Advertisement

ಪಂಚಾಂಗ ಕೇಳಿದೀನಿ ಸರ್ಕಾರಕ್ಕೆ ಏನೂ ಆಗಲ್ಲ:ಎಚ್‌.ಡಿ. ರೇವಣ್ಣ

12:30 AM Jan 31, 2019 | Team Udayavani |

ಬೆಂಗಳೂರು: ತಮಿಳುನಾಡು ಹಾಗೂ ಕರ್ನಾಟಕದ ಎರಡು ಪಂಚಾಂಗ ನೋಡಿದೀನಿ. ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ. ಬಜೆಟ್‌ ಅಧಿವೇಶನ ಸುಸೂತ್ರವಾಗಿ ನಡೆಯುತ್ತದೆ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಭವಿಷ್ಯ ನುಡಿದಿದ್ದಾರೆ.

Advertisement

ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಐದು ವರ್ಷ ಸುಗಮವಾಗಿ ನಡೆಯಲಿದೆ. ಕುಮಾರಸ್ವಾಮಿಯವರ ಅಧಿಕಾರಕ್ಕೆ ಯಾವುದೇ ತೊಂದರೆಯಿಲ್ಲ. ನಾನು ಈಗಾಗಲೇ ತಮಿಳುನಾಡಿನ ಪಂಚಾಂಗ ನೋಡಿದ್ದೇನೆ. ಅದರ ಪ್ರಕಾರ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ಯುಗಾದಿಗೆ ರಾಜ್ಯದ ಹೊಸ ಪಂಚಾಂಗ ಬರುತ್ತದೆ. ಆ ಪಂಚಾಂಗವನ್ನೂ ನೋಡುತ್ತೇನೆ ಎಂದು ಚಟಾಕಿ ಹಾರಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೂಡ ತಮಿಳುನಾಡು ಪಂಚಾಂಗ ನೋಡಿಕೊಂಡೇ ಸರ್ಕಾರ ಬದಲಾಯಿಸಲು ಆಗುವುದಿಲ್ಲ ಎಂದು ಸುಮ್ಮನಾಗಿದ್ದಾರೆ. ಬಜೆಟ್‌ ಅಧಿವೇಶನವೂ ಸುಗಮವಾಗಿ ನಡೆಯಲಿದ್ದು, ಬಜೆಟ್‌ ಕೂಡ ಪಾಸ್‌ ಆಗುತ್ತದೆ ಎಂದರು.

ನಾನು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಬೇರೆಯವರ ಬಾಗಿಲು ಕಾಯುವಂತಹ ಪರಿಸ್ಥಿತಿ ನನಗೆ ಬಂದಿಲ್ಲ. ನಾನು ಯಾವುದೇ ತಂಡದ ನಾಯಕತ್ವ ವಹಿಸಿಕೊಂಡಿಲ್ಲ. ದೇವೇಗೌಡರು ಹಾಗೂ ಕುಮಾರಸ್ವಾಮಿ ಏನು ಹೇಳುತ್ತಾರೋ ನಾನು ಅದನ್ನು ಮಾಡುತ್ತೇನೆ. ನನ್ನ ಹಾಗೂ ಕುಮಾರಸ್ವಾಮಿ ನಡುವೆ ಜಗಳವಾಗುತ್ತದೆ ಎಂದು ಯಾರಾದರೂ ಕನಸು ಕಂಡರೆ, ಅವರ ಕನಸು ನನಸಾಗುವುದಿಲ್ಲ. ನಾನು ಯಾವತ್ತೂ ಅಧಿಕಾರಕ್ಕೆ ಅಂಟಿಕೊಂಡು ಕುಳಿತಿಲ್ಲ. ದೇವೇಗೌಡು ಹೇಳಿದರೆ, ಯಾವುದೇ ತ್ಯಾಗಕ್ಕೂ ಸಿದ್ದನಿದ್ದೇನೆ. ನನಗೆ ಲೋಕೋಪಯೋಗಿ ಇಲಾಖೆಯ ಜವಾಬ್ದಾರಿ ವಹಿಸಿದ್ದಾರೆ. ಇಲಾಖೆಯ ಕೆಲವನ್ನಷ್ಟೇ ಮಾಡುತ್ತಿದ್ದೇನೆ ಎಂದು ಹೇಳಿದರು.

ರಾಜಕೀಯದಲ್ಲಿ ವೈರಿಗಳ ಕಾಟ ಹೆಚ್ಚಾದಾಗ ಶೃಂಗೇರಿ ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆಯಬೇಕು. ಏನೇ ತೊಂದರೆಯಾದರೂ ಗುರುಗಳ ಆಶೀರ್ವಾದ ಇದ್ದರೆ, ಏನೂ ಸಮಸ್ಯೆಯಾಗುವುದಿಲ್ಲ ಎಂದರು.

Advertisement

ತಿಪ್ಪೆಸ್ವಾಮಿ ನೇಮಕಕ್ಕೆ ಒತ್ತಡ ಹೇರಿದ್ದು ನಿಜ.
ತಿಪ್ಪೇಸ್ವಾಮಿಯವರು ದೇವೇಗೌಡರ ಕಾಲದಿಂದಲೂ ನಮ್ಮ ಕುಟುಂಬಕ್ಕೆ ನಿಷ್ಠೆಯಿಂದ ಇದ್ದಾರೆ. ಹೊಳೆನರಸೀಪುರ ತಹಸೀಲ್ದಾರ್‌ ಆದಾಗಿನಿಂದ ಇಂದಿನವರೆಗೂ ದೇವೇಗೌಡರು, ಕುಮಾರಸ್ವಾಮಿ ಹಾಗೂ ನನ್ನ ವಿಶೇಷಾಧಿಕಾರಿಯಾಗಿ ಉತ್ತಮ ಸೇವೆ ಮಾಡಿದ್ದಾರೆ. ಹೀಗಾಗಿ ಅವರನ್ನು ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡುವಂತೆ ಒತ್ತಡ ಹೇರಿದ್ದು ನಿಜ. ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿಯೇ ಅವರನ್ನು ಶಾಸಕರನ್ನಾಗಿ ಮಾಡಿ ಮಂತ್ರಿ ಮಾಡಲು ಬಯಸಿದ್ದೆ. ಆದರೆ, ಅವರು ನಿರಾಕರಿಸಿದರು. ಈ ಬಾರಿ ಅವರಿಗೆ ಗೊತ್ತಿಲ್ಲದಂತೆ ಪ್ರೊಫೈಲ್‌ ಸಿದ್ದಪಡಿಸಿ ರಾಜ್ಯಪಾಲರಿಗೆ ಕಳುಹಿಸಿ ಕೊಟ್ಟಿದ್ದೆವು ಎಂದು ರೇವಣ್ಣ ಹೇಳಿದರು.

ಮಂಜು ದೊಡ್ಡವರು: ಹಾಸನದಲ್ಲಿ ದೇವೇಗೌಡರ ಬದಲು ಪ್ರಜ್ವಲ್‌ ರೇವಣ್ಣ ಸ್ಪರ್ಧೆ ಮಾಡಿದರೆ ಜಿಲ್ಲಾ ಕಾಂಗ್ರೆಸ್‌ ಬೆಂಬಲ
ನೀಡುವುದಿಲ್ಲ ಎಂದು ಮಾಜಿ ಸಚಿವ ಎ.ಮಂಜು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಲು ಎಚ್‌.ಡಿ.ರೇವಣ್ಣ ನಿರಾಕರಿಸಿದ್ದಾರೆ. ಮಂಜು ಅವರು ದೊಡ್ಡವರು. ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಹಾಸನದಲ್ಲಿ ಯಾರು ಸ್ಪರ್ಧೆ ಮಾಡಬೇಕು ಎನ್ನುವುದನ್ನು ದೇವೇಗೌಡರು ತೀರ್ಮಾನ ಮಾಡುತ್ತಾರೆ. ಪ್ರಜ್ವಲ್‌ ರೇವಣ್ಣ ಈಗ ಕ್ಷೇತ್ರದಲ್ಲಿ ಓಡಾಡುತ್ತಿಲ್ಲ.ಅವನು ಅಭ್ಯರ್ಥಿ ಆಗಬೇಕೋ, ಬೇಡವೋ ಎನ್ನುವುದನ್ನು ಜಿಲ್ಲೆಯ ಪಕ್ಷದ ಕಾರ್ಯಕರ್ತರು ನಿರ್ಧರಿಸುತ್ತಾರೆ ಎಂದು ರೇವಣ್ಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next