Advertisement

ಬ್ಯಾಂಕ್‌ಗಳಲ್ಲಿ ಅರ್ಜಿಗಳ ತ್ವರಿತ ವಿಲೇವಾರಿಗೆ ಸೂಚನೆ

11:25 PM Sep 28, 2020 | mahesh |

ಮಂಗಳೂರು: ಸರಕಾರದ ನಾನಾ ಯೋಜನೆ ಗಳಡಿ ಸಲ್ಲಿಸುವ ಅರ್ಜಿಗಳನ್ನು ಬ್ಯಾಂಕ್‌ಗಳು ಬಾಕಿ ಇರಿಸಿಕೊಳ್ಳದೆ ಶೀಘ್ರ ಇತ್ಯರ್ಥಗೊಳಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಸಿಇಒ ಡಾ| ಆರ್‌. ಸೆಲ್ವಮಣಿ ಸೂಚನೆ ನೀಡಿದ್ದಾರೆ.

Advertisement

ಕೆನರಾ ಬ್ಯಾಂಕ್‌ ಆಶ್ರಯದಲ್ಲಿ ಜಿ.ಪಂ. ಸಭಾಂಗಣದಲ್ಲಿ ಸೋಮವಾರ ನಡೆದ ಬ್ಯಾಂಕ್‌ಗಳ ಪ್ರಗತಿ ಪರಿಶೀಲನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಫ‌ಲಾನುಭವಿಗಳ ಅರ್ಜಿಗಳನ್ನು ಬಾಕಿ ಇರಿಸಿಕೊಂಡಿರುವುದು ಪರಿಶೀಲನೆ ಸಮಯದಲ್ಲಿ ಕಂಡುಬಂದಿದೆ. ಬ್ಯಾಂಕ್‌ಗಳಿಗೆ ಸಲ್ಲಿಕೆಯಾಗುವ ಅರ್ಹ ಅರ್ಜಿಗಳಿಗೆ ತ್ವರಿತವಾಗಿ ಸಾಲ ಮಂಜೂರು ಮಾಡಬೇಕು. ಮಂಜೂರು ಮಾಡಲು ಸಾಧ್ಯವಾಗದ ಅರ್ಜಿಗಳನ್ನು ಬ್ಯಾಂಕ್‌ನಲ್ಲಿ ಬಾಕಿ ಇರಿಸಿಕೊಳ್ಳದೆ ಅರ್ಜಿದಾರರಿಗೆ ಕಾರಣಗಳ ಸಹಿತ ಮಾಹಿತಿ ನೀಡಬೇಕು ಎಂದು ಡಾ| ಸೆಲ್ವಮಣಿ ಸೂಚಿಸಿದರು.

ಶೈಕ್ಷಣಿಕ ಮತ್ತು ಗೃಹಸಾಲದಲ್ಲಿ ಕೆಲವು ಬ್ಯಾಂಕ್‌ಗಳು ಗುರಿ ತಲುಪುವಲ್ಲಿ ಉತ್ತಮ ಸಾಧನೆ ತೋರಿಸಿವೆ. ಇನ್ನು ಕೆಲವು ವಿಫ‌ಲವಾಗಿವೆ. ಬೀದಿ ಬದಿ ವ್ಯಾಪಾರಿಗಳಿಗೆ ಸರಕಾರದ ಯೋಜನೆಯಡಿ ಕೆಲವು ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲ ಎಂಬ ದೂರುಗಳಿವೆ. ಬ್ಯಾಂಕ್‌ ಅಧಿಕಾರಿಗಳು ಸಾಧ್ಯವಾದಷ್ಟು ಕನ್ನಡ ಭಾಷೆಯಲ್ಲಿ ವ್ಯವಹಾರ ನಡೆಸಬೇಕು. ಸಾರ್ವಜನಿಕರು ಜನಧನ್‌ ಖಾತೆ ತೆರೆಯಲು ಬಯಸಿದರೆ ಜಿಲ್ಲೆಯ ಯಾವುದೇ ಬ್ಯಾಂಕ್‌ಗಳು ನಿರಾಕರಿಸಬಾರದು ಎಂದು ಸಿಇಒ ಹೇಳಿದರು.

ಕೃಷಿ ವಲಯದಲ್ಲಿ ಶೇ.70.40 ಸಾಧನೆ
ಕೆನರಾ ಬ್ಯಾಂಕ್‌ ಎಲ್‌ಡಿಸಿಎಂ ಪ್ರವೀಣ್‌ ಅವರು ಮಾತನಾಡಿ, 2020-21ನೇ ಸಾಲಿನಲ್ಲಿ ಕೃಷಿ ವಲಯದಲ್ಲಿ ಶೇ. 70.40 ಗುರಿ ಸಾಧನೆಯಾಗಿದೆ. ಎಂಎಸ್‌ಎಂಇ ಕ್ಷೇತ್ರದಲ್ಲಿ ಶೇ.78.27 ಗುರಿ ಸಾಧಿಸಲಾಗಿದೆ. “ಮುದ್ರಾ’ ಯೋಜನೆಯಡಿಯಲ್ಲಿ ಜಿಲ್ಲೆಯ ಬ್ಯಾಂಕ್‌ಗಳು ಒಟ್ಟು 3,380 ಖಾತೆಗಳಿಗೆ ಸಾಲ ವಿತರಣೆ ಮಾಡಿವೆ ಎಂದು ಡಾ| ಸೆಲ್ವಮಣಿ ತಿಳಿಸಿದರು. ನಬಾರ್ಡ್‌ ಅಧಿಕಾರಿ ಸಂಗೀತಾ, ಕೆನರಾ ಬ್ಯಾಂಕ್‌ ಡಿಜಿಎಂ ಸುಚಿತ್ರಾ, ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next