Advertisement

ಒತ್ತುವರಿ ತೆರವು: ಅಹವಾಲು ಸಲ್ಲಿಕೆಗೆ ಸೂಚನೆ

02:40 PM May 13, 2022 | Team Udayavani |

ಚಿಕ್ಕಮಗಳೂರು: ಮಸಗಲಿ ಮೀಸಲು ಅರಣ್ಯ ಪ್ರದೇಶ ಒತ್ತುವರಿ ತೆರವು ಸಂಬಂಧ ಸಂಬಂಧಪಟ್ಟವರು ಮೇ 16 ರೊಳಗೆ ತಮ್ಮ ಅಹವಾಲು ಸಲ್ಲಿಸುವಂತೆ ಸೂಚಿಸಲಾಯಿತು.

Advertisement

ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಸಗಲಿ ಒತ್ತುವರಿ ತೆರವು ಸಂಬಂಧ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿ, ಮಸಗಲಿ ಮೀಸಲು ಅರಣ್ಯ ಪ್ರದೇಶದಲ್ಲಿ ವಾಸವಾಗಿರುವ ಜನರಿಗೆ ಪ್ರತಿ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ, 2 ಎಕರೆ ಭೂಮಿ ನೀಡುವಂತೆ ಜಿಲ್ಲಾಡಳಿತ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಈ ಸಂಬಂಧ ಮುಖ್ಯಮಂತ್ರಿಗಳು, ಅರಣ್ಯ ಮತ್ತು ಕಂದಾಯ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.

ಶಾಸಕ ಸಿ.ಟಿ. ರವಿ ಮಾತನಾಡಿ, ಜಿಲ್ಲಾಡಳಿತ ಸಲ್ಲಿಸುವ ಪ್ರಸ್ತಾವನೆಯನ್ನು ಎಂ.ಪಿ. ಕುಮಾರಸ್ವಾಮಿ ಅವರು ಬೆನ್ನು ಹತ್ತಿ ಕೆಲಸ ಮಾಡಿಸಬೇಕು. ತಾವು ಸಹ ಮುಖ್ಯಮಂತ್ರಿ ಸೇರಿದಂತೆ ಸಂಬಂಧಪಟ್ಟ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಮಸಗಲಿ ಮೀಸಲು ಅರಣ್ಯ ವ್ಯಾಪ್ತಿಯ ಜನರಿಗೆ ಅನುಕೂಲ ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಒತ್ತುವರಿ ತೆರವು ಬದಲು ಡೀಮ್ಡ್ ಫಾರೆಸ್ಟ್‌ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ ಅಥವಾ ಒತ್ತುವರಿ ತೆರವು ಅನಿವಾರ್ಯವಾದರೆ ಸೂಕ್ತ ಪರಿಹಾರ ಪ್ಯಾಕೇಜ್‌ ನೀಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

Advertisement

ಮಸಗಲಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ 76 ಜನರು ಪರಿಹಾರಕ್ಕೆ ಅರ್ಹರಾಗಿದ್ದಾರೆ. ಉಳಿದವರಿಗೆ ಪರಿಹಾರ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಜಿಲ್ಲಾಧಿಕಾರಿಗಳು ಪ್ರತಿ ಕುಟುಂಬದಿಂದ ಪ್ರತ್ಯೇಕ ಮನವಿ ಸ್ವೀಕರಿಸಿ ಸರ್ಕಾರಕ್ಕೆ ಕಳುಹಿಸಿ ಕೊಡಲು ಮುಂದಾಗಬೇಕೆಂದು ಸಿ.ಟಿ. ರವಿ ಸಲಹೆ ನೀಡಿದರು.

ಎಂ.ಪಿ. ಕುಮಾರಸ್ವಾಮಿ ಮಾತನಾಡಿ, ಅಧಿಕಾರಿಗಳಿಂದ ತಪ್ಪಾಗಿದೆ. ಅರಣ್ಯವೆಂದು ಗೊತ್ತಿದ್ದರೂ ಜನರಿಗೆ ಜಮೀನು ಹಕ್ಕುಪತ್ರ ನೀಡಲಾಗಿದೆ. ಮೂಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಪ್ರತೀ ಮನೆಗೆ 2ಲಕ್ಷ ರೂ. ಪರಿಹಾರ ನೀಡಲಾಗಿದೆ. ಈಗ ಪರಿಹಾರದ ಮೊತ್ತವನ್ನು ಪುನರ್‌ ಪರಿಶೀಲಿಸಬೇಕಾಗಿದೆ ಎಂದು ತಿಳಿಸಿದರು.

ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿ. ಪರಿಹಾರ ದೊರೆಯುವ ತನಕ ಅಲ್ಲೇ ಉಳಿಸಬೇಕೆಂದು ನಿವಾಸಿಯೊಬ್ಬರು ಮನವಿ ಮಾಡಿದರು. ಮಸಗಲಿ ಅರಣ್ಯದ ಮಧ್ಯಭಾಗದಲ್ಲಿ ಜನ ಮನೆ ಕಟ್ಟಿಕೊಂಡು ವಾಸವಾಗಿಲ್ಲ, ಗಡಿ ಅಂಚಿನಲ್ಲಿದ್ದಾರೆ. ಶಾಸಕರು ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಲಿದ್ದಾರೆ. ಜಿಲ್ಲಾಡಳಿತ ಜನರನ್ನು ಅಲ್ಲೇ ಉಳಿಸಲು ಮುಂದಾಗಬೇಕೆಂದು ಮತ್ತೋರ್ವ ನಿವಾಸಿ ಮನವಿ ಮಾಡಿದರು.

ಜಿಲ್ಲಾಧಿಕಾರಿ ಕೆ.ಎನ್. ರಮೇಶ್‌ ಮಾತನಾಡಿ, ಈ ಪ್ರಕರಣದಲ್ಲಿ ಈಗಾಗಲೇ ಸರ್ವೋತ್ಛ ನ್ಯಾಯಾಲಯದಿಂದ ತೀರ್ಪು ಬಂದು 2 ವರ್ಷ ಕಳೆದಿದೆ. ನ್ಯಾಯಾಲಯ ಆದೇಶ ಜಾರಿ ವಿಳಂಬದಿಂದ ನ್ಯಾಯಾಂಗ ನಿಂದನೆಯಾಗುವ ಸಾಧ್ಯತೆ ಇದೆ ಎಂದ ಅವರು, ಸಂತ್ರಸ್ತರ ಅಹವಾಲುಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಅಹವಾಲುಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಮಾಜಿ ಸಚಿವೆ ಮೋಟಮ್ಮ, ಬಿ.ಬಿ. ನಿಂಗಯ್ಯ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಾಂತಿ ಹಾಗೂ ಅಪರ ಜಿಲ್ಲಾಧಿಕಾರಿ ಬಿ.ಆರ್. ರೂಪ, ಮಸಗಲಿ ಅರಣ್ಯ ಭೂಮಿ ಒತ್ತುವರಿ ಸಂತ್ರಸ್ತರು ಇದ್ದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಪ್ರತ್ಯೇಕ ಕೌಂಟರ್‌ ತೆರೆದು ಸಿಬ್ಬಂದಿ ನೇಮಿಸಬೇಕು. ಮಸಗಲಿ ಅರಣ್ಯ ಭೂಮಿ ಒತ್ತುವರಿ ಕುಟುಂಬಗಳು ಮೇ 16 ರೊಳಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಪ್ರತ್ಯೇಕವಾಗಿ ಮನವಿ ಸಲ್ಲಿಸಬೇಕು. ಮನವಿ ಪರಿಶೀಲಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. -ಕೆ.ಎನ್. ರಮೇಶ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next