ಹುಬ್ಬಳ್ಳಿ: ಜಿಲ್ಲೆಯಲ್ಲಿ ಮತದಾರರ ನೋಂದಣಿ ಕಾರ್ಯ ಚೆನ್ನಾಗಿ ನಡೆಯುತ್ತಿದೆ. 18 ಹಾಗೂ 19 ವರ್ಷ ವಯೋಮಾನದ ಯುವ ಮತದಾರರು ಹೆಚ್ಚು ನೋಂದಾಯಿಸಿಕೊಳ್ಳಲು ಕಾಲೇಜು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಇತರೆ ಜನ ಸೇರುವ ಜಾಗಗಳಲ್ಲಿ ಪ್ರಚಾರ ಕೈಗೊಳ್ಳುವಂತೆ ಜಿಲ್ಲೆಯ ಮತದಾರರ ಯಾದಿ ವೀಕ್ಷಕರು ಹಾಗೂ ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾದ ಡಾ| ರವಿಕುಮಾರ ಸುರಪುರ ಅಧಿಕಾರಿಗಳಿಗೆ ಸೂಚಿಸಿದರು.
ಮತದಾರರ ನೋಂದಣಿ ವಿಶೇಷ ಅಭಿಯಾನದ ದಿನವಾದ ರವಿವಾರ ವಿವಿಧೆಡೆ ನೋಂದಣಿ ಕಾರ್ಯ ಪರಿಶೀಲಿಸಿದ ನಂತರ ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿದರು. ನ. 28ರಂದು ಮತ್ತೆ ನಡೆಯಲಿರುವ ವಿಶೇಷ ಮತದಾರರ ನೋಂದಣಿ ಅಭಿಯಾನದಲ್ಲಿ ಎಲ್ಲಾ ಮತಗಟ್ಟೆ ಅಧಿಕಾರಿಗಳು ಯುವ ಮತದಾರರು ಹಾಗೂ ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಪರಿಶೀಲಿಸಿ ತಿದ್ದುಪಡಿ, ನೋಂದಣಿ, ವಿಳಾಸ ಬದಲಾವಣೆ ಇದ್ದಲ್ಲಿ ಅರ್ಜಿ ಸಲ್ಲಿಸುವಂತೆ ಪ್ರಚಾರ ಕೈಗೊಳ್ಳಿ. ಸಾರ್ವಜನಿಕರು ಈ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು.
ಸಾರ್ವಜನಿಕರು ಮತಗಟ್ಟೆಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. VOTER HELPLINE APP ಬಳಸಿ ತಮ್ಮ ಮೊಬೈಲ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಪಂ ಸಿಇಒ ಡಾ| ಬಿ.ಸುಶೀಲಾ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪ ವಿಭಾಗಾಧಿಕಾರಿ ಡಾ| ಬಿ. ಗೋಪಾಲಕೃಷ್ಣ, ಡಿಡಿಪಿಐ ಮೋಹನಕುಮಾರ ಹಂಚಾಟೆ ಇನ್ನಿತರರಿದ್ದರು.
ಬಿಎಲ್‌ಒ ಕಾರ್ಯನಿರ್ವಹಣೆ ವೀಕ್ಷಣೆ ಹುಬ್ಬಳ್ಳಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಯುವ ಮತದಾರರ ಮಿಂಚಿನ ನೋಂದಣಿ ಕಾರ್ಯವನ್ನು ಮತದಾರರ ಪಟ್ಟಿ ನೋಂದಣಿ ವೀಕ್ಷಕರೂ ಆಗಿರುವ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ| ರವಿಕುಮಾರ ಸುರಪುರ ರವಿವಾರ ಪರಿಶೀಲಿಸಿದರು.
ನವಲಗುಂದ ತಾಲೂಕು ಕಾಲವಾಡ, ಕರ್ಲವಾಡ, ಹುಬ್ಬಳ್ಳಿ ತಾಲೂಕು ಬ್ಯಾಹಟ್ಟಿ ಹಾಗೂ ಶಹರದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ, ಬೂತ್‌ಮಟ್ಟದ ಅಧಿಕಾರಿಗಳು (ಬಿಎಲ್‌ಒ) ನಿರ್ವಹಿಸುತ್ತಿರುವ ಕಾರ್ಯಗಳನ್ನು ವೀಕ್ಷಿಸಿದರು. ಮತದಾರರ ಹೆಸರು ನೋಂದಣಿಗೆ ಪಡೆಯುತ್ತಿರುವ ಅರ್ಜಿ ನಮೂನೆಗಳು, ಇಆರ್‌ಒ ನೆಟ್‌ಗೆ ದಾಖಲಿಸುವುದು, ಗರುಡ ಆ್ಯಪ್ ಬಳಕೆ ಮತ್ತಿತರ ಕಾರ್ಯಗಳನ್ನು ಪರಿಶೀಲಿಸಿ, 18 ವರ್ಷ ತುಂಬಿದ ಅರ್ಹ ಮತದಾರರ ನೋಂದಣಿಗೆ ಆದ್ಯತೆ ನೀಡಲು ಸೂಚಿಸಿದರು. ಉಪ ವಿಭಾಗಾಧಿಕಾರಿ ಡಾ| ಬಿ. ಗೋಪಾಲಕೃಷ್ಣ, ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಡಾ| ಎನ್.ಆರ್. ಪುರುಷೋತ್ತಮ, ನವಲಗುಂದ ತಹಶೀಲ್ದಾರ್ ನವೀನ ಹುಲ್ಲೂರ, ಹುಬ್ಬಳ್ಳಿ ಶಹರ ತಹಶೀಲ್ದಾರ್ ಶಶಿಧರ ಮಾಡ್ಯಾಳ, ಗ್ರಾಮೀಣ ತಹಶೀಲ್ದಾರ್ ಪ್ರಕಾಶ ನಾಶಿ ಮೊದಲಾದವರಿದ್ದರು.