ಆಹಾರವಸ್ತುಗಳು ಬೆಲೆ ಇಳಿದಿರುವುದು, ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿರುವುದು ಮತ್ತು ಕಪ್ಪುಹಣದ ಸೃಷ್ಟಿಗೆ ಲಗಾಮು ಬಿದ್ದಿರುವುದೆಲ್ಲ ನೋಟು ರದ್ದತಿಯ ಪರಿಣಾಮಗಳು.
ಕಳೆದ ವರ್ಷ ನ.8ರಂದು ಪ್ರಧಾನಿ ಮೋದಿ ಕೈಗೊಂಡ ಕಪ್ಪುಹಣದ ಮೇಲಿನ ಸರ್ಜಿಕಲ್ ಸ್ಟ್ರೈಕ್ ಎಂದು ಬಣ್ಣಿಸಲಾಗಿದ್ದ ನೋಟು ರದ್ದು ನಿರ್ಧಾರ ಫಲಿತಾಂಶವನ್ನು ಆರ್‌ಬಿಐ ನಿನ್ನೆ ಬಹಿರಂಗಪಡಿಸಿದೆ. ರದ್ದು ಮಾಡಲಾದ 500 ಮತ್ತು 1000 ನೋಟುಗಳ ಪೈಕಿ ಶೇ.99 ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿ ಬಂದಿದೆ ಎಂದು ಆರ್‌ಬಿಐಯ ವಾರ್ಷಿಕ ವರದಿ ತಿಳಿಸಿದೆ. ನೋಟು ರದ್ದು ಮಾಡುವಾಗ 15.44 ಲಕ್ಷ ಕೋಟಿ 500 ಮತ್ತು 1000 ರೂ. ನೋಟುಗಳು ಚಲಾವಣೆಯಲ್ಲಿದ್ದವು. ಆರ್‌ಬಿಐ ವರದಿ ಪ್ರಕಾರ ಈ ಪೈಕಿ 15.28 ಲಕ್ಷ ಕೋಟಿ ನೋಟುಗಳು ವಾಪಸು ಬಂದಿದೆ. ಅಂದರೆ ಶೇ.98.96 ನೋಟುಗಳನ್ನು ಜನರು ಮರಳಿ ಬ್ಯಾಂಕುಗಳಿಗೆ ನೀಡಿದ್ದಾರೆ ಎಂದಾಯಿತು. ಇನ್ನುಳಿದಿರುವುದು ಬರೀ 26,000 ನೋಟುಗಳು ಮಾತ್ರ. ಚಲಾವಣೆಯಲ್ಲಿದ್ದ ಎಲ್ಲ ಕರೆನ್ಸಿ ನೋಟುಗಳು ವಾಪಸು ಬಂದಿರುವುದರಿಂದ ಕಪ್ಪು ಹಣ ಎಲ್ಲಿದೆ ಎಂಬ ಪ್ರಶ್ನೆ ಈಗ ಎದುರಾಗಿದೆ. ಆರ್‌ಬಿಐ ಅಂಕಿಅಂಶಗಳು ಬಹಿರಂಗಗೊಂಡಂತೆಯೇ ವಿಪಕ್ಷಗಳೆಲ್ಲ ಪ್ರಧಾನಿ ಮೇಲೆ ಮುಗಿಬಿದ್ದಿವೆ. ಕಪ್ಪುಹಣ ನಿಗ್ರಹಿಸುವ ಉದ್ದೇಶವೇ ವಿಫಲವಾಗಿದೆ ಎಂದು ವಿಪಕ್ಷಗಳು ಟೀಕಿಸುತ್ತಿವೆ. ಸಿಪಿಎಂ ಅಂತೂ ಇದು ದೇಶ ಎಂದಿಗೂ ಕ್ಷಮಿಸದ ಅಪರಾಧ ಎಂದಿದೆ. ಶೇ.1 ಕಪ್ಪು ಹಣ ಪತ್ತೆಗೆ ಇಡೀ ದೇಶವನ್ನು ತಿಂಗಳು ಗಟ್ಟಲೆ ಬ್ಯಾಂಕ್-ಎಟಿಎಂಗಳೆದುರು ಹಗಲು ರಾತ್ರಿ ಕ್ಯೂ ನಿಲ್ಲಿಸುವ ಅಗತ್ಯವಿತ್ತೇ? ಜುಜುಬಿ 26,000 ನೋಟುಗಳನ್ನು ಪತ್ತೆ ಹಚ್ಚಲು 100ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಳ್ಳಬೇಕಿತ್ತೆ? ಎಂಬಿತ್ಯಾದಿ ಪ್ರಶ್ನೆಗಳು ಈಗ ಎದುರಾಗಿವೆ.
ಆರ್‌ಬಿಐ ಅಂಕಿ ಅಂಶಗಳಿಂದಲೇ ಹೇಳುವುದಾದರೆ ಮೇಲ್ನೋಟಕ್ಕೆ ನೋಟು ನಿಷೇಧ ವಿಫಲವಾಗಿರುವುದು ನಿಜವೆಂದು ಅನ್ನಿಸುತ್ತಿದೆ. ಏಕೆಂದರೆ ನೋಟು ರದ್ದುಗೊಳಿಸುವಾಗ ಪ್ರಧಾನಿ ಇದು ಕಪ್ಪುಹಣದ ವಿರುದ್ಧದ ಬೃಹತ್ ಸಮರ ಎಂದಿದ್ದರು. ತಾವು ಸಂಗ್ರಹಿಸಿಟ್ಟ ನೋಟಿನ ಕಂತೆಗಳೆಲ್ಲ ರದ್ದಿ ಕಾಗದವಾಗಿ ಕಾಳಧನಿಕರೆಲ್ಲ ದಿವಾಳಿ ಎದ್ದು ಹೋಗಿ ಬೀದಿಗೆ ಬಂದು ನಿಲ್ಲುತ್ತಾರೆ. ಕಪ್ಪುಹಣ ಕುಳಗಳ ಲೋಡುಗಟ್ಟಲೆ ಹಣ ಮೌಲ್ಯ ಕಳೆದುಕೊಂಡು ಬೀದಿಗೆ ಬೀಳುತ್ತದೆ ಎಂಬ ಅತಿರೇಕದ ಕಲ್ಪನೆಯನ್ನು ಇಟ್ಟುಕೊಂಡವರಿಗೆ ಭ್ರಮನಿರಸನವಾಗಿರುವುದು ನಿಜ. ನೋಟು ರದ್ದು ಪಡಿಸಿದ ನಿರ್ಧಾರವನ್ನು ಅನುಷ್ಠಾನಿಸುವಲ್ಲಿ ಸರಕಾರ ಎಡವಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆರ್‌ಬಿಐ ಇಂತಹ ಒಂದು ಬೃಹತ್ ಆರ್ಥಿಕ ಸುಧಾರಣೆಗೆ ಏನೇನೂ ತಯಾರಿ ಮಾಡಿಕೊಂಡಿರಲಿಲ್ಲ ಎಂದು ಅನಂತರ ತಿಂಗಳುಗಟ್ಟಲೆ ಅನುಭವಿಸಿದ ಅಧ್ವಾನಗಳಿಂದಲೇ ಸ್ಪಷ್ಟವಾಗಿದೆ. ನಿಜವಾಗಿ ನೋಟು ರದ್ದು ಎನ್ನುವುದು ಹಳೇ ನೋಟುಗಳನ್ನು ಹಿಂದಿರುಗಿಸಿ ಹೊಸ ನೋಟುಗಳನ್ನು ಪಡೆಯುವ ಒಂದು ಸರಳ ಪ್ರಕ್ರಿಯೆಯಾಗಿತ್ತು. ಚಲಾವಣೆಯಲ್ಲಿದ್ದ ಶೇ. 86 ನೋಟು ಕ್ಷಣಾರ್ಧದಲ್ಲಿ ಮೌಲ್ಯ ಕಳೆದುಕೊಂಡಾಗ ಆರ್‌ಬಿಐ ಬಳಿ ಇಷ್ಟೇ ಮೌಲ್ಯದ ಹೊಸ ನೋಟುಗಳ ಸಂಗ್ರಹವೇ ಇರಲಿಲ್ಲ. ಆಗ ಇದ್ದದ್ದು ಬರೀ 94,660 ಕೋ. ರೂ. ಮೌಲ್ಯದ 2,000 ನೋಟುಗಳು ಮಾತ್ರ. 500 ರೂ. ಮುದ್ರಣವಾಗಿರಲೇ ಇಲ್ಲ. ಹೀಗೆ ಬ್ಯಾಂಕುಗಳಲ್ಲಿ ಹಣ ಇಲ್ಲ ಎಂದು ತಿಳಿದಾಗ ಜನರು ಕಂಗಾಲಾಗಿದ್ದು ಸಹಜವಾಗಿತ್ತು. ಆದರೆ ವಿಪಕ್ಷಗಳು ಟೀಕಿಸಿರುವಂತೆ ನೋಟು ರದ್ದು ಘೋರ ವೈಫಲ್ಯವಂತೂ ಅಲ್ಲ.
ಮೊದಲಾಗಿ ಶೇ. 99 ಹಳೇ ನೋಟುಗಳು ಬ್ಯಾಂಕಿಗೆ ಮರಳಿ ಬಂದಿದ್ದರೂ ಇದರಲ್ಲಿ ಕಪ್ಪೆಷ್ಟು, ಬಿಳಿ ಎಷ್ಟು ಎನ್ನುವ ಲೆಕ್ಕ ಇನ್ನೂ ಸಿಕ್ಕಿಲ್ಲ. ನೋಟು ರದ್ದಾದ ಬಳಿಕ ನಡೆದ ಐಟಿ ದಾಳಿಗಳಲ್ಲಿ ಕಂತೆ ಕಂತೆ 2,000 ನೋಟುಗಳು ಸಿಕ್ಕಿರುವುದು ಕಪ್ಪುಹಣ ಇದ್ದವರು ಅಡ್ಡದಾರಿಯಿಂದ ಬಿಳಿ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಸಾಕ್ಷಿ. 29,000 ಕೋ. ರೂ. ಅಘೋಷಿತ ಆದಾಯವನ್ನು ಈಗಾಗಲೇ ಪತ್ತೆ ಹಚ್ಚಲಾಗಿದೆ. 18 ಲಕ್ಷ ಅನುಮಾನಾಸ್ಪದ ಖಾತೆಗಳಲ್ಲಿ 3 ಲಕ್ಷ ಕೋ. ರೂ. ಹಣ ಇರುವುದು ಪತ್ತೆಯಾಗಿದೆ. ಹಣದುಬ್ಬರ ಮತ್ತು ಆಹಾರವಸ್ತುಗಳು ಬೆಲೆ ಇಳಿದಿರುವುದು, ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿರುವುದು, ಡಿಜಿಟಲ್ ವ್ಯವಹಾರಗಳಿಗೆ ಪ್ರೋತ್ಸಾಹ ಸಿಕ್ಕಿರುವುದು ಮತ್ತು ಕಪ್ಪುಹಣದ ಸೃಷ್ಟಿಗೆ ಲಗಾಮು ಬಿದ್ದಿರುವುದೆಲ್ಲ ನೋಟು ರದ್ದತಿಯ ಪರಿಣಾಮಗಳು. ತತ್‌ಕ್ಷಣಕ್ಕೆ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮಗಳಾಗಿದ್ದರೂ ಭವಿಷ್ಯದಲ್ಲಿ ಅನೇಕ ಪ್ರಯೋಜನಗಳಿವೆ ಎಂದು ದೇಶವಿದೇಶಗಳ ಆರ್ಥಿಕ ತಜ್ಞರೇ ಹೇಳುತ್ತಿದ್ದಾರೆ.