Advertisement

ಕಟ್ಟುನಿಟ್ಟಾಗಿ ಜವಾಬ್ದಾರಿ ನಿರ್ವಹಿಸಲು ಸೂಚನೆ

10:16 AM Mar 02, 2018 | Team Udayavani |

ಕಲಬುರಗಿ: ರಾಷ್ಟ್ರಕೂಟರ ರಾಜಧಾನಿ ಸೇಡಂ ತಾಲೂಕು ಮಳಖೇಡದಲ್ಲಿ ಮಾ. 4 ಮತ್ತು 5ರಂದು ನಡೆಯಲಿರುವ ರಾಷ್ಟ್ರಕೂಟ ಉತ್ಸವದ ವ್ಯವಸ್ಥಿತ ಆಯೋಜನೆಗೆ ವಿವಿಧ ಸಮಿತಿ ರಚಿಸಲಾಗಿದೆ. ಆಯಾ ಸಮಿತಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಆರ್‌.ವೆಂಕಟೇಶ ಕುಮಾರ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಉತ್ಸವದ ನಿಮಿತ್ತ ಅಧಿಕಾರಿಗಳೊಂದಿಗೆ ನಡೆಸಿದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉತ್ಸವಕ್ಕೆ ನಿಯೋಜಿಸಲಾದ ಅಧಿಕಾರಿಗಳು ಹಾಗೂ ಸಮಿತಿಗಳ ಸದಸ್ಯರು ಕೂಡಲೇ ಮಳಖೇಡಕ್ಕೆ ಭೇಟಿ ನೀಡಿ ಸ್ಥಳೀಯ ಅಧಿಕಾರಿಗಳು, ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರೊಂದಿಗೆ ಸಮನ್ವಯತೆ ಸಾಧಿಸಿ ಪೂರ್ವಸಿದ್ಧತಾ ಕಾರ್ಯ ಪೂರ್ಣಗೊಳಿಸಬೇಕು.

ಉತ್ಸವ ಮುಗಿಯುವವರೆಗೂ ಮಳಖೇಡದಲ್ಲಿಯೆ ವಾಸ್ತವ್ಯ ಇರಬೇಕು. ಉತ್ಸವದ ಯಶಸ್ವಿಗೆ ಶ್ರಮಿಸಬೇಕು. ಈ ಬಗ್ಗೆ ಕೈಗೊಂಡ ಎಲ್ಲ ಕಾರ್ಯಗಳ ಬಗ್ಗೆ ಶುಕವಾರ ಮತ್ತೂಮ್ಮೆ ಪರಿಶೀಲಿಸಲಾಗುವುದು ಎಂದು ಹೇಳಿದರು.

ಉತ್ಸವದ ಯಶಸ್ವಿಗೆ ಸಾಂಸ್ಕೃತಿಕ, ಊಟ ಮತ್ತು ಕುಡಿಯುವ ನೀರು, ವಿಚಾರ ಸಂಕಿರಣ, ವಸ್ತು ಪ್ರದರ್ಶನ, ಸಾರಿಗೆ ವ್ಯವಸ್ಥೆ,
ವಸತಿ, ಲೆಕ್ಕ, ಪ್ರಚಾರ ಸಮಿತಿ ಹೀಗೆ ವಿವಿಧ ಸಮಿತಿ ರಚಿಸಲಾಗಿದೆ. ಎಲ್ಲ ಸಮಿತಿಗಳ ಮೇಲೆ ಮೇಲುಸ್ತುವಾರಿಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡ ಬಸವರಾಜ ಅವರ ನೇತೃತ್ವದಲ್ಲಿ ಸಂಘಟನಾ ಸಮಿತಿ ರಚಿಸಲಾಗಿದೆ. ಅವರ ಅಧೀನದಲ್ಲಿ ಉಳಿದ ಎಲ್ಲ ಸಮಿತಿಗಳು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಚಂದ್ರಶೇಖರ ಕಂಬಾರ ಮಾ. 4ರಂದು ಬೆಳಗ್ಗೆ 11:00ಕ್ಕೆ ಉತ್ಸವ ಉದ್ಘಾಟಿಸಲಿದ್ದಾರೆ.
 
ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ವಿಶೇಷ ಆಹ್ವಾನಿತರಾಗಿ, ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಶ ಪಾಟೀಲ ಸೇರಿದಂತೆ ಶಿಷ್ಟಾಚಾರದಂತೆ ಸ್ಥಳೀಯ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ. ಎರಡು ದಿನಗಳ ವರೆಗೆ ಕವಿ ಗೋಷ್ಠಿ, ಗೀತ ಗಾಯನ, ನಾಟಕ ಕಾರ್ಯಕ್ರಮಗಳು ಸ್ಥಳೀಯ ಹಾಗೂ ನಾಡಿನ ವಿವಿಧ ಕಲಾವಿದರಿಂದ ನಡೆಯಲಿದ್ದು, ವಿವಿಧ ಮಳಿಗೆಗಳು ಸಹ ಸ್ಥಾಪನೆಯಾಗಲಿವೆ. 

Advertisement

ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ, ಖ್ಯಾತ ಸಂಗೀತ ನಿರ್ದೇಶಕರಾದ ನವೀನ ಸಜ್ಜು, ಅನೂಪ ಸಿಳೀನ್‌, ಅರ್ಜುನ
ಜನ್ಯಾ, ನಿರೂಪಣೆ ಖ್ಯಾತಿಯ ಅನುಶ್ರೀ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದಾರೆ ಎಂದು ಹೇಳಿದರು. ಉತ್ಸವಕ್ಕೆ ಹೊರಜಿಲ್ಲೆಯಿಂದ ಆಗಮಿಸುವ ಅತಿಥಿ ಗಣ್ಯರು ಮತ್ತು ಕಲಾವಿದರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಅಧಿಕಾರಿಗಳು ಗಣ್ಯರ ಮತ್ತು ಕಲಾವಿದರ ಊಟೋಪಚಾರ ಹಾಗೂ ಸಾರಿಗೆ ವ್ಯವಸ್ಥೆ ಬಗ್ಗೆ ಗಮನಹರಿಸಬೇಕು. 

ಗಣ್ಯರು, ಕಲಾವಿದರು, ಪತ್ರಕರ್ತರು ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ಆಸನ ಮತ್ತು ಊಟದ ವ್ಯವಸ್ಥೆ ಸರಿಯಾಗಿ ಮಾಡುವಂತೆ ಹಾಗೂ ಉತ್ಸವದ ಆವರಣದಲ್ಲಿ ಕುಡಿಯುವ ನೀರು, ಶೌಚಾಲಯ ಮತ್ತು ಸ್ವತ್ಛತೆ ಬಗ್ಗೆ ಹಾಗೂ ಉದ್ಘಾಟನೆ ದಿನದಂದು ಮಳಖೇಡ್‌ ಕೋಟೆಯಿಂದ ಮುಖ್ಯ ವೇದಿಕೆ ವರೆಗೆ ಬರುವ ಮೆರವಣಿಗೆ ಹಾದಿಯುದ್ದಕ್ಕೂ ಸ್ವತ್ಛತೆ ಬಗ್ಗೆ ವಿಶೇಷ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಉತ್ಸವದ ಸಂಪೂರ್ಣ ಕಾರ್ಯಕ್ರಮಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. 

ಉತ್ಸವದ ಸಂಘಟನಾ ಸಮಿತಿ ಅಧ್ಯಕ್ಷ ದೊಡ್ಡಬಸವರಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಉತ್ಸವದ ಸಂಚಾಲಕ ಮಹಿಪಾಲರೆಡ್ಡಿ ಮುನ್ನೂರ ಸೇರಿದಂತೆ ಅಧಿಕಾರಿಗಳು, ಉತ್ಸವದ ವಿವಿಧ ಸಮಿತಿಗಳ ಸದಸ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next