ವಿಜಯಪುರ: ಜಿಲ್ಲೆಯಲ್ಲಿ ಅನರ್ಹ ಕುಟುಂಬಗಳಿಗೆ ನೀಡಿರುವ ಬಿಪಿಎಲ್ ಕಾರ್ಡ್‌ಗಳನ್ನು ಪತ್ತೆ ಮಾಡಿ, ನಿಯಮಾನುಸಾರ ರದ್ದುಪಡಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸರ್ಕಾರ ಕೋವಿಡ್-19 ವೈರಾಣು ಹರಡುವಿಕೆಯಿಂದ ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲೆ ದುಷ್ಪರಿಣಾಮ ಆಗಿದ್ದರ ಹಿನ್ನೆಲೆಯಲ್ಲಿ ಆದೇಶ ಹೊರಡಿಸಿ, ಪ್ರಾದೇಶಿಕ ಸಾರಿಗೆ ಇಲಾಖೆ ಆಯುಕ್ತರಿಂದ ಕಾರು, ಜೀಪ್, ಟ್ರ್ಯಾಕ್ಟರ್ ಇತ್ಯಾದಿ 4 ಚಕ್ರದ ವಾಹನ ಹೊಂದಿರುವ ಪಡಿತರ ಚೀಟಿದಾರರ ಮಾಹಿತಿ ಸಂಗ್ರಹಿಸಿ ಅನರ್ಹರ ಪಡಿತರ ಚೀಟಿ ರದ್ದುಪಡಿಸುವಂತೆ ಸೂಚಿಸಿದ್ದಾರೆ.
ವಾಹನ ನೋಂದಣಿ (ಆರ್.ಸಿ.) ಪುಸ್ತಕದಲ್ಲಿರುವ ವಿಳಾಸ ಮತ್ತು ಪಡಿತರ ಚೀಟಿಯ ವಿಳಾಸ ತಾಳೆ ಮಾಡುವುದು, ವಾಹನ ಮಾಲೀಕರ ಆಧಾರ್ ಸಂಖ್ಯೆ ಪಡಿತರ ಚೀಟಿಗೆ ಜೋಡಣೆಯಾಗಿರುವ ಆಧಾರ್ ಸಂಖ್ಯೆಗೆ ತಾಳೆ ಮಾಡುವುದು, ವಾಹನ ಮಾಲೀಕರ ಮೊಬೈಲ್ ಸಂಖ್ಯೆಯನ್ನು ಪಡಿತರ ಚೀಟಿಗೆ ಜೋಡಣೆಯಾಗಿರುವ ಆಧಾರ್ ಸಂಖ್ಯೆಯೊಂದಿಗೆ ತಾಳೆ ಮಾಡಿ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಆಯಾ ಇಲಾಖೆಯ ಮುಖ್ಯಸ್ಥರಿಂದ ಸರ್ಕಾರಿ ನೌಕರರ ಎಚ್‌ಆರ್‌ಎಂಎಸ್ ಮಾಹಿತಿ ಪಡೆದು ನೌಕರರ ಆಧಾರ್ ಸಂಖ್ಯೆಯನ್ನು ಪಡಿತರ ಚೀಟಿಗೆ ಜೋಡಣೆಯಾಗಿರುವ ಆಧಾರ್ ಸಂಖ್ಯೆಗೆ ತಾಳೆ ಮಾಡಬೇಕು. ವಿವಿಧ ನಿಗಮ, ಮಂಡಳಿ, ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಮಾಹಿತಿಯನ್ನು ಅವರ ಆಧಾರ್ ಸಂಖ್ಯೆಯೊಂದಿಗೆ ಪಡೆದು, ಪಡಿತರ ಚೀಟಿಗೆ ಜೋಡಣೆಯಾಗಿರುವ ಆಧಾರ್ ಸಂಖ್ಯೆಯೊಂದಿಗೆ ತಾಳೆ ಮಾಡಿ ಕ್ರಮ ಜರುಗಿಸಬೇಕು. ನಗರಾಭಿವೃದ್ಧಿ ಇಲಾಖೆಯಲ್ಲಿ ಲಭ್ಯವಿರುವ 1000 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣವಿರುವ ವಾಸದ ಮನೆಗಳ ಮಾಹಿತಿಯನ್ನು ಪಡೆದು ಪಡಿತರ ಚೀಟಿಯಲ್ಲಿರುವ ವಿಳಾಸದೊಂದಿಗೆ ತಾಳೆ ಮಾಡುವುದು, ಪ್ರತಿ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ ಪಡಿತರ ಪಡೆಯುತ್ತಿರುವ ಹಾಗೂ ಒಟಿಪಿ ಮೂಲಕ ಪಡಿತರ ಪಡೆಯುತ್ತಿರುವ ಫಲಾನುಭವಿಗಳ ಮಾಹಿತಿಯನ್ನು ಮರು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದು.
ಹಲವಾರು ಪಡಿತರ ಚೀಟಿಗಳ ಫಲಾನುಭವಿಗಳ ಸ್ಥಳದಲ್ಲಿ ವಾಸವಿಲ್ಲದಿರುವುದು, ಮರಣ ಹೊಂದಿರುವುದು ಇತ್ಯಾದಿ ಕಾರಣಗಳಿಂದಾಗಿ ಪಡಿತರ ಎತ್ತುವಳಿ ಮಾಡದೇ ಇರುವ ದಾಖಲೆಯನ್ನು ಪರಿಶೀಲಿಸಿ, ಅಂಥ ಪಡಿತರ ಚೀಟಿಯಲ್ಲಿದ್ದ ಸದಸ್ಯರ ಹೆಸರನ್ನು ರದ್ದು ಪಡಿಸುವದು. ಅನರ್ಹ ಪಡಿತರ ಚೀಟಿ ರದ್ದುಪಡಿಸುವ ಕಾರ್ಯಕ್ರಮದ ಬಗ್ಗೆ ನಿಗದಿತ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಲು ತಾಲೂಕು ಆಹಾರ ಸಿಬ್ಬಂದಿಗಳಿಗೆ ಸೂಚಿಸಬೇಕು. ಪ್ರತಿವಾರ ರದ್ದು ಪಡಿಸುವ ಗುರಿ ಹಾಕಿಕೊಂಡು ಉಪವಿಭಾಗಾಧಿಕಾರಿ, ತಹಶೀಲ್ದಾರ್ ಅವರು ಈ ಬಗ್ಗೆ ಖುದ್ದು ಮೇಲ್ವಿಚಾರಣೆ ಮಾಡಿ ಈ ತಿಂಗಳ ಅಂತ್ಯದೊಳಗಾಗಿ ಕನಿಷ್ಠ ಪಕ್ಷ ಪ್ರತಿ ತಾಲೂಕಿನಿಂದ 1 ಸಾವಿರ ಅಂತ್ಯೋದಯ ಹಾಗೂ ಬಿಪಿಎಲ್ ಪಡಿತರ ಕಾರ್ಡ್ ರದ್ದು ಮಾಡುವಂತೆ ಸೂಚಿಸಿದ್ದಾರೆ.