Advertisement

BPL; ದ.ಕ.- 54 ಸಾವಿರ, ಉಡುಪಿ- 39 ಸಾವಿರ ಬಿಪಿಎಲ್‌ ಕಾರ್ಡ್‌ ಪರಿಶೀಲನೆಗೆ ಸೂಚನೆ

01:10 AM Oct 19, 2024 | Team Udayavani |

ಕುಂದಾಪುರ/ಉಡುಪಿ/ಪುತ್ತೂರು: ವೆಚ್ಚ ಕಡಿತಕ್ಕೆ ಮುಂದಾಗಿರುವ ರಾಜ್ಯ ಸರಕಾರವು ಬಿಪಿಎಲ್‌ ಕಾರ್ಡ್‌ಗಳ ಪರಿ ಷ್ಕರಣೆಗೆ ಹೊರಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 54,093 ಮತ್ತು ಉಡುಪಿ ಜಿಲ್ಲೆಯಲ್ಲಿ 39,627 ಕಾರ್ಡ್‌ಗಳ ಪರಿ ಶೀಲನೆಗೆ ಸೂಚನೆ ಬಂದಿದ್ದು, ಈ ಪೈಕಿ ಶೇ. 2ರಷ್ಟು ಕಾರ್ಡ್‌ ರದ್ದಾಗುವ ಸಾಧ್ಯತೆ ಇದೆ. ಆದರೆ ಪೂರ್ಣ ಪ್ರಮಾಣದಲ್ಲಿ ಪರಿಶೀಲಿಸದೆ ರದ್ದು ಮಾಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಕಾರ್ಡ್‌ ಪರಿಷ್ಕರಣೆಗೆ ಮುಂದಾಗಿರು ವುದರಿಂದ ಪೂರಕ ದಾಖಲೆಯನ್ನು ನೀಡು ವುದಕ್ಕಾಗಿ ಪಡಿತರದಾರರು ಪರದಾಡಬೇಕಾದ ಸ್ಥಿತಿ ನಿರ್ಮಾಣ ವಾಗಿದ್ದು, ಅನ್ನಭಾಗ್ಯ ಅಕ್ಕಿ ಪಡೆಯುವವರಿಗೆ ಸಮಸ್ಯೆ ಯಾಗಿದೆ. ಮೊದಲಿಗೆ ಅನರ್ಹ ಆಗುವ ಸಾಧ್ಯತೆಯ ಪಡಿತರ ಚೀಟಿಯ ಮಾಹಿತಿಯನ್ನು ಎಲ್ಲ ಪಡಿತರ ವಿತರಕರಿಗೆ ರವಾನಿಸಲಾಗಿದೆ. ಆದಾಯ ಮತ್ತು ಮನೆಯ ಪರಿಸ್ಥಿತಿ ಅವಲೋಕಿಸಿಯೇ ಬಿಪಿಎಲ್‌ ಕಾರ್ಡ್‌ ರದ್ದು ಮಾಡುವ ಪ್ರಕ್ರಿಯೆ ಆರಂಭವಾಗಿದೆ.

ಈ ಕಾರಣಕ್ಕಾಗಿ ನಿತ್ಯ ನೂರಾರು ಮಂದಿ ತಾಲೂಕು ಕಚೇರಿಗೆ ಬಂದು ಆಧಾರ್‌, ವರಮಾನ ಮಾಹಿತಿ ಮುಂತಾದ ವಿವರಗಳನ್ನು ನೀಡುತ್ತಿದ್ದಾರೆ.

ಗೊಂದಲ
ಆದಾಯ ತೆರಿಗೆ ಪಾವತಿದಾರರು ಅಲ್ಲದಿದ್ದರೂ ಆದಾಯ ತೆರಿಗೆ ಪಾವತಿದಾರರು ಎಂದು ಕಾರಣ ನೀಡಿ ಅನೇಕರ ಕಾರ್ಡ್‌ ರದ್ದು ಮಾಡಿದ ಕುರಿತು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಐಟಿ ರಿಟರ್ನ್ಸ್ ತನ್ನಿ ಎನ್ನುತ್ತಿದ್ದಾರೆ. ನಾವು ಈವರೆಗೆ ಆದಾಯ ತೆರಿಗೆ ಪಾವತಿಸಿಲ್ಲ. ಎಲ್ಲಿಂದ ದಾಖಲೆ ತರುವುದು’ ಎಂದು ಪಡಿತರ ಚೀಟಿ ರದ್ದಾಗುವ ಭೀತಿಯಲ್ಲಿದ್ದ ಕುಂದಾಪುರದ ಭವಾನಿ ಪ್ರಶ್ನಿಸುತ್ತಾರೆ.

ಆಹಾರ ನಿರೀಕ್ಷಕರಿಗೆ ಅಧಿಕಾರ
ಕಾರ್ಡು ಅಮಾನತು ಹಾಗೂ ರದ್ದು ಮಾಡುವ ಅಧಿಕಾರ ಆಹಾರ ನಿರೀಕ್ಷಕರಿಗಿದೆ. ಕಾರ್ಡ್‌, ಪಡಿತರ ತಡೆಹಿಡಿದರೆ ಆದಾಯ ಪ್ರಮಾಣೀಕರಣ ದಾಖಲಿಸಿ ಪರಿಶೀಲನೆಗೆ ಅರ್ಜಿ ನೀಡಿದರೆ ಆಹಾರ ನಿರೀಕ್ಷಕರು ಖುದ್ದು ಪರಿಶೀಲಿಸಿ ಕಾರ್ಡ್‌ ರದ್ದು, ಅಮಾನತು ಅಥವಾ ಸಕ್ರಿಯಗೊಳಿಸುವ ಬಗ್ಗೆ ನಿರ್ಧರಿಸುತ್ತಾರೆ.
ಅಮಾನತಾದರೆ ಆಹಾರ ನಿರೀಕ್ಷಕರು, ತಹಶೀಲ್ದಾರ್‌ ವರದಿ ಪಡೆದು ಜಿಲ್ಲಾ ಉಪ ನಿರ್ದೇಶಕರು ಕೇಂದ್ರ ಕಚೇರಿಗೆ ಮನವಿ ಮಾಡಿ ಮರಳಿ ಕಾರ್ಡು ಮಂಜೂರು ಮಾಡಲು ಅವಕಾಶ ಇದೆ. ರದ್ದಾದರೆ ಹೊಸ ಕಾರ್ಡು ಮಾಡಬೇಕು. ಸದ್ಯ ಕೆಲವು ವರ್ಷಗಳಿಂದ ಹೊಸ ಬಿಪಿಎಲ್‌ ಕಾರ್ಡ್‌ಗೆ ಅವಕಾಶ ಇಲ್ಲ. ಕಾರ್ಡ್‌ನಲ್ಲಿ ಹೆಸರು ಇರುವ ಯಾವುದೇ ವ್ಯಕ್ತಿ ವಿದೇಶದಲ್ಲಿದ್ದರೂ ಕಾರ್ಡ್‌ ರದ್ದಾಗಲಿದೆ.

Advertisement

ಸಮಸ್ಯೆ
ಸಾಲ ಪಡೆಯಲು ಐಟಿ ರಿಟರ್ನ್ಸ್ ಮಾಡಿದವರ ಸಹಿತ ವಿವಿಧ ಕಾರಣ ಗಳಿಗಾಗಿ ತೆರಿಗೆ ಪಾವತಿಯ ಫೈಲ್‌ ಸಲ್ಲಿಸಿದವರಿಗೆ ಸಂಕಷ್ಟ ಎದುರಾಗಿದೆ. ಕುಟುಂಬದ ಯಾವುದೇ ಸದಸ್ಯ ಕಾರು ಹೊಂದಿದ್ದರೂ ಸಮಸ್ಯೆ. ಬಚ್ಚಿಟ್ಟ ಆದಾಯ ಹಾಗೂ ಮುಚ್ಚಿಟ್ಟ ಆದಾಯ ಆಧಾರ್‌ ಲಿಂಕ್‌ ಮೂಲಕ ಈಗ ಬಹಿರಂಗವಾಗಿದೆ. ಅವಶ್ಯವಿದ್ದವರ ಬ್ಯಾಂಕ್‌ ವಿವರವೇ ಆಹಾರ ಇಲಾಖೆ ಬತ್ತಳಿಕೆಯಲ್ಲಿದೆ.

ರಾಜ್ಯದಲ್ಲಿ 10,97,621 ಅನರ್ಹ ಬಿಪಿಎಲ್‌

ರಾಜ್ಯದಲ್ಲಿ 10,97,621 ಅನರ್ಹ ಬಿಪಿಎಲ್‌, 1,06,152 ಅಂತ್ಯೋದಯ, 1.2 ಲಕ್ಷ ಕ್ಕಿಂತ ಹೆಚ್ಚು ಆದಾಯ ಪಡೆಯುತ್ತಿರುವವರ 10,54,368 ಕಾರ್ಡ್‌ಗಳು, 4,272 ಚೀಟಿ ಸರಕಾರಿ, ಅರೆ ಸರಕಾರಿ ಉದ್ಯೋಗಿಗಳ ಮಾಹಿತಿ ದೊರೆತಿದೆ.

ನಾಲ್ಕು ವರ್ಷಗಳ ಹಿಂದೆ ದಂಡ ಪ್ರಯೋಗ!
ನಾಲ್ಕು ವರ್ಷಗಳ ಹಿಂದೆ ಆರ್‌ಟಿಒ, ಮೆಸ್ಕಾಂ ಮಾಹಿತಿ ಆಧರಿಸಿ ಅನರ್ಹ ಕಾರ್ಡ್‌ ಪತ್ತೆ ಹಚ್ಚಲಾಗಿತ್ತು. ಅನರ್ಹರು ಬಿಪಿಎಲ್‌ ಕಾರ್ಡ್‌ನ್ನು ತಾಲೂಕು ಆಹಾರ ಇಲಾಖೆಗೆ ಒಪ್ಪಿಸಿ ಎಪಿಎಲ್‌ ಆಗಿ ಪರಿವರ್ತಿಸಲು ಗಡುವು ನೀಡಲಾಗಿತ್ತು. ನಿಗದಿತ ಸಮಯ ಕಳೆದರೂ ಸರೆಂಡರ್‌ ಮಾಡದೆ ಇದ್ದ ಕಾರ್ಡ್‌ದಾರರಿಗೆ ದಂಡ ವಿಧಿಸಲಾಗಿತ್ತು. ದ.ಕ. ಜಿಲ್ಲೆಯಲ್ಲಿ 6,956 ಕಾರ್ಡ್‌ಗಳಿಗೆ 26,89,406 ರೂ. ದಂಡ ವಸೂಲಿ ಮಾಡಲಾಗಿತ್ತು. ದಂಡ ವಿಧಿಸುವುದಕ್ಕೆ ಆಕ್ಷೇಪ ವ್ಯಕ್ತವಾದ ಕಾರಣ ಅದನ್ನು ಕೈ ಬಿಡಲಾಗಿತ್ತು.

ರಾಜ್ಯದಿಂದ ಎಲ್ಲ ಜಿಲ್ಲೆಗಳಿಗೆ ಕಾರ್ಡ್‌ಗಳ ಪರಿಶೀಲನೆಯ ಪಟ್ಟಿ ಬಂದಿದೆ. ಅದರಂತೆ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ. ಪೂರ್ಣವಾಗಿ ಪರಿಶೀಲಿಸದೆ ಯಾವುದೇ ಕಾರ್ಡ್‌ಗಳನ್ನು ರದ್ದು ಮಾಡುವುದಿಲ್ಲ. ಮನೆಯ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತದೆ. ನಿರ್ದಿಷ್ಟವಾಗಿಯೂ ಅನರ್ಹರು ಎಂಬುದು ಕಂಡುಬಂದಲ್ಲಿ ಮಾತ್ರ ರದ್ದಾಗಲಿದೆ. ರದ್ದಾಗುವ ಪ್ರಮಾಣ ಶೇ.2ರಷ್ಟು ಇರಬಹುದು.
-ರವೀಂದ್ರ, ಉಪ ನಿರ್ದೇಶಕರು, ಆಹಾರ ಇಲಾಖೆ

ಯಾರ ಕಾರ್ಡ್‌ ರದ್ದು?
2016ರಲ್ಲಿ ಆಹಾರ ಇಲಾಖೆ ನಿಗದಿ ಮಾಡಿದ ಮಾನದಂಡದಂತೆ, ಸರಕಾರಿ, ಅರೆ ಸರಕಾರಿ ಖಾಯಂ ನೌಕರರಾಗಿರಬಾರದು, ವೃತ್ತಿ ತೆರಿಗೆ, ಜಿಎಸ್‌ಟಿ, ಆದಾಯ ತೆರಿಗೆ ಪಾವತಿದಾರರಾಗಿರಬಾರದು, ಗ್ರಾಮೀಣ ಭಾಗದಲ್ಲಿ 3 ಹೆಕ್ಟೇರ್‌ಗಿಂತ ಹೆಚ್ಚು ಭೂಮಿ ಹೊಂದಿರಬಾರದು, ನಗರದಲ್ಲಿ 1 ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಸ್ವಂತ ಮನೆ ಇರಬಾರದು, ಟ್ರ್ಯಾಕ್ಟರ್‌, ಕ್ಯಾಬ್‌, ಟ್ಯಾಕ್ಸಿ ಹೊರತಾಗಿ ಖಾಸಗಿ ಕಾರು ಇರಬಾರದು, ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರಿರಬಾರದು. ಈ ಮಾನದಂಡ ಮೀರಿದರೆ ಕಾರ್ಡ್‌ ರದ್ದಾಗಲಿದೆ.

ಎಲ್ಲೆಲ್ಲಿ ಎಷ್ಟು?
ದಕ್ಷಿಣ ಕನ್ನಡ: ಆಹಾರ ಇಲಾಖೆ ಕಳುಹಿಸಿರುವ ಪಟ್ಟಿ ಪ್ರಕಾರ ಪುತ್ತೂರು ತಾಲೂಕಿನಲ್ಲಿ 5,402, ಸುಳ್ಯ 2,998, ಬಂಟ್ವಾಳ 8,835, ಬೆಳ್ತಂಗಡಿ 7,075, ಕಡಬ 2,911, ಮಂಗಳೂರು 14,092, ಮೂಡಬಿದಿರೆ 2,865, ಮೂಲ್ಕಿ 1,932, ಉಳ್ಳಾಲ 7,983 ಬಿಪಿಎಲ್‌ ಕಾರ್ಡ್‌ದಾರರನ್ನು ಅನರ್ಹ ಪಟ್ಟಿಯಲ್ಲಿ ಗುರುತಿಸಲಾಗಿದೆ. ಅನರ್ಹ ಕಾರ್ಡ್‌ಗಳ ಪರಿಶೀಲನೆ ನಡೆಯುತ್ತಿದೆ.

ಉಡುಪಿ: ಉಡುಪಿ ಜಿಲ್ಲೆಯ 39,627 ಬಿಪಿಎಲ್‌ ಕಾರ್ಡ್‌ ಗಳು ಅನರ್ಹತೆ ಹೊಂದಬಹುದಾದ ಪಟ್ಟಿಯಲ್ಲಿದ್ದು, ಪರಿಶೀಲನೆಗೆ ಕೇಂದ್ರ ಕಚೇರಿಯಿಂದ ಜಿಲ್ಲೆಗೆ ಕಳುಹಿಸಲಾಗಿತ್ತು. ಈ ಪೈಕಿ 34,112 ಕಾರ್ಯಗಳ ಪರಿಶೀಲನೆ ಕಾರ್ಯ ಪೂರ್ಣಗೊಂಡಿದ್ದು, 5,515 ಕಾರ್ಡ್‌ ಗಳ ಪರಿಶೀಲನೆ ಬಾಕಿಯಿದೆ. 39,627 ಕಾರ್ಡ್‌ಗಳಲ್ಲಿ ಕೇವಲ 464 ಕಾರ್ಡ್‌ ಮಾತ್ರ ಅನರ್ಹ ಎಂಬುದು ತಿಳಿದು ಬಂದಿದೆ. ಅನರ್ಹತೆ ಸಾಧ್ಯತೆ ಪಟ್ಟಿಯಲ್ಲಿ ಇರುವ ಕಾರ್ಡ್‌ಗಳು ಕಾರ್ಕಳ-6,689, ಕುಂದಾಪುರ-7,551, ಉಡುಪಿ-11,238, ಕಾಪು-4,943, ಬ್ರಹ್ಮಾವರ-5,928, ಬೈಂದೂರು-2,056, ಹೆಬ್ರಿ-1,222. ಒಟ್ಟು-39627

 

 

Advertisement

Udayavani is now on Telegram. Click here to join our channel and stay updated with the latest news.

Next