ಕಲಬುರಗಿ: ವಿಧಾನಸಭಾಧ್ಯಕ್ಷ ರಮೇಶಕುಮಾರ ನೀಡಿರುವ ನೋಟಿಸ್ ನನಗೆ ತಲುಪಿಲ್ಲ. ಮಾಧ್ಯಮಗಳಿಂದ ಗೊತ್ತಾಗಿದೆ. ಅವಶ್ಯ ಕತೆ ಬಿದ್ದರೆ ಮಾ.12ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಡಾ. ಉಮೇಶ ಜಾಧವ್ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಪ್ರಕಾರವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಾಗಿದೆ. ಮುಖ್ಯವಾಗಿ ಸ್ಪೀಕರ್ ಯಾವುದೇ ಒತ್ತಡಕ್ಕೆ ಮಣಿಯೋದಿಲ್ಲ ಎನ್ನುವ ನಂಬಿಕೆಯಿದೆ. ಸಂಸದ ಮಲ್ಲಿಕಾರ್ಜುನ ಖರ್ಗೆ ತಮ್ಮ ಅನುಕೂಲಕ್ಕಾಗಿ ಅನೇಕ ನಾಯಕರನ್ನು ಪಕ್ಷದಿಂದ ಹೊರ ಹಾಕಿದ್ದಾರೆಯೇ ವಿನಃ ಡಾ. ಉಮೇಶ ಜಾಧವ್ ಅಲ್ಲ. ನಾನು ದುಡ್ಡು ಪಡೆದಿದ್ದರೆ ತನಿಖೆ ನಡೆಸಲಿ,ಈ ಬಗ್ಗೆ ಯಾವುದೇ ದೇವಸ್ಥಾನ, ಚರ್ಚ್, ಮಸೀದಿಯಲ್ಲಿ ಪ್ರಮಾಣಕ್ಕೆ ಸಿದ್ಧ. ಅವರೂ ಬರಲಿ. ನಾನು ಬರುತ್ತೇನೆ. ಆಣೆ-ಪ್ರಮಾಣ ನಡೆಯಲಿ. ತಮ್ಮ ಬಳಿಯೂ ಅಸ್ತ್ರಗಳಿವೆ ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಸವಕಲಾಗುತ್ತಿದೆ.ಚುನಾವಣೆ ಮುಗಿದ ನಂತರ ಯಾರು ಉದ್ಭವಮೂರ್ತಿಗಳು ಎನ್ನುವುದು ಜನರಿಗೆ ಗೊತ್ತಾಗುತ್ತದೆ. ತಮಗೆ ಕಾಂಗ್ರೆಸ್‌ನವರು ಎಷ್ಟು ಗೌರವ ಕೊಟ್ಟಿದ್ದಾರೆ ಎಂಬುದು ಗೊತ್ತಿದೆ. ಒಂದೊಂದು ತಾಸು ಬೇರೆ ಬೇರೆ ಸಚಿವರ ಕೋಣೆ ಎದುರು ಕೂರಿಸಿದ್ದಾರೆ. ತಮ್ಮ ರಾಜೀನಾಮೆ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈವಾಡವಿದೆ ಎನ್ನುವ ಆರೋಪ ಸುಳ್ಳು, ಅವರು ಕುತಂತ್ರಿ
ರಾಜಕಾರಣಿಯಲ್ಲ ಎಂದರು.