ಬೆಂಗಳೂರು: ಹಿಜಾಬ್ ವಿವಾದದ ಕುರಿತು ಇಂದು ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಜಿಲ್ಲಾಡಳಿತಗಳ ಜೊತೆ ಸಭೆ ನಡೆಸಲಾಯಿತು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ನಾನು,ಬಿಸಿ ನಾಗೇಶ್,ಅಶ್ವತ್ಥ ನಾರಾಯಣ್ ಸೇರಿ ಅನೇಕ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದೆವು. ಸೋಮವಾರದಿಂದ 10 ನೇ ತರಗತಿಯವರೆಗೂ ಶಾಲೆಗಳು ಆರಂಭವಾಗುತ್ತದೆ. ಸಾಮಾಜಿಕ ಜಾಲಾತಾಣದಲ್ಲಿ ಪ್ರಚೋದನಾಕರಿ ವಿಡಿಯೋ ಹರಿದಾಡದಂತೆ ಕಟ್ಟೆಚ್ಚರ ವಹಿಸಬೇಕು, ಹೈಕೋರ್ಟು ಆದೇಶ ಪಾಲಿಸಬೇಕು ಎಂದರು.
ಸಮಾಜಘಾತುಕ ಶಕ್ತಿಗಳನ್ನು ಗುರುತಿಸಬೇಕು. ಮೇಲಿನ ಆದೇಶಕ್ಕೆ ಕಾಯದೇ ತಕ್ಷಣದ ಕ್ರಮ ಪಾಲಿಸಲು ಆಡಳಿತಕ್ಕೆ ಆದೇಶ ನೀಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸದಂತೆ ಸೂಚನೆ ನೀಡಲಾಗಿದೆ. ಶಾಲೆಗಳಿಗೆ ಎಸ್ ಪಿ ಭೇಟಿ ನೀಡಬೇಕು. ಪೋಷಕರು,ಶಾಲಾ ಆಡಳಿತ ಮಂಡಳಿ ಜೊತೆ ಜಿಲ್ಲಾಧಿಕಾರಿಗಳು ನಿರಂತರ ಸಭೆ ನಡೆಸಬೇಕು. ಶಾಂತಿಪಾಲನ ಸಭೆ ನಡೆಸಬೇಕು. ಸಣ್ಣ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಆದ್ಯತೆಯ ಮೇರೆಗೆ ಕಾನೂನು ಕಾಪಾಡಿಕೊಂಡು ಹೋಗಬೇಕು. ಹೊರಗಿನ ಶಕ್ತಿಗಳಿಗೆ ಅವಕಾಶ ಕೊಡಬಾರದು. ರಾಜಕೀಯ ಪಕ್ಷಗಳು,ಧಾರ್ಮಿಕ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಂತಿ ಸಭೆ ನಡೆಸಬೇಕು. ಮಾಧ್ಯಮಗಳು ವಸ್ತುಸ್ಥಿತಿಯನ್ನು ವಿವರಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ : ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ವಿದ್ಯಾರ್ಥಿನಿಗೆ ಬಹುಮಾನಗಳ ಮಹಾಪೂರ
ಅಲ್ಲಾ ಹು ಅಕ್ಬರ್ ಕೂಗಿದ ಮಂಡ್ಯ ಯುವತಿಗೆ ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ಉಡುಗೊರೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ಗಮನಿಸುತ್ತಿದ್ದೇವೆ, ಮಂಡ್ಯದ ಯುವತಿ ಮಾತ್ರವಲ್ಲ. ರಾಜ್ಯದ ಕೆಲ ಮಕ್ಕಳ ಪೋಷಕರು ಮತೀಯ ಸಂಘಟನೆಯಲ್ಲಿದ್ದಾರೆ ಎಂಬ ಮಾಹಿತಿ ಇದೆ. ಆ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದರು.