ಬೆಂಗಳೂರು: ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅಧಿಕ ಸಂಖ್ಯೆಯಲ್ಲಿ ಎಚ್-1, ಎನ್-1 ಪ್ರಕರಣಗಳು ಪತ್ತೆಯಾಗುತ್ತಿದ್ದು, ಸಾರ್ವಜನಿಕರು ಎಚ್ಚರ ವಹಿಸುವಂತೆ ಬೆಂಗಳೂರು ನಗರ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಗಳ ನಿಯಂತ್ರಣಾಧಿಕಾರಿ ಡಾ.ಟಿ.ಕೆ.ಸುನಂದಾ ಮನವಿ ಮಾಡಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿಯಿಂದ ಫೆಬ್ರವರಿ ಅಂತ್ಯದವರೆಗೆ 39 ಎಚ್-1 ಎನ್-1 ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷ 64 ಪ್ರಕರಣಗಳು ಪತ್ತೆಯಾಗಿ, ನಾಲ್ವರು ಮೃತಪಟ್ಟಿದ್ದರು. ಪ್ರಸಕ್ತ ವರ್ಷ ಆರಂಭದಲ್ಲೇ ಸೋಂಕು ಪತ್ತೆಯಾಗಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ವಲಸಿಗರಿಂದ ಎಚ್1ಎನ್1: ನಗರಕ್ಕೆ ವಲಸೆ ಬಂದಿರುವವರಲ್ಲಿಯೇ ಅಧಿಕ ಸಂಖ್ಯೆಯಲ್ಲಿ ಎಚ್1ಎನ್1 ಪ್ರಕರಣ ಕಾಣಿಸಿಕೊಂಡಿವೆ. ಇದರ ಸೋಂಕು ಗಾಳಿಯಿಂದ ಹರಡಲಿದ್ದು 2ರಿಂದ 8 ಗಂಟೆಯ ಕಾಲ ವೈರಾಣು ಜೀವಂತವಾಗಿರುತ್ತವೆ. ರೋಗ ನಿಯಂತ್ರಕ್ಕೆ ಈಗಾಗಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜನರು ಭಯ ಪಡುವ ಅಗತ್ಯವಿಲ್ಲ ಎಂದರು.
ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಸ್.ಪ್ರಕಾಶ್ ಮಾತನಾಡಿ, ಸೋಂಕು ಪತ್ತೆಯಾದ ರೋಗಿಯ ಮನೆಯನ್ನು ಕೇಂದ್ರ ವಾಗಿಸಿಕೊಂಡು ಸುತ್ತ ಮುತ್ತಲ ಸುಮಾರು 150 ಮನೆಯ ನಿವಾಸಿಗಳನ್ನು ತಪಾಸಣೆಯ ಲಾರ್ವಾ ಸರ್ವೆ ಮಾಡಲಾಗುತ್ತಿದೆ. ನಗರದ 12 ಸರ್ಕಾರಿ ವೈದ್ಯಕೀಯ ಕಾಲೇಜು, ಖಾಸಗಿ ಕಾಲೇಜುಗಳು ಸೇರಿದಂತೆ ಒಟ್ಟು 1,658 ವೈದ್ಯರಿಗೆ ಈ ಕಾಯಿಲೆಗಳ ಬಗ್ಗೆ ಸಭೆಗಳ ಮೂಲಕ ಅರಿವು ಮೂಡಿಸಲಾಗಿದೆ ಎಂದು ಹೇಳಿದರು.
ಬೃಹತ್ ಆರೋಗ್ಯ ಮೇಳ: ಬಿಪಿಎಲ್ ಕಾರ್ಡುದಾರರಿಗೆ ಆರೋಗ್ಯ ಸೇವೆಗಳ ಬಗ್ಗೆ ಅರಿವು ಮೂಡಿಸಲು ಮಾರ್ಚ್ 3, 5 ಹಾಗೂ 7 ರಂದು ಬೃಹತ್ ಆರೋಗ್ಯ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಬಸವನಗುಡಿ, ಸರ್ ಸಿ.ವಿ. ರಾಮನ್ ನಗರ ಹಾಗೂ ದಾಸರಹಳ್ಳಿಯಲ್ಲಿ ಆರೋಗ್ಯ ಮೇಳ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿಗಳಾದ ಡಾ. ಮಹೇಶ್ ಉಪಸಿತ್ಥರಿದ್ದರು.
ಮಂಗನ ಜ್ವರ ಪತ್ತೆಯಾಗಿಲ್ಲ: ನಗರದಲ್ಲಿ ಮಂಗನ ಜ್ವರ ಪ್ರಕರಣ ಬೆಳಕಿಗೆ ಬಂದಿಲ್ಲ.ಆದರೆ ಆನೇಕಲ್ ತಾಲೂಕಿನ ದೊಮ್ಮಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 2 ಮಂಗಗಳು ಮರಣ ಹೊಂದಿದ್ದು ಹಿರಿಯ ಆರೋಗ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಮರಣೋತ್ತರ ಪರೀಕ್ಷೆ ಮಾಡಿ ಮಾದರಿಗಳನ್ನು ಪೂಣೆ ಪ್ರಯೋಗಾಲಕ್ಕೆ ಕಳುಹಿಸಿ ಕೊಡಲಾಗಿದೆ ಎಂದು ಆರೋಗ್ಯ ಅಧಿಕಾರಿ ಪ್ರಕಾಶ್ ಹೇಳಿದರು. ಈ ಸಂಬಂಧ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ಜನರಿಗೆ ತಿಳುವಳಿಕೆ ನೀಡುತ್ತಿದ್ದಾರೆ.ಅಲ್ಲದೆ ಜ್ವರ ಸಮೀಕ್ಷೆಯನ್ನು ಮುಂದುವರಿಸಿದ್ದಾರೆ ಎಂದು ತಿಳಿಸಿದರು.