Advertisement

ಚುನಾವಣಾ ಪ್ರಚಾರಕ್ಕೆ ತೆರಳಿದ ಶಿಕ್ಷಕರಿಗೆ ನೋಟಿಸ್‌

04:04 PM Jun 06, 2022 | Team Udayavani |

ಮುಂಡಗೋಡ: ರಾಜ್ಯ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಏಳು ಶಿಕ್ಷಕರ ವಿರುದ್ಧ ತಹಶೀಲ್ದಾರ್‌ ಶ್ರೀಧರ ಮುಂದಲಮನಿ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.

Advertisement

ಮುಂಡಗೋಡ ಆದಿ ಜಾಂಬವ ಶಾಲೆ ಮುಖ್ಯೋಪಾಧ್ಯಾಯ ಸೋಮಪ್ಪ ಮುಡೇಣ್ಣನವರ, ದಸ್ತಗೀರಿ ಉರ್ದು ಪ್ರೌಢಶಾಲೆ ಮುಖ್ಯೋಪಾಧ್ಯಾಯ ಸೈಯದ್‌ ಮೆಹಬೂಬ, ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆ ವಿಭಾಗದ ರಮೇಶ ಪವಾರ, ಸರ್ಕಾರಿ ಪ್ರೌಢಶಾಲೆ ಹುನಗುಂದ ಶಿಕ್ಷಕ ತುಳಜಪ್ಪ ಹುಮ್ನಾಬಾದ್‌, ಲೋಟಸ್‌ ಪ್ರೌಢಶಾಲೆಯ ಶರಣಪ್ಪ ಜಡೇದಲಿ, ಆದಿ ಜಾಂಬವ ಶಾಲೆ ಶಿಕ್ಷಕ ರವಿ ಅಕ್ಕಿವಳ್ಳಿ, ಪಾಳಾ ಗ್ರಾಮದ ಮಹಾತ್ಮಾಜಿ ಪ್ರೌಢಶಾಲೆ ಶಿಕ್ಷಕ ಸಂತೋಷ ಪಾಟೀಲ ಇವರು ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮುಂಡಗೋಡ ತಾಲೂಕಿನ ಶಾಲಾ ಶಿಕ್ಷಕ ಮತದಾರರ ಮನೆ ಮನೆಗೆ ತೆರಳಿ ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಪರವಾಗಿ ಮತ ಯಾಚಿಸಿದ್ದು ಸ್ಪಷ್ಟವಾಗಿ ಕಂಡು ಬಂದಿರುತ್ತದೆ. ಫ್ಲಾಯಿಂಗ್‌ ಸ್ಕಾಂಡ ಹಾಗೂ ತಾಪಂ ಇಒ ಅವರು ಸೂಕ್ತ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದಾರೆ.

ಕಾರಣ ಮೇಲ್ಕಂಡ ಎಲ್ಲ ಅಂಶಗಳನ್ನು ಗಂಭೀರವಾಗಿ ಪರಿಗಣಿಸಲಾಗಿ ಸರ್ಕಾರಿ, ಅರೆ ಸರ್ಕಾರಿ, ಗುತ್ತಿಗೆ ಶಾಲೆಗಳ ಮುಖ್ಯಾಧ್ಯಾಪಕರು, ಶಿಕ್ಷಕ ನೌಕರರಾದ ನೀವು ರಾಜ್ಯ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಚುನಾವಣೆ ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಪರವಾಗಿ ಮನೆ ಮನೆಗೆ ತೆರಳಿ ಮತ ಯಾಚಿಸುತ್ತಿರುವುದು ರಾಜ್ಯ ಸಿವಿಲ್‌ ಸೇವಾ (ನಡತೆ) ನಿಯಮಗಳನ್ನು 1966 ನಿಯಮ5(1) (2) ಮತ್ತು ರಾಜ್ಯ ಶಿಕ್ಷಣ ಅಧಿನಿಯಮ 1983ರ ಉಪ ಬಂಧಗಳನ್ನು ಉಲ್ಲಂಘಿಸಿ ಕರ್ತವ್ಯಲೋಪ ಎಸಗಿದ್ದೀರಿ ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗಿರುತ್ತದೆ. ಕಾರಣ ಈ ನೋಟಿಸ್‌ ತಲುಪಿದ ನಂತರ ಲಿಖೀತ ಹೇಳಿಕೆ ಸಲ್ಲಿಸುವಂತೆ ಅವರು ನೀಡಿದ ನೋಟಿಸ್‌ ಸಮರ್ಪಕವಾಗಿ ಉತ್ತರ ನೀಡದ ಕಾರಣ ಈ ಶಿಕ್ಷಕರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.

ನಾವು ಸಂಘದ ಚಟುವಟಿಕೆಗೆ ಹೋಗಿದ್ದೇವೆ ವಿನಹ ಯಾವುದೇ ರಾಜಕೀಯ ಪಕ್ಷದ ಪರವಾಗಿ ಮುಂಡಗೋಡ ಚುನಾವಣೆ ಪ್ರಚಾರಕ್ಕೆ ಹೋಗಿಲ್ಲ. ನನಗೂ ಈ ಬಗ್ಗೆ ತಹಶೀಲ್ದಾರ್‌ ನೋಟಿಸ್‌ ನೀಡಿದ್ದರು. ಅದಕ್ಕೆ ಉತ್ತರ ನೀಡಿದ್ದೇನೆ. -ಸೋಮಣ್ಣ ಮುಡಣ್ಣನವರ, ಮುಖ್ಯೋಪಾಧ್ಯಾಯ, ಆದಿಜಾಂಭವ ಪ್ರೌಢಶಾಲೆ

ಕೆಲ ಶಿಕ್ಷಕರು ರಾಜ್ಯ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಚುನಾವಣೆ ರಾಷ್ಟೀಯ ಪಕ್ಷದ ಅಭ್ಯರ್ಥಿ ಪರವಾಗಿ ಮನೆ ಮನೆಗೆ ತೆರಳಿ ಮತಯಾಚಿಸುತ್ತಿರುವ ಪೋಟೋಗಳು ಸಿಕ್ಕಿವೆ. ಅಲ್ಲದೆ ಪತ್ರಿಕೆಯಲ್ಲಿ ವರದಿಯಾಗಿದೆ. ಈ ಪತ್ರಿಕೆಯಲ್ಲಿ ಹೆಸರು ಇದ್ದ ಕಾರಣ ಆ ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್‌ ನೀಡಿದ್ದೇನೆ. ಇದರಲ್ಲಿ ಇಬ್ಬರು ಸರ್ಕಾರಿ ಶಿಕ್ಷಕರು ಉಳಿದು ಐದು ಅರೆ ಸರ್ಕಾರಿ ಶಿಕ್ಷಕರಾಗಿದ್ದಾರೆ. ಅವರು ನೀಡಿದ ಉತ್ತರ ಹಾಗೂ ನಮ್ಮ ಇಲಾಖೆ ವರದಿಯನ್ನು ಸೂಕ್ತ ಕ್ರಮಕ್ಕಾಗಿ ಜಿಲ್ಲಾಧಿಕಾರಿಗೆ ಕಳುಹಿಸಲಾಗಿದೆ.  -ಶ್ರೀಧರ ಮುಂದಲಮನಿ, ತಹಶೀಲ್ದಾರ್‌ ಮುಂಡಗೋಡ

Advertisement
Advertisement

Udayavani is now on Telegram. Click here to join our channel and stay updated with the latest news.

Next