ಕಲಬುರಗಿ: ಈ ವರ್ಷ ಉತ್ತಮ ಮಳೆ ಲಕ್ಷಣಗಳು ಕಂಡು ಬರುತ್ತಿವೆ. ಹೀಗಾಗಿ ಮುಂಗಾಮಿಗೆ ಬೇಕಾಗುವ ಅಗತ್ಯ ಬೀಜಗಳ ದಾಸ್ತಾನು ಮಾಡುವುದು ಬಹಳ ಅಗತ್ಯವಾಗಿದೆ ಎಂದು ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು. ಕ್ಷೇತ್ರದ ನರೋಣಾದ ರೈತ ಸಂಪರ್ಕ ಕೇಂದ್ರದಲ್ಲಿ
ಪ್ರಸಕ್ತ ಸಾಲಿನ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಅಲ್ಪಾವಧಿ ಬೆಳೆಗಳಿಗೂ ರೈತರು ಒತ್ತು ನೀಡುವುದರಿಂದ ಹೆಸರು, ಉದ್ದು, ಸೂರ್ಯಕಾಂತಿ ಬೀಜ ಸೇರಿದಂತೆ ಇತರ ಎಲ್ಲ ಬೀಜ ಎಲ್ಲೂ ಕೊರತೆಯಾಗದಂತೆ ನೋಡಿಕೊಳ್ಳಿ ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರಕ್ಕೂ ಆದ್ಯತೆ ನೀಡಿ, ರೈತ ಸಂಪರ್ಕಕ್ಕೆ ಬರುವ ರೈತರಿಗೆ ಕೊರೊನಾ ಕುರಿತು ಮಾಹಿತಿ ನೀಡಿ ಎಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೋವಿಡ್ ದಿಂದ ಸಂಕಷ್ಟಕ್ಕೆ ಒಳಗಾಗಿರುವ ತೋಟಗಾರಿಕೆ ಬೆಳೆಗಳಿಗೆ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಈಗಾಗಲೇ ಪ್ರಕಟಿಸಿದ್ದಾರೆ. ಹೂವಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ರೈತರ ಸಮೀಕ್ಷೆ ನಡೆದಿದೆ ಎಂದರು. ಜಿಪಂ ಅಧ್ಯಕ್ಷೆ ಸುವರ್ಣಾ ಮಲಾಜಿ, ಜಿಪಂ ಸದಸ್ಯೆ ವಿಜಯಲಕ್ಷ್ಮೀ ರಾಗಿ, ಆಳಂದ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ್, ನರೋಣಾ ಕೃಷಿ ಅಧಿಕಾರಿ ಬಸವರಾಜ ಅಟ್ಟೂರ, ಸಹಾಯಕ ಕೃಷಿ ಅಧಿಕಾರಿಗಳಾದ ಅಫ್ರೋಜಾ, ಸುರೇಖಾ ಅಂಕಲಗಿ, ಲೆಕ್ಕ ಸಹಾಯಕ ಶರಣು ಹಿರೇಗೌಡ, ಎಟಿಎಂ ಲಕ್ಷ್ಮೀಪುತ್ರ ಸ್ವಾಮಿ, ಕಲಬುರಗಿ ಗ್ರಾಮೀಣ ಮಂಡಲದ ಅಧ್ಯಕ್ಷ ಸಂಗಮೇಶ ವಾಲಿ, ರೈತ ಮುಖಂಡರಾದ ವೀರೂ ಸ್ವಾಮಿ, ಶಂಭುಲಿಂಗ ಡೆಂಕಿ, ಮಂಜು ಕೊರೆ, ವಿಠಲ ಸೇರಿದಂತೆ ಮುಂತಾದವರಿದ್ದರು.
ರೈತ ಸಂಪರ್ಕ ಕೇಂದ್ರದಿಂದ ಸಿಗುವ ಸಬ್ಸಿಡಿ ಬೀಜ ಪಡೆದು ಸದುಪಯೋಗ ಪಡೆದುಕೊಳ್ಳಬೇಕು. ಕೃಷಿ ಅಧಿಕಾರಿಗಳಿಂದ ಸಲಹೆ ಪಡೆದು ಬೆಳೆ ಬೆಳೆದು ಉತ್ತಮ ಇಳುವರಿ ಪಡೆಯಬೇಕು.-
ಬಸವರಾಜ ಮತ್ತಿಮಡು, ಶಾಸಕರು.
ಆಳಂದ ತಾಲೂಕಿನಲ್ಲಿ 1,31,131 ಹೆಕ್ಟೇರ್‌ನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಮುಂಗಾರು ಆರಂಭದ ಮುಂಚೆಯೇ ರೋಹಿಣಿ ಉತ್ತಮವಾಗಿ ಬರುತ್ತಿದೆ. ಬಿತ್ತನೆ ಸಕಾಲಕ್ಕೆ ಶುರುವಾಗುವ ಎಲ್ಲ ಲಕ್ಷಣಗಳು ಕಾಣುತ್ತಿರುವುದರಿಂದ ಎಲ್ಲ ಅಗತ್ಯ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ಪ್ರಮುಖವಾಗಿ ತೊಗರಿ, ಉದ್ದು, ಹೆಸರು, ಸೂರ್ಯಕಾಂತಿ, ಮೆಕ್ಕೆಜೋಳ, ಸಜ್ಜೆ ಬೀಜ ಲಭ್ಯವಿದೆ.
– ಶರಣಗೌಡ ಪಾಟೀಲ, ಸಹಾಯಕ ಕೃಷಿ ಅಧಿಕಾರಿ ಆಳಂದ.