ಬೆಂಗಳೂರು: ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ಕುರಿತು ದಾಖಲಾಗಿರುವ ಪ್ರಕರಣ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ನಟ ಚೇತನ್ ಅವರಿಗೆ ಬಸವನಗುಡಿ ಪೊಲೀಸ್ ಠಾಣೆಯಿಂದ ನೋಟಿಸ್ ಜಾರಿ ಮಾಡಲಾಗಿದೆ.
ಬ್ರಾಹ್ಮಣವಾದವು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಮನೋಭಾವವನ್ನು ನಿರಾಕರಿಸಿದೆ. ನಾವು ಬ್ರಾಹ್ಮಣ ಧರ್ಮವನ್ನು ಬೇರುಸಹಿತ ಕಿತ್ತುಹಾಕಬೇಕು. ”ಎಲ್ಲರೂ ಸಮಾನರಾಗಿ ಜನಿಸಿದಾಗ, ಬ್ರಾಹ್ಮಣರು ಮಾತ್ರ ಉನ್ನತರು ಮತ್ತು ಉಳಿದವರೆಲ್ಲರೂ ಕಡಿಮೆ ಎಂದು ಹೇಳುವುದುಸಂಪೂರ್ಣ ಅಸಂಬದ್ಧ. ಇದು ದೊಡ್ಡ ವಂಚನೆ’ ಎಂದು ನಟ ಚೇತನ್ ಹೇಳಿದರು.
ಇದಲ್ಲದೆ, ಬ್ರಾಹ್ಮಣ ಧರ್ಮವು ಬಸವ ಮತ್ತು ಬುದ್ಧನ ವಿಚಾರಗಳನ್ನು ಕೊಂದಿದೆ ಮತ್ತು ಬುದ್ಧ ಒಂದು ಹಂತದಲ್ಲಿ ಬ್ರಾಹ್ಮಣ ಧರ್ಮದ ವಿರುದ್ಧ ಹೋರಾಡಿದನು ಎಂದು ಅವರು ಹೇಳಿದ್ದರು.
ಈ ಹೇಳಿಕೆ ಖಂಡಿಸಿ ಕನ್ನಡ ನಟ ಚೇತನ್ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಹಿನ್ನೆಲೆ ಇಂದು ನೋಟಿಸ್ ಜಾರಿಯಾಗಿದೆ.
ಇನ್ನು ನೋಟಿಸ್ ಕುರಿತು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಚೇತನ್, ಬ್ರಾಹ್ಮಣ್ಯದ ವಿರುದ್ಧ ನನ್ನ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ ಪೋಸ್ಟ್ ಗಳ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಇಂದು ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯಿಂದ ನನಗೆ ನೋಟಿಸ್ ಬಂದಿದೆ, ನಾಳೆ ಬೆಳಿಗ್ಗೆ ನಾನು ಪೊಲೀಸ್ ಠಾಣೆಗೆ ಹೋಗುತ್ತಿದ್ದೇನೆ. ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿ ಸಮಾನತೆ ಮತ್ತು ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.