Advertisement

ಕೋವಿಡ್ ಕರ್ತವ್ಯದ ಮಧ್ಯೆ ನೋಟಿಸ್‌ ಜಾರಿ ಗುಮ್ಮ!

08:26 AM Jul 07, 2020 | mahesh |

ಮಂಗಳೂರು: ಕೋವಿಡ್ ಸಂಕಷ್ಟದ ನಡುವೆಯೂ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯತ್‌ಗಳ ಕೆಲವು ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳ ವಿರುದ್ಧ ವಿವಿಧ ಕಾರಣಗಳಿಗೆ ಇಲಾಖೆಗಳಿಂದ ನೋಟಿಸ್‌ ಜಾರಿ ಮಾಡುತ್ತಿರುವುದು ಅಸಮಾಧಾನದ ಜತೆಗೆ ಆತಂಕಕ್ಕೆ ಕಾರಣವಾಗಿದೆ.

Advertisement

ಕೋವಿಡ್ ಕರ್ತವ್ಯದ ಜತೆಗೆ ಪಂಚಾಯತ್‌ರಾಜ್‌ ಇಲಾಖೆಗಳ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸುತ್ತಿರುವ ಸಂದರ್ಭದಲ್ಲಿ ಸರಕಾರದ ಅನ್ಯ ಇಲಾಖೆಗಳು ಕೂಡ ಪಿಡಿಒಗಳಿಗೆ ಹೆಚ್ಚುವರಿ ಕಾರ್ಯಗಳನ್ನು ವಹಿಸಿವೆ. ಇದು ನಿಗದಿತ ಸಮಯದಲ್ಲಿ ಆಗದಿದ್ದರೆ ಮೇಲಿಂದ ಮೇಲೆ ನೋಟಿಸ್‌ ನೀಡಲಾಗುತ್ತಿದೆ ಎನ್ನುತ್ತಾರೆ ಕೆಲವು ಪಿಡಿಒಗಳು. ಸಾರ್ವಜನಿಕರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುವ ಸಂದರ್ಭ ಲೋಪಗಳಾದರೆ ಸಂಬಂಧಪಟ್ಟವರಿಗೆ ನೋಟಿಸ್‌ ನೀಡುವುದು ಅನಿವಾರ್ಯ ಕ್ರಮ ಎನ್ನುತ್ತಾರೆ ಉನ್ನತ ಮಟ್ಟದ ಅಧಿಕಾರಿಗಳು.

“ಜಲಜೀವನ್‌ ಮಿಷನ್‌’ ಯೋಜನೆಯಡಿ ದಾಖಲಾತಿ ಮಾಡದಿರುವ ಹಿನ್ನೆಲೆಯಲ್ಲಿ ಕೆಲವು ಪಿಡಿಒಗಳಿಗೆ ನೋಟಿಸ್‌ ಜಾರಿಯಾಗಿದೆ. ಇದರ ಲಾಗಿನ್‌ ವ್ಯವಸ್ಥೆ ನೀರು ಮತ್ತು ನೈರ್ಮಲ್ಯ ಇಲಾಖೆಯಡಿಯಲ್ಲಿ ಇರುವುದು. ತಾಂತ್ರಿಕ ಕಾರಣಗಳಿಂದ ನಮಗೆ ಲಾಗಿನ್‌ ಸಾಧ್ಯವಾಗದ್ದರಿಂದ ದಾಖಲಾತಿ ಮಾಡಲಾಗಿಲ್ಲ. ಅದಕ್ಕೂ ನಮಗೆ ನೋಟಿಸ್‌ ನೀಡಲಾಗಿದೆ ಎಂಬುದು ಪಿಡಿಒಗಳ ಆರೋಪ. ನದಿ ತೀರ ಮರಳಿನ ಜವಾಬ್ದಾರಿಯೂ ಇದೀಗ ಪಿಡಿಒ ಹೆಗಲಿಗೆ ಬಂದಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದ ಕಾರ್ಯವನ್ನು ಪಿಡಿಒಗಳು ಮಾಡಬೇಕಾಗುತ್ತದೆ. ಆ ಇಲಾಖೆಯಿಂದಲೂ ಕೆಲವರಿಗೆ ನೋಟಿಸ್‌ ಬಂದಿದೆ. ನರೇಗಾ ಯೋಜನೆಯಡಿ ಮಾಸಿಕ ಗುರಿ ಸಾಧಿಸದ ಬಗ್ಗೆಯೂ ಕೆಲವು ಪಿಡಿಒಗಳಿಗೆ ನೋಟಿಸ್‌ ಬಂದಿದೆ. ಬೇಡಿಕೆ ಆಧಾರಿತ ಯೋಜನೆ ಇದಾಗಿದ್ದರೂ ಟಾರ್ಗೆಟ್‌ ರೀಚ್‌ ಮಾಡಬೇಕು ಎಂಬ ಕಾರಣ ನೀಡಿ ಒತ್ತಡವೂ ಇದೆ ಎನ್ನುವುದು ಹೆಸರು ಹೇಳಲಿಚ್ಛಿಸದ ಪಿಡಿಒಗಳ ಅಭಿಪ್ರಾಯ.

ಮದುವೆ, ಉತ್ತರಕ್ರಿಯೆ ಲೆಕ್ಕವೂ ಪಿಡಿಒಗಳಿಗೆ!
ಗ್ರಾಮೀಣ ಭಾಗದಲ್ಲಿ ಕ್ವಾರಂಟೈನ್‌ನಲ್ಲಿರುವವರ ಫೋಟೋ ತೆಗೆದು ಆ್ಯಪ್‌ನಲ್ಲಿ ಹಾಕುವ ಜವಾಬ್ದಾರಿಯನ್ನು ಪಿಡಿಒಗಳಿಗೆ ನೀಡಲಾಗಿದೆ. ಒಂದೆರಡು ಜನರ ಫೋಟೋ ಬಿಟ್ಟು ಹೋಗಿದ್ದಕ್ಕೂ ಕೆಲವು ಪಿಡಿಒಗಳಿಗೆ ನೋಟಿಸ್‌ ಬಂದಿದೆ. ಕಂದಾಯ ಇಲಾಖೆಯ ಸುಪರ್ದಿಯಲ್ಲಿ ಆ್ಯಪ್‌ ಇದ್ದರೂ ನೋಟಿಸ್‌ ಮಾತ್ರ ಪಿಡಿಒಗಳಿಗೆ. ಕ್ವಾರಂಟೈನ್‌ನಲ್ಲಿದ್ದವರಿಗೆ ವಸತಿ, ಊಟದ ಜತೆಗೆ ಮದುವೆ, ಉತ್ತರಕ್ರಿಯೆಗಳಿಗೆ ಹೋಗಿ ಭಾಗವಹಿಸಿರುವವರ ತಲೆ ಎಣಿಸುವ ಕೆಲಸವೂ ಇವರದೇ; ಲೋಪವಾದರೆ ನೋಟಿಸ್‌ ಖಚಿತ!

ಪಿಡಿಒಗಳಿಗೆ ಒತ್ತಡ
ಗ್ರಾ.ಪಂ. ಬಲಪಡಿಸುವ ಸದುದ್ದೇಶದಿಂದ ಪಿಡಿಒಗಳಿಗೆ ನಿಗದಿತ ಕಾರ್ಯಗಳ ಜತೆಗೆ ಅನ್ಯ ಇಲಾಖೆಗಳ ಹಲವು ಜವಾಬ್ದಾರಿಯನ್ನು ನೀಡಿದ್ದು, ಒತ್ತಡ ಅಧಿಕವಾಗಿದೆ. ಕೊರೊನಾ ಆತಂಕದ ಮಧ್ಯೆ ಕೆಲಸ ಮಾಡುತ್ತಿರುವ ಪಿಡಿಒಗಳನ್ನು “ಕೊರೊನಾ ವಾರಿಯರ್ಸ್‌’ನಲ್ಲಿ ಸೇರಿಸದಿರುವುದು ಬೇಸರದ ವಿಚಾರ.
– ನಾಗೇಶ್‌, ದ.ಕ. ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ

Advertisement

ಜನಹಿತ ಮುಖ್ಯ
ಕೋವಿಡ್ ಮಧ್ಯೆಯೂ ಪಿಡಿಒಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನರ ಹಾಗೂ ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡುವಾಗ ಒತ್ತಡ ಸಾಮಾನ್ಯ. ಕೊರೊನಾ ಸಮಯದಲ್ಲಿ ಗ್ರಾಮೀಣ ಜನರಿಗೆ ಸರಕಾರದ ಸೌಕರ್ಯಗಳನ್ನು ಪೂರ್ಣಮಟ್ಟದಲ್ಲಿ ಒದಗಿಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡುವುದು ಅನಿವಾರ್ಯ.
– ಡಾ| ಆರ್‌. ಸೆಲ್ವಮಣಿ, ದ.ಕ. ಜಿ.ಪಂ. ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next