ಬ್ರಿಜ್‌ಟೌನ್ (ಬಾರ್ಬಡಾಸ್): ಭಾರತ ತಂಡ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಕೆರಿಬಿಯನ್ ದ್ವೀಪದಾದ್ಯಂತ ಚಂಡಮಾರುತವೇ ಬೀಸಿದೆ. ಪರಿಣಾಮ, ತವರಿಗೆ ಆಗಮಿಸಬೇಕಿದ್ದ ಟೀಮ್ ಇಂಡಿಯಾ ಬ್ರಿಜ್‌ಟೌನ್‌ನಲ್ಲೇ ಸಿಕ್ಕಿಹಾಕಿಕೊಂಡಿದೆ. ಬುಧವಾರ ಮತ್ತೊಂದು ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ನಡುವೆ ಬಾರ್ಬಡಾಸ್ ಪ್ರಧಾನಿ ಮಿಯಾ ಮೋಟಿ ಹೇಳಿಕೆಯೊಂದನ್ನು ನೀಡಿದ್ದು, ಮುಂದಿನ 6ರಿಂದ 12 ಗಂಟೆಗಳಲ್ಲಿ ಬ್ರಿಜ್‌ಟೌನ್ ವಿಮಾನ ನಿಲ್ದಾಣವನ್ನು ಸಂಚಾರಕ್ಕೆ ತೆರವುಗೊಳಿಸಲಾಗುವುದು ಎಂದಿದ್ದಾರೆ.
ಅದರಂತೆ ರೋಹಿತ್ ಪಡೆ ಭಾರತದ ಕಾಲಮಾನದಂತೆ ಬುಧವಾರ ಬೆಳಗಿನ ಜಾವ 3.30ಕ್ಕೆ ಬ್ರಿಜ್‌ಟೌನ್ ತೊರೆಯುವ ಸಾಧ್ಯತೆ ಇದೆ. ಆಗ ಬುಧವಾರ ರಾತ್ರಿ 7.45ರ ವೇಳೆ ಕ್ರಿಕೆಟ್ ತಂಡ ಹೊಸದಿಲ್ಲಿಗೆ ಬಂದಿಳಿಯಲಿದೆ. ಅನಂತರ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಕಪ್ ವಿಜೇತ ಭಾರತ ತಂಡವನ್ನು ಸಮ್ಮಾನಿಸುವ ಕಾರ್ಯಕ್ರಮವಿದೆ. ಇದರ ವೇಳೆಯಿನ್ನೂ ನಿಗದಿ ಆಗಿಲ್ಲ.
“ಈಗಲೇ ಯಾವುದನ್ನೂ ನಿಖರವಾಗಿ ಹೇಳಲಾಗದು. ಆದರೆ ನಾನು ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದ ಲ್ಲಿದ್ದೇನೆ. ಅವರು ಕೊನೆಯ ಹಂತದ ಪರೀಕ್ಷೆ ನಡೆಸುತ್ತಿದ್ದಾರೆ. ಮುಂದಿನ 12 ಗಂಟೆಯೊಳಗೆ ವಿಮಾನ ನಿಲ್ದಾಣ ಸಂಚಾರಕ್ಕೆ ತೆರವುಗೊಳ್ಳುವುದು ಬಹುತೇಕ ಖಚಿತ. ಸದ್ಯ ಚಂಡಮಾರುತ ಬಾರ್ಬಡಾಸ್‌ನ ದಕ್ಷಿಣ ಭಾಗದಲ್ಲಿ, 80 ಕಿ.ಮೀ. ದೂರದಲ್ಲಿ ಕೇಂದ್ರೀಕೃತವಾಗಿದೆ. ಆದರೂ ನಮ್ಮ ದ್ವೀಪದಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಬುಧವಾರ ಮತ್ತೂಂದು ಚಂಡಮಾರುತ ಬೀಸುವ ಮುನ್ಸೂಚನೆ ಇದೆ’ ಎಂದು ಮಿಯಾ ಮೋಟಿÉ ಹೇಳಿದ್ದಾರೆ.