Advertisement

ರಸಗೊಬ್ಬರ ಹೆಚ್ಚಿನ ದರಕ್ಕೆ ಮಾರಾಟ-ನೋಟಿಸ್‌

12:39 PM Aug 11, 2020 | Suhan S |

ಹರಪನಹಳ್ಳಿ: ತಾಲೂಕಿನಲ್ಲಿ ರಸಗೊಬ್ಬರವನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದ ಆರೋಪದ ಮೇಲೆ 4 ಮಾರಾಟ ಮಳಿಗೆ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಗೊಂದಿ ತಿಳಿಸಿದರು.

Advertisement

ಪಟ್ಟಣದ ತಾಪಂ ರಾಜೀವಗಾಂಧಿ ಸಭಾಂಗಣದಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದ ಅವರು, ದಾಸ್ತಾನು ವಿವರ ಮತ್ತು ದರ ಪಟ್ಟಿ ಪ್ರದರ್ಶನ ಮಾಡದ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಎಚ್ಚರಿಕೆ ನೀಡಲಾಗಿದೆ. ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿರುವುದರಿಂದ 100 ಟನ್‌ ಯೂರಿಯ ಗೊಬ್ಬರವನ್ನು ತಾಲೂಕಿಗೆ ರವಾನಿಸುವಂತೆ ಶಾಸಕರು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದ್ದು, ಬುಧವಾರ ಸೊಸೈಟಿಗಳಿಗೆ ತಲುಪಲಿದೆ ಎಂದರು.

ಉಪಾಧ್ಯಕ್ಷ ಎಲ್‌.ಮಂಜ್ಯಾನಾಯ್ಕ ಅವರು, ಸಮೃದ್ಧವಾಗಿ ಮಳೆ ಬಂದಿರುವ ಹಿನ್ನೆಲೆಯಲ್ಲಿ ರೈತರು ಬೆಳೆಗಳಿಗೆ ಸಾಕಷ್ಟು ರಸಗೊಬ್ಬರ ಹಾಕುತ್ತಿದ್ದಾರೆ. ಹೀಗಾಗಿ ಯೂರಿಯಾ ಗೊಬ್ಬರದ ಕೊರತೆ ತಾಲೂಕಿನಲ್ಲಿ ಕಂಡು ಬಂದಿದ್ದು, ಪುನಃ ಇದೀಗ 500 ಟನ್‌ ಯೂರಿಯಾ ತರಿಸಲಾಗುತ್ತದೆ. ಯೂರಿಯಾ ಗೊಬ್ಬರವನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಹಾಕಬಾರದು, ಎಂದಾಗ ಇದಕ್ಕೆ ಧ್ವನಿಗೂಡಿಸಿದ ಅಧ್ಯಕ್ಷೆ ಅನ್ನಪೂರ್ಣಮ್ಮ ಅವರು, ರೈತರಿಗೆ ಅಗತ್ಯ ಗೊಬ್ಬರ ಒದಗಿಸಬೇಕು. ಬೀಜ, ಗೊಬ್ಬರಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತವರ ವಿರುದ್ದ ಕ್ರಮಕೈಗೊಳ್ಳುವಂತೆ ಕೃಷಿ ನಿರ್ದೇಶಕರಿಗೆ ಸೂಚಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಸಂಬಂದಿಸಿದಂತೆ ವಿದ್ಯುತ್‌ ಸಂಪರ್ಕದ ಸುರಕ್ಷತಾ ಕ್ರಮ ಕೈಗೊಳ್ಳಬೇಕೆಂದು ಬೆಸ್ಕಾಂ ಹರಪನಹಳ್ಳಿ ಉಪವಿಭಾಗದ ಎಇಇ ಭೀಮಪ್ಪ ತಿಳಿಸಿದಾಗ ಒಂದೊಂದು ಗ್ರಾ.ಪಂಗಳಲ್ಲಿ ಮಾಸಿಕ ವಿದ್ಯುತ್‌ ಬಿಲ್‌ 7-8 ಲಕ್ಷರೂವರೆಗೂ ಬಾಕಿಯಿದೆ ಎಂದು ತೆಲಿಗಿ ಉಪವಿಭಾಗದ ಎಇಇ ಜಯಪ್ಪ ತಿಳಿಸಿದರು. ಗ್ರಾಮಗಳಲ್ಲಿ ಬೀದಿ ದೀಪ ಹಗಲು-ರಾತ್ರಿ ಬೆಳಗಿದರೆ ಹೇಗೆ? ಸಿಬ್ಬಂದಿಗಳು ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆಂಚನಗೌಡ ಬೇಸರ ವ್ಯಕ್ತಪಡಿಸಿದರು.

ಪಡಿತರವನ್ನು ಸಮರ್ಪಕವಾಗಿ ವಿತರಣೆ ಮಾಡದ ಕಾರಣ ತಾಲೂಕಿನಲ್ಲಿ ನಾಲ್ಕು ನ್ಯಾಯ ಬೆಲೆ ಅಂಗಡಿಗಳನ್ನು ಅಮಾನತು ಮಾಡಲಾಗಿದೆ ಎಂದು ಆಹಾರ ಇಲಾಖೆಯ ನಿರೀಕ್ಷಕರು ತಿಳಿಸಿದರು. ತಾಲೂಕಿನಲ್ಲಿ 586 ವಠಾರ ಶಾಲೆಗಳನ್ನು ಆರಂಭಿಸಲಾಗಿದೆ ಎಂದು ಬಿಇಒ ವೀರಭದ್ರಯ್ಯ ತಿಳಿಸಿದರು. ತಾ.ಪಂಗೆ ಅನುದಾನ ಕೇವಲ ಹೇಳಿಕೆಯಲ್ಲಿ ಮಾತ್ರ ಬರುತ್ತದೆ, ಆದರೆ ಕೈಗೆ ಬರುತ್ತಿಲ್ಲ. ಈ ವರ್ಷ ಅನುದಾನವೇ ಬಂದಿಲ್ಲ. ತಾಪಂನಲ್ಲಿ ಈಗ ಏನು ಉಳಿದಿಲ್ಲ ಎಂದು ತಾಪಂ ಅಧ್ಯಕ್ಷೆ ಅನ್ನಪೂರ್ಣಮ್ಮ ಬೇಸರ ವ್ಯಕ್ತಪಡಿಸಿದರು.

Advertisement

ಸ್ಥಾಯಿ ಸಮಿತಿ ಅಧ್ಯಕ್ಷ ಕೆಂಚನಗೌಡ, ಕಾರ್ಯನಿರ್ವಾಹಕಾದಿಕಾರಿ ಅನಂತರಾಜು, ಯೋಜನಾಧಿಕಾರಿ ವಿಜಯಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next