Advertisement
ವಿವಿಧ ಜಿಲ್ಲಾಧಿಕಾರಿಗಳು, ನಗರ ಪಾಲಿಕೆ ಆಯಕ್ತರು, ಪೊಲೀಸ್ ವರಿಷ್ಠಾಧಿಕಾರಿಗಳು, ನಗರ ಪೊಲೀಸ್ ಆಯುಕ್ತರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ವೈದ್ಯಕೀಯ ಕಾಲೇಜು ಡೀನ್, ಜಿಲ್ಲಾ ಶಸ್ತ್ರಚಿಕಿತ್ಸಕರ ಸಹಿತ ವಿವಿಧ ಹಿರಿಯ ಅಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಕೋವಿಡ್ 19 ನಿಯಂತ್ರಣ ಯೋಜನೆ, ಸಮನ್ವಯತೆ ಮತ್ತು ನಿರ್ಧಾರ ಕೈಗೊಳ್ಳುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಿಗೂ ಕೂಡಾ ಕೋವಿಡ್ 19 ಸೊಂಕು ತಗಲುವ ಸಾಧ್ಯತೆ ಇದೆ. ಆ ವೇಳೆ ಆಧಿಕಾರಿಯನ್ನು ಬದಲಾಯಿಸಿ ಹೊಸ ಅಧಿಕಾರಿ ನೇಮಕ ಮಾಡಿದಾಗ ನಿಯಂತ್ರಣ ಕಾರ್ಯಗಳ ಬಗ್ಗೆ ಗೊಂದಲ ಉಂಟಾಗಿ ಅಡಚಣೆಯಾಗಬಹುದು. ಹೀಗಾಗಿ ಅಧಿಕಾರಿಗಳು ಸೋಂಕು ಕಡಿಮೆ ತಗಲಿದ್ದರೆ ಅಧಿಕಾರಿಯ ಸೇವೆ, ಸಾಮರ್ಥ್ಯ, ಜ್ಞಾನ ಮತ್ತು ಪರಿಸ್ಥಿತಿ ನಿಯಂತ್ರಿಸುವ ಅನುಭವವನ್ನು ಬಳಸಿಕೊಳ್ಳಬೇಕಿದೆ ಎಂದು ಆರೋಗ್ಯ ಇಲಾಖೆ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.
ಸೋಂಕು ತಗಲಿರುವ ಹಿರಿಯ ಅಧಿಕಾರಿಗೆ ಸೋಂಕು ಪ್ರಮಾಣ ಕಡಿಮೆ ಇದ್ದರೆ ಅಂಥ ಅಧಿಕಾರಿಯನ್ನು ಸರಕಾರಿ ಕಟ್ಟಡದಲ್ಲಿ ಕ್ವಾರಂಟೈನ್ ಮಾಡಬೇಕು. ಅವರಿಗೆ ದೂರವಾಣಿ, ಇಂಟರ್ನೆಟ್ ಸಂಪರ್ಕ ಕಲ್ಪಿಸಬೇಕು. ಇಲ್ಲಿಂದಲೇ ಅವರು ಜಿಲ್ಲಾ ಮಟ್ಟದ ತಂಡದಲ್ಲಿ ಕಾರ್ಯನಿರ್ವಹಿಸುವ ಇತರರಿಗೆ ಸಂಪರ್ಕಿಸಿ ಸಲಹೆ, ಸೂಚನೆ, ಮೇಲ್ವಿಚಾರಣೆ ಮಾಡಬಹುದು. ಒಂದು ವೇಳೆ ಗಂಭೀರ ಪ್ರಮಾಣದಲ್ಲಿ ಸೋಂಕು ಉಂಟಾಗಿದ್ದರೆ ಅವರನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಬೇಕು. ಈ ವೇಳೆ ಹೊಸದಾಗಿ ನೇಮಕವಾದ ಅಧಿಕಾರಿಯು ಸಂಪೂರ್ಣ ಜವಾಬ್ದಾರಿ ಮತ್ತು ನಿಯಂತ್ರಣ ಸಾಧಿಸಿ ಕೆಲಸ ಮಾಡಬೇಕು ಎಂದು ಆದೇಶಿಸಿದ್ದಾರೆ.