Advertisement

ಸಾಹಿತ್ಯ ಸಮ್ಮೇಳನ ಸಿದ್ಧತೆಗೆ ಸೂಚನೆ

05:33 PM Oct 31, 2018 | Team Udayavani |

ಧಾರವಾಡ: ನಗರದ ಕೆಸಿಡಿ ಮೈದಾನದಲ್ಲಿ ಜ. 6,7, ಮತ್ತು 8ರಂದು ಆಯೋಜಿಸುತ್ತಿರುವ ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಚುರುಕುಗೊಳಿಸಲು ಜಿಲ್ಲಾಧಿಕಾರಿ ದೀಪಾ ಚೋಳನ್‌ ಅವರು ಅಧಿಕಾರಿಗಳಿಗೆ ಮತ್ತು ಜಿಲ್ಲಾ ಕಸಾಪ ಘಟಕಕ್ಕೆ ಸೂಚಿಸಿದರು. ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಸಮ್ಮೇಳನದ ಪೂರ್ವಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಸಾಹಿತ್ಯ ಸಮ್ಮೇಳನದ ಸ್ವಾಗತ, ಧ್ವಜಾರೋಹಣ, ಮೆರವಣಿಗೆ, ವಿಚಾರ ಸಂಕಿರಣ, ಕವಿಗೋಷ್ಠಿ, ಪುಸ್ತಕ ಮಳಿಗೆ ಸೇರಿದಂತೆ ಎಲ್ಲವೂ ಅಚ್ಚುಕಟ್ಟಾಗಿ ಆಯೋಜಿಸಬೇಕು. ಸಮ್ಮೇಳನಕ್ಕೆ ಆಗಮಿಸುವ ಅತಿಥಿಗಳಿಗೆ ಮತ್ತು ಸಾರ್ವಜನಿಕರಿಗೆ ಊಟ, ವಸತಿ, ಪಾರ್ಕಿಂಗ್‌ ವ್ಯವಸ್ಥೆಗಳು ಯಾವ ತೊಂದರೆ ಇಲ್ಲದಂತೆ ಸಿಗಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ನೌಕರರ, ಹೋಟೆಲ್‌ ಮಾಲೀಕರ, ಶಿಕ್ಷಣ ಸಂಸ್ಥೆಗಳ, ನಗರ ಸ್ಥಳೀಯ ಸಂಸ್ಥೆಗಳ ಮತ್ತು ವಿವಿಧ ಸಾಹಿತ್ಯ ಸಂಘಟನೆಗಳ ಸಭೆಗಳನ್ನು ಪ್ರತ್ಯೇಕವಾಗಿ ಆಯೋಜಿಸಿ ಅವರಿಗೆ ಜವಾಬ್ದಾರಿ ನೀಡಿ, ಸಹಕಾರ ಕೋರುವುದಾಗಿ ತಿಳಿಸಿದರು.

ಜಿಪಂ ಸಿಇಒ ಡಾ| ಬಿ.ಸಿ. ಸತೀಶ ಮಾತನಾಡಿ, ಸಮ್ಮೇಳನದ ಯಶಸ್ವಿಗೆ ಪ್ರತಿಯೊಬ್ಬರೂ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು. ತಮಗೆ ನೀಡಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಬೇಕು. ಸಮ್ಮೇಳನಕ್ಕೆ ಲಕ್ಷಾಂತರ ಜನ ಆಗಮಿಸುವುದರಿಂದ ಸಮ್ಮೇಳನದ ಸ್ಥಳವಾದ ಕೆಸಿಡಿ ಸುತ್ತಮುತ್ತ ಟ್ರಾಫಿಕ್‌ ಸಮಸ್ಯೆಯಾಗದಂತೆ ನಗರಕ್ಕೆ ಬಂದು ಸೇರುವ ಎಲ್ಲಾ ರಸ್ತೆಗಳಿಗೆ ನಿರ್ದಿಷ್ಟ ಸ್ಥಳ ಗುರುತಿಸಿ, ಅಲ್ಲಿಯೇ ಸಾರ್ವಜನಿಕರ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಬೇಕು. ಅಲ್ಲಿಂದ ಸಮ್ಮೇಳನದ ಸ್ಥಳದವರೆಗೆ ಉಚಿತವಾಗಿ ನಗರ ಸಾರಿಗೆ ಬಸ್‌ ಸೇವೆ ನೀಡಬೇಕು ಎಂದು ಸಲಹೆ ನೀಡಿದರು.

ಡಿಸಿಪಿ ಬಿ.ಎಸ್‌. ನೇಮಗೌಡ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಆಹಾರ ಇಲಾಖೆ ಹಿರಿಯ ಉಪನಿರ್ದೇಶಕ ಡಾ| ಸದಾಶಿವ ಮರ್ಜಿ, ರಂಗಾಯಣದ ಆಡಳಿತಾ ಧಿಕಾರಿ ಕೆ.ಎಸ್‌. ಚೆನ್ನೂರ, ಕವಿವಿ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಕೇರಿ, ಹಿರಿಯ ಸಾಹಿತಿ ಮೋಹನ ನಾಗಮ್ಮನವರ, ವಿಶ್ವೇಶ್ವರಿ ಬಸಲಿಂಗಯ್ಯ ಹಿರೇಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ಕೆ. ರಂಗಣ್ಣವರ ಮೊದಲಾದವರು ಸಲಹೆ-ಸೂಚನೆ ನೀಡಿದರು.

ಡಿಎಸ್‌ಪಿ ಬಿ.ಪಿ. ಚಂದ್ರಶೇಖರ, ಎಸಿಪಿ ಎಂ.ಎನ್‌. ರುದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಮುನಿರಾಜು, ಡಾ| ಆರ್‌.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಜೆ.ಎಂ. ನಾಗಯ್ಯ, ಜಿಲ್ಲಾ ಕಸಾಪ ಕಾರ್ಯದರ್ಶಿ ಪ್ರೊ| ಕೆ.ಎಸ್‌. ಕೌಜಲಗಿ, ಡಾ| ಜಿನದತ್ತ ಹಡಗಲಿ, ಕೋಶಾಧಿಕಾರಿ ಡಾ|ಎಸ್‌.ಎಸ್‌. ದೊಡ್ಡಮನಿ ಇನ್ನಿತರರಿದ್ದರು.

Advertisement

16 ಸಮಿತಿಗಳ ರಚನೆ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ| ಲಿಂಗರಾಜ ಅಂಗಡಿ ಮಾತನಾಡಿ, ಬಹಳ ವರ್ಷಗಳ ನಂತರ ಧಾರವಾಡ ಜಿಲ್ಲೆಗೆ ಸಿಕ್ಕಿರುವ ಸಮ್ಮೇಳನದ ಆತಿಥ್ಯವನ್ನು ನಿರ್ವಹಿಸಲು ಪ್ರತಿಯೊಬ್ಬರ ಸಹಕಾರ ಮುಖ್ಯ. ಸಮ್ಮೇಳನವನ್ನು ಅಚ್ಚುಕಟ್ಟಾಗಿ ಆಯೋಜಿಸಲು ಸ್ವಾಗತ ಸಮಿತಿ ಸೇರಿದಂತೆ ಸುಮಾರು 16ಕ್ಕೂ ಹೆಚ್ಚು ಸಮಿತಿಗಳ ರಚನೆ ಅಗತ್ಯವಿದೆ. ಇದರಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಾಹಿತ್ಯ, ಸಾಂಸ್ಕೃತಿಕ, ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಬೇಕು ಎಂದರು.

ಧಾರವಾಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತ್ಯೇಕ ಲಾಂಛನದ ಅಗತ್ಯವಿದೆ. ಆ ಕುರಿತು ಹಾಗೂ ವಿವಿಧ ಸಮಿತಿಗಳ ರಚನೆ, ಸಮ್ಮೇಳನಕ್ಕೆ ಅಗತ್ಯವಿರುವ ಬಜೆಟ್‌ ಕುರಿತು ಚರ್ಚಿಸಲು ಸದ್ಯದಲ್ಲಿಯೇ ಮತ್ತೊಂದು ಸಭೆ ಕರೆಯಲಾಗುವುದು.
ದೀಪಾ ಚೋಳನ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next