Advertisement

ರಸಗೊಬ್ಬರ ಅಕ್ರಮ ವಹಿವಾಟು ತಡೆಗೆ ಸೂಚನೆ

04:13 PM May 05, 2022 | Team Udayavani |

ಚಿಕ್ಕಮಗಳೂರು: ಗ್ರಾಮಾಂತರ ಪ್ರದೇಶಗಳಲ್ಲಿ ರಸಗೊಬ್ಬರ ಸರ್ಕಾರದಿಂದ ನಿಗದಿಪಡಿಸಿದ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿರುವ ಬಗ್ಗೆ ದೂರುಗಳಿದ್ದು, ಸೂಕ್ತ ಮಾಹಿತಿ ಕಲೆಹಾಕಿ ಅಕ್ರಮ ವಹಿವಾಟು ನಡೆಸುತ್ತಿರುವ ರಸಗೊಬ್ಬರ ಅಂಗಡಿಗಳ ಮೇಲೆ ದಾಳಿ ನಡೆಸಿ ಪರವಾನಗಿ ರದ್ದುಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಎನ್. ರಮೇಶ್‌ ಸೂಚಿಸಿದರು.

Advertisement

ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 2022-23ನೇ ಸಾಲಿನ ಮುಂಗಾರು ಹಂಗಾಮಿಗೆ ರಸಗೊಬ್ಬರಗಳ ದಾಸ್ತಾನು ಪೂರೈಕೆ ಹಾಗೂ ವಿತರಣೆಗೆ ಕ್ರಮ ವಹಿಸುವ ಕುರಿತ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇಲ್ಲದಿದ್ದರೂ, ಮುಂಗಾರು ಪ್ರಾರಂಭವಾದ ನಂತರ ರಸಗೊಬ್ಬರ ಬೇಡಿಕೆ ಹೆಚ್ಚಾಗುವ ಕಾರಣ ಕೊರತೆ ಉಂಟಾಗುತ್ತದೆ. ಆದ್ದರಿಂದ ರೈತರು ಈಗಲೇ ರಸಗೊಬ್ಬರ ಶೇಖರಣೆ ಮಾಡಲು ಹೆಚ್ಚಿನ ಪ್ರಚಾರ ಮಾಡಲು ಅವರು ಸಲಹೆ ನೀಡಿದರು.

ಯೂರಿಯಾ ರಸಗೊಬ್ಬರವನ್ನು ಕೃಷಿಯಲ್ಲದ ಇನ್ನಿತರ ಚಟುವಟಿಕೆಗಳಿಗೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಚೆಕ್‌ ಪೋಸ್ಟ್‌ಗಳಲ್ಲಿ ಅಕ್ರಮವಾಗಿ ವಾಹನಗಳಲ್ಲಿ ಯೂರಿಯಾ ಸಾಗಾಣಿಕೆ ಕಂಡು ಬಂದರೆ ಸೂಕ್ತ ಕ್ರಮಕೈಗೊಳ್ಳಲು ಎಸ್ಪಿಗೆ ಸೂಚಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ| ಎಂ.ತಿರುಮಲೇಶ್‌ ಮಾತನಾಡಿ, ಕಳೆದ ವರ್ಷ ಕೊರೊನಾ ಕಾರಣದಿಂದಾಗಿ ರಸಗೊಬ್ಬರ ಸರಬರಾಜಿನಲ್ಲಿ ಕೊರತೆಯಾಗಿತ್ತು. ಈ ಬಾರೀ ಜಿಲ್ಲೆಯಲ್ಲಿ ಮುಂಗಾರಿಗೆ 1,21,376 ಟನ್‌ ರಸಗೊಬ್ಬರ ಬೇಡಿಕೆ ಇದ್ದು, ಬೇಡಿಕೆ ಪೂರೈಸುವ ನಿರೀಕ್ಷೆಯಿದೆ ಎಂದರು.

Advertisement

ರಸಗೊಬ್ಬರ ಕಂಪೆನಿಗಳು ಉದ್ದೇಶಪೂರ್ವಕವಾಗಿ ರಸಗೊಬ್ಬರವನ್ನು ಶೇಖರಿಸಿ, ಬೇಡಿಕೆ ಹೆಚ್ಚಾದಾಗ ಕೊರತೆಯನ್ನು ಸೃಷ್ಟಿ ಮಾಡುವುದು ಅಕ್ಷಮ್ಯ ಅಪರಾಧವಾಗಿದ್ದು, ಅಂತಹ ಕಂಪೆನಿಗಳ ಪರವಾನಗಿ ರದ್ದುಗೊಳಿಸಲಾಗುತ್ತದೆ ಎಂದರು.

ಮೇ 16 ರಂದು ಕೃಷಿ ಸಚಿವರು ಜಿಲ್ಲೆಗೆ ಆಗಮಿಸಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ವಿವಿಧ ಇಲಾಖೆಗಳು ತಮ್ಮ ಇಲಾಖೆಗೆ ಸಂಬಂಧಪಟ್ಟ ವಸ್ತು ಪ್ರದರ್ಶನ ಮಳಿಗೆಗಳನ್ನು ಇಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಎಸ್ಪಿ ಎಂ.ಎಚ್. ಅಕ್ಷಯ್‌ ಮಾತನಾಡಿ, ಯಾವುದೇ ದೂರು ದಾಖಲಾಗದಿದ್ದರೂ ಪೊಲೀಸರು ರೈತರ ತೊಂದರೆಗಳಿಗೆ ಸ್ಪಂದಿಸುತ್ತಿದ್ದಾರೆ. ರಸಗೊಬ್ಬರ ಅಂಗಡಿಗಳು ಅಕ್ರಮ ವಹಿವಾಟು ಹಾಗೂ ರೈತರಿಗೆ ಮೋಸ ಮಾಡುತ್ತಿರುವುದರ ಬಗ್ಗೆ ಗುಪ್ತ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಇಂತಹ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು.

ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಕೆ.ಎಸ್. ರವಿಪ್ರಸಾದ್‌, ಕೃಷಿ ಸಮಾಜ ಅಧ್ಯಕ್ಷ ಕುಮಾರಸ್ವಾಮಿ, ರೈತ ಮುಖಂಡರು, ರಸಗೊಬ್ಬರ ಕಂಪೆನಿ ಮಾಲೀಕರು ಹಾಗೂ ಇತರೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next