ ಆರಂಭಗೊಳ್ಳುವ ಮುನ್ನ ಕೇಂದ್ರದಲ್ಲಿ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ, ಮೇಜು, ಬೆಳಕಿನ ವ್ಯವಸ್ಥೆ ಬಗ್ಗೆ ಅಧೀಕ್ಷಕರು ಮುಂಚೆಯೆ ಖಾತ್ರಿ ಪಡಿಸಿಕೊಳ್ಳಬೇಕು. ಪರೀಕ್ಷಾ ದಿನದಂದು ಕೇಂದ್ರದ ಪ್ರವೇಶ ಸ್ಥಳದಲ್ಲಿಯೇ ಪುರುಷ ಮತ್ತು ಮಹಿಳಾ ಸಿಬ್ಬಂದಿಯಿಂದ ಪ್ರತ್ಯೇಕವಾಗಿ ವಿದ್ಯಾರ್ಥಿಗಳನ್ನು ಫ್ರಿಸ್ಕಿಂಗ್‌ ಮಾಡಿಯೇ ಒಳಗಡೆ ಬಿಡಬೇಕು. ಕೊಠಡಿ ಮೇಲ್ವಿಚಾರಕರನ್ನು ನೇಮಿಸುವ ಪೂರ್ವ ಕೇಂದ್ರದಲ್ಲಿ ಯಾವುದೇ ಸಂಬಂಧಿ ವಿದ್ಯಾರ್ಥಿಗಳು ಇರುವುದಿಲ್ಲ ಎಂದು ಮುಚ್ಚಳಿಕೆ ಪತ್ರ ಪಡೆಯುವುದು ಕಡ್ಡಾಯ. ಪೋಲಿಸ್‌ ಬಂದೋಬಸ್ತ್ಗಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಹೇಳಿದರು.

ಅನಧಿಕೃತ ವ್ಯಕ್ತಿಯನ್ನು ಪರೀಕ್ಷಾ ಕೇಂದ್ರದ ಆವರಣದಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಕೊಠಡಿ ಮೇಲ್ವಿಚಾರಕರು ಸೇರಿದಂತೆ ಅಭ್ಯರ್ಥಿಗಳು ಮೊಬೈಲ್‌ ಫೋನ್‌, ಪೇಜರ್‌, ಬ್ಲೂಟೂತ್‌, ವೈರಲೆಸ್‌ ಸೆಟ್‌, ಸ್ಪ್ರೆಡರೂಲ್‌ ಕ್ಯಾಲ್ಕುಲೇಟರ್‌, ವಾಚ್‌ ಕ್ಯಾಲ್ಕುಲೇಟರ್‌, ಪಠ್ಯ ಪುಸ್ತಕ
ಸೇರಿದಂತೆ ಇನ್ನಿತರ ಇಲೆಕ್ಟ್ರಾನಿಕ್ಸ್‌ ಉಪಕರಣ ತರುವುದನ್ನು ನಿಷೇಧಿಸಲಾಗಿದೆ. ನಕಲು ಮಾಡುವ ಅಭ್ಯರ್ಥಿಗಳು ಮತ್ತು ಅದಕ್ಕೆ ಸಹಕರಿಸಿ ಅಕ್ರಮದಲ್ಲಿ ಭಾಗಿಯಾಗುವವರ ವಿರುದ್ಧ ಕಾನೂನಿನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಹಾಲ್‌ ಟಿಕೆಟ್‌ ತೋರಿಸಿ ಪ್ರಯಾಣ ಮಾಡಿ
ಬೇರೆ ಊರಿಂದ ಬಸ್‌ ಮೂಲಕ ಪರೀಕ್ಷಾ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳು ತಮಗೆ ನೀಡಲಾದ ಬಸ್‌ ಪಾಸ್‌ ಅವಧಿ ಮುಗಿದರು ಸಹ ಪರೀಕ್ಷಾ ಹಾಲ್‌ ಟಿಕೆಟ್‌ ಪ್ರದರ್ಶಿಸಿ ಉಚಿತ ಪ್ರಯಾಣ ಮಾಡಬಹುದಾಗಿದೆ. ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್‌, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಾರ್ಗಾಧಿ ಕಾರಿಗಳು, ರೂಟ್‌ ಅಧಿಕಾರಿಗಳು, ಮುಖ್ಯ ಮೇಲ್ವಿಚಾರಕರು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next