ಬಸವನಬಾಗೇವಾಡಿ: ಬಾರಖೇಡ -ಬೀಳಗಿ ರಾಜ್ಯ ಹೆದ್ದಾರಿ ಹಾಗೂ ಆಲಮಟ್ಟಿ ರಸ್ತೆ ಮತ್ತು ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದ ಇಂಗಳೇಶ್ವರದ ದ್ವಿಪಥ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ವಿದ್ಯುತ್ ಕಂಬ ಶೀಘ್ರದಲ್ಲೇ ಅಳವಡಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಶನಿವಾರ ಪಟ್ಟಣದ ಬಸವೇಶ್ವರ ವೃತ್ತದ ಬಳಿಯಿರುವ 3 ಎಕರೆ ಜಾಗೆಯಲ್ಲಿ ನೂತನ ಮೆಘಾ ಮಾರುಕಟ್ಟೆ ಕಾಮಗಾರಿ ಹಾಗೂ ಬಾರಖೇಡ -ಬೀಳಗಿ ರಾಜ್ಯ ಹೆದ್ದಾರಿ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು.
ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಿಂದ ನವ ನಗರದವರೆಗೆ ಆಲಮಟ್ಟಿ ರಸ್ತೆ ಕಾಮಗಾರಿ ಹಾಗೂ ಇಂಗೇಶ್ವರ ರಸ್ತೆ ಕಾಮಗಾರಿ ಶೇ. 90 ಪೂರ್ಣಗೊಂಡಿದೆ. ಈ ಮೂರು ದ್ವಿಪಥ ರಸ್ತೆ ಮಧ್ಯದಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಬೇಕು. ಸಣ್ಣ ಪುಟ್ಟ ಉಳಿದ ಕಾಮಗಾರಿ ಹಾಗೂ ಪಾದಚಾರಿ ರಸ್ತೆ ಸೇರಿದಂತೆ ಇನ್ನಿತರ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ ವಾಹನ ಸಂಚಾರ ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಮುಂದಾಗಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ವಿದ್ಯಾರ್ಥಿ ನಿಲಯ ಹಾಗೂ ನೂತನ ಪುರಸಭೆ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದು ಪಟ್ಟಣದಲ್ಲಿ ಇನ್ನಿತರ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗಿವೆ. 2019ಕ್ಕೆ ಅಸರೆ ಯೋಜನೆ ಹಾಗೂ ಬಸವ ಭವನ, ಐಟಿಐ, ಪಾಲಿಟೆಕ್ನಿಕಲ್ ಕಾಲೇಜ್ ಸೇರಿದಂತೆ ಅನೇಕ ಸರಕಾರಿ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳಲಿದ್ದು. ಅವುಗಳು ಕೂಡಾ ಬರುವ 2019 ಜೂನ್ ಅಥವಾ ಜುಲೈ ತಿಂಗಳಲ್ಲಿ ಉದ್ಘಾಟನೆಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಪಟ್ಟಣದ ಜನತೆಗೆ 24×7 ಕುಡಿಯುವ ನೀರಿನ ಯೋಜನೆ ಕಾಮಗಾರಿ ಭರದಿಂದ ಸಾಗಿದ್ದು ಇನ್ನೂ 4-5 ತಿಂಗಳಲ್ಲಿ
ಪೂರ್ಣಗೊಳ್ಳಲಿದೆ. ಈಗಾಗಲೇ ಪಟ್ಟಣದ ಹೊಸ ಬಡಾವಣೆಯಲ್ಲಿ ಹಾಗೂ ನಗರಗಳಲ್ಲಿ 24×7 ಕುಡಿಯುವ ನೀರಿನ ಯೋಜನೆ ಕಾಮಗಾರಿ ಮುಗಿಯುವ ಹಂತಕ್ಕೆ ತಲುಪಿದೆ. ಇನ್ನೂ ಪಟ್ಟಣದ ಪ್ರತಿಗಲ್ಲಿಗಲ್ಲಿಗಳಲ್ಲಿ ಕಾಮಗಾರಿ ಯೋಜನೆ ಪ್ರಾರಂಭಗೊಳ್ಳಲಿದೆ. ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಪುರಸಭೆ ಸದಸ್ಯರಾದ ಸಂಗಮೇಶ ಪೂಜಾರಿ, ನಜೀರ್ ಗಣಿ, ಮುರುಗೇಶ ನಾಯ್ಕೋಡಿ, ಮುತ್ತು ಉಕ್ಕಲಿ, ಪುರಸಭೆ ಮುಖ್ಯಾಧಿಕಾರಿ ಬಿ.ಎಸ್. ಸೌದಾಗರ, ಲೋಕೋಪಯೋಗಿ ಇಲಾಖೆ ಅಧಿಕಾರಿ ಜಿ.ಎಸ್. ವಂದಾಲ, ಜಿಪಂ ಎಇ ವಿಲಾಸ ರಾಠೊಡ, ಶಬ್ಬೀರ್ ರೇವರಕರ ಸೇರಿದಂತೆ ಅನೇಕರು ಇದ್ದರು.