Advertisement

Rohit Sharma ಟಿ20 ಪಯಣ ಮುಕ್ತಾಯದ ಸೂಚನೆ ; ಬುಮ್ರಾ ಕತೆ ಏನು?

11:18 PM Dec 15, 2023 | Team Udayavani |

ಮುಂಬಯಿ: ಅಚ್ಚರಿಯ ಹಾಗೂ ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್‌ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ. ಇದರೊಂದಿಗೆ ಮುಂಬೈಗೆ ಅತ್ಯಧಿಕ 5 ಸಲ ಐಪಿಎಲ್‌ ಚಾಂಪಿಯನ್‌ ಪಟ್ಟದ ಮೇಲೆ ಕೂರಿಸಿದ ರೋಹಿತ್‌ ಶರ್ಮ ಅವರ ಟಿ20 ಕ್ರಿಕೆಟ್‌ ಕೊನೆಗೊಂಡಿರುವ ಸೂಚನೆಯೊಂದು ಲಭಿಸಿದೆ.

Advertisement

ಕಳೆದ ಟ್ರೇಡಿಂಗ್‌ ವೇಳೆ ಹಾರ್ದಿಕ್‌ ಪಾಂಡ್ಯ ಗುಜರಾತ್‌ನಿಂದ ಮುಂಬೈಗೆ ಮರಳಿದಾಗಲೇ ಐಪಿಎಲ್‌ನಲ್ಲಿ ಭಾರೀ ಸಂಚಲನವೊಂದು ಮೂಡಿತ್ತು. ಇದೀಗ ಒಂದು ಹಂತದ ಕುತೂಹಲಕ್ಕೆ ತೆರೆ ಬಿದ್ದಿದೆ.

ರೋಹಿತ್‌ ಶರ್ಮ ಐಪಿಎಲ್‌ನಲ್ಲಿ ಮುಂದುವರಿಯುವರೇ, ಟಿ20ಯಲ್ಲಿ ಭಾರತವನ್ನು ಪ್ರತಿನಿಧಿಸುವರೇ ಎಂಬ ಪ್ರಶ್ನೆಗಳು ಈ ಸಂದರ್ಭದಲ್ಲಿ ತಲೆಯೆತ್ತಿದ್ದವು. ಈಗಿನ ಬೆಳವಣಿಗೆ ಪ್ರಕಾರ ಇದಕ್ಕೆಲ್ಲ “ಇಲ್ಲ’ ಎಂಬುದೇ ಉತ್ತರವಾಗಿದೆ.

ವಿಶ್ವಕಪ್‌ ಗುರಿ
ಮುಂದಿನ ವರ್ಷದ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯನ್ನು ದೃಷ್ಟಿಯಲ್ಲಿ ರಿಸಿಕೊಂಡೇ ಈ ಬೆಳವಣಿಗೆ ಸಂಭವಿಸಿ ರುವುದು ಸ್ಪಷ್ಟ. ಅರ್ಥಾತ್‌, ಟಿ20 ವಿಶ್ವ ಕಪ್‌ನಲ್ಲೂ ಪಾಂಡ್ಯ ಅವರೇ ಭಾರತ ತಂಡದ ನಾಯಕರಾಗಿರುತ್ತಾರೆ ಎಂಬ ಸೂಚನೆಯೊಂದು ಸಿಕ್ಕಿದೆ.

“ಮುಂಬೈ ಇಂಡಿಯನ್ಸ್‌ ಐಪಿಎಲ್‌ನ ಅತ್ಯಂತ ಯಶಸ್ವಿ ತಂಡ. 5 ಸಲ ಚಾಂಪಿಯನ್‌ ಆಗಿ ಮೂಡಿಬಂದಿದೆ. ಈ ಐದೂ ಸಂದರ್ಭಗಳಲ್ಲಿ ರೋಹಿತ್‌ ಶರ್ಮ ಅವರೇ ತಂಡದ ಸಾರಥಿಯಾಗಿದ್ದರೆಂಬುದು ಅವರ ಜನಪ್ರಿಯತೆಗೆ ಸಾಕ್ಷಿ. ಆದರೆ ತಂಡದ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ನಾಯಕತ್ವದ ಬದಲಾವಣೆ ಮಾಡಲಾಗಿದೆ’ ಎಂದು ಮುಂಬೈ ಇಂಡಿಯನ್ಸ್‌ ಮುಖ್ಯಸ್ಥ ಮಾಹೇಲ ಜಯವರ್ಧನೆ ತಿಳಿಸಿದ್ದಾರೆ.

Advertisement

“ಮುಂಬೈ ಯಾವತ್ತೂ ಅಸಾಧಾರಣ ನಾಯಕತ್ವ ಕಂಡ ತಂಡ. ಸಚಿನ್‌ ಅವರಿಂದ ಹರ್ಭಜನ್‌ ತನಕ, ಪಾಂಟಿಂಗ್‌ ಅವರಿಂದ ರೋಹಿತ್‌ ತನಕ ಉತ್ತಮ ಸಾರಥಿಗಳನ್ನು ಕಂಡಿದೆ. ಇವರಲ್ಲಿ ರೋಹಿತ್‌ ಅವರದು ಅತ್ಯಂತ ದೊಡ್ಡ ಯಶಸ್ಸು. ನಮ್ಮ ತಂಡ ರೋಹಿತ್‌ಗೆ ಕೃತಜ್ಞವಾಗಿದೆ’ ಎಂದು ಮುಂಬೈ ತನ್ನ ವೆಬ್‌ಸೈಟ್‌ನಲ್ಲಿ ಬರೆದಿದೆ.
ಹಾರ್ದಿಕ್‌ ಪಾಂಡ್ಯ ಗುಜರಾತ್‌ ಟೈಟಾನ್ಸ್‌ನ ಯಶಸ್ವಿ ನಾಯಕರಾಗಿ ಹೆಸರು ಗಳಿಸಿದ್ದರು. ಗುಜರಾತ್‌ ತಂಡವನ್ನು ಮೊದಲ ವರ್ಷವೇ ಪಟ್ಟಕ್ಕೇರಿಸಿದ್ದು, ಸತತ 2ನೇ ವರ್ಷ ಫೈನಲ್‌ಗೆಏರಿಸಿದ್ದೆಲ್ಲ ಇವರ ಸಾಧನೆ ಎಂಬುದನ್ನು ಮರೆಯುವಂತಿಲ್ಲ. ಹಾಗೆಯೇ ಮುಂಬೈ ತಂಡದ ಯಶಸ್ಸಿನ ಅವಧಿಯಲ್ಲೂ (2015-2021) ಪಾಂಡ್ಯ ತಂಡದಲ್ಲಿದ್ದರು.

4 ಲಕ್ಷ ಫಾಲೋವರ್ ನಷ್ಟ!
ರೋಹಿತ್‌ ಅವರನ್ನು ಕೈಬಿಟ್ಟು ಪಾಂಡ್ಯ ಅವರಿಗೆ ಪಟ್ಟ ಕಟ್ಟಿದ ಕೆಲವೇ ಕ್ಷಣಗಳಲ್ಲಿ ಮಂಬೈ ಇಂಡಿಯನ್ಸ್‌ ಫ್ರಾಂಚೈಸಿಯು ಟ್ವಿಟರ್‌ನಲ್ಲಿ (ಎಕ್ಸ್‌) ನಾಲ್ಕು ಲಕ್ಷಕ್ಕೂ ಹೆಚ್ಚು ಫಾಲೋವರ್ಗಳನ್ನು ಕಳೆದುಕೊಂಡಿದೆ.

ಬುಮ್ರಾ ಕತೆ ಏನು?
ಜಸ್‌ಪ್ರೀತ್‌ ಬುಮ್ರಾ ಕೂಡ ಮುಂಬೈ ನಾಯಕತ್ವದ ಆಕಾಂಕ್ಷಿಯಾಗಿದ್ದರು, ಅವರಿಗೆ ಹಾರ್ದಿಕ್‌ ಪಾಂಡ್ಯ ಪುನರಾಗಮನದಿಂದ ಅಸಮಾಧಾನ ವಾಗಿದೆ ಎಂದೆಲ್ಲ ಸುದ್ದಿಯಾಗಿತ್ತು. ಬುಮ್ರಾ ಆರ್‌ಸಿಬಿ ಸೇರಿಕೊಳ್ಳುತ್ತಾರೆ ಎಂದೂ ಕೇಳಿಬಂದಿತ್ತು.

ಆದರೆ ಐಪಿಎಲ್‌ ರೀಟೇನಿಂಗ್‌ ಪ್ರಕ್ರಿಯೆ ಅವಧಿ ನ. 26ಕ್ಕೆ ಮುಗಿದರೂ ಡಿ. 12ರ ತನಕ ಪರಿವರ್ತನೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಡೆಡ್‌ಲೈನ್‌ ಮುಗಿದೊಡನೆಯೇ ಪಾಂಡ್ಯ ಅವರ ನಾಯಕತ್ವವನ್ನು ಘೋಷಿಸಲಾಗಿದೆ. ಹೀಗಾಗಿ ಬುಮ್ರಾ ಕೂಡ ಇವರ ಕೈಕೆಳಗೆ ಆಡಬೇಕಾದುದು ಅನಿವಾರ್ಯ.

Advertisement

Udayavani is now on Telegram. Click here to join our channel and stay updated with the latest news.

Next