ಗುಂಡ್ಲುಪೇಟೆ: ಪ್ರಧಾನಿ ನರೇಂದ್ರ ಮೋದಿಗಾಗಿ ಹೆಲಿಪ್ಯಾಡ್ ನಿರ್ಮಾಣಕ್ಕೆ ಬಳಸಿಕೊಂಡಿದ್ದ ಜಮೀನನ್ನು ಯಥಾಸ್ಥಿತಿ ತರುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚನೆ ನೀಡಿದ್ದಾರೆ.
ತಾಲೂಕಿನ ಬಂಡೀಪುರ ಅಭಯಾರಣ್ಯದ ಮೇಲುಕಾಮನಹಳ್ಳಿ ಬಳಿ ಏಪ್ರಿಲ್ 9ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಜಮೀನಿನಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ನಾಲ್ಕು ತಿಂಗಳು ಕಳೆದರೂ ಜಮೀನು ದುರಸ್ತಿಪಡಿಸಿ ಮಾಲಿಕರಿಗೆ ನೀಡಿರಲಿಲ್ಲ.
ಈ ಕುರಿತು ಉಯಯವಾಣಿಯಲ್ಲಿ ಸೆ.8ರಂದು ಮೋದಿಗಾಗಿ ಹೆಲಿಪ್ಯಾಡ್‌ಗೆ ಜಮೀನು ಕೊಟ್ಟ ರೈತ ಕಂಗಾಲು ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಲಾಗಿತ್ತು. ಈ ವರದಿಗೆ ಸ್ಪಂದಿಸಿರುವ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಶುಕ್ರವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಜಮೀನು ಮಾಲೀಕ ಕೆಬ್ಬೇಪುರ ಗ್ರಾಮದ ಕೆ.ಎನ್.ಶಿವಣ್ಣ ಜೊತೆ ಮಾತುಕತೆ ನಡೆಸಿದ ಜಿಲ್ಲಾಧಿಕಾರಿ ಶಿಲ್ಪಾನಾಗ್, ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಿ ಬೇಡಿ. ಇದು ನನ್ನ ಗಮನಕ್ಕೆ ಬಂದಿರಲಿಲ್ಲ. ನಾನು ನೂತನವಾಗಿ ಜಿಲ್ಲಾಧಿಕಾರಿಯಾಗಿ ಅಧಿಕಾರಿ ವಹಿಸಿಕೊಂಡಿದ್ದೇನೆ. ಈ ವಿಚಾರದ ಮಾಹಿತಿ ತಿಳಿದ ಕೂಡಲೇ ಜಮೀನು ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಾಲಿಕರಿಗೆ ಹೇಳಿದರು.
ಒಂದು ವಾರ ಗಡುವು: ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮಾತನಾಡಿ, ಮುಂದಿನ ಮಂಗಳವಾರದ ಒಳಗೆ ಜಮೀನಿನಲ್ಲಿ ಹೆಲಿ ಪ್ಯಾಡ್ ನಿರ್ಮಾಣಕ್ಕೆ ಬಳಸಿರುವ ಕಾಂಕ್ರೀಟ್ ತೆಗೆದು ಹಾಕಿ, ಹಿಂದೆ ಇದ್ದ ಮಾದರಿಯಲ್ಲಿ ಜಮೀನು ಸರಿಪಡಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಮಹೇಶ್ ಅವರಿಗೆ ತಾಕೀತು ಮಾಡಿದರು.
ಮನೆ ಕಟ್ಟಿಸಿಕೊಡಿ: ಜಮೀನು ಮಾಲಿಕ ಕೆ. ಎನ್.ಶಿವಣ್ಣ ಮಾತನಾಡಿ, ಹೆಲಿಪ್ಯಾಡ್ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದ್ದ ಜಮೀನು ದುರಸ್ತಿ ಪಡಿಸುವ ಜೊತೆಗೆ ಹೆಲಿಪ್ಯಾಡ್ ನಿರ್ಮಾಣದ ವೇಳೆ ಜಮೀನಿನಲ್ಲಿದ್ದ ಮನೆಯನ್ನು ಕೆಡವಲಾಗಿದೆ. ಅದನ್ನು ಕೂಡ ಕಟ್ಟಿಸಿಕೊಡುವಂತೆ ಮನವಿ ಮಾಡಿದರು. ಈ ಬಗ್ಗೆಯೂ ಕೂಡ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ರಮೇಶ್ ಬಾಬು, ಉಪ ತಹಸೀಲ್ದಾರ್ ನಂದಿನಿ, ಎಸಿಎಫ್ ನವೀನ್, ಕಂಟ್ರಾಕ್ಟರ್ ಜಯಕುಮಾರ್, ಗ್ರಾಮ ಲೆಕ್ಕಿಗ ನದೀಂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.