Advertisement

ಪಾಕ್‌ಗೆ 11 ಸಾವಿರ ಕೋಟಿ ರೂ. ನೆರವು ಬಂದ್‌!

06:00 AM Nov 22, 2018 | Team Udayavani |

ವಾಷಿಂಗ್ಟನ್‌: ಭಯೋತ್ಪಾದಕರನ್ನು ಪೋಷಿಸುತ್ತಾ ಬಂದಿರುವ ಹಾಗೂ ದಿವಾಳಿ ಅಂಚಿನಲ್ಲಿರುವ ಪಾಕಿಸ್ಥಾನಕ್ಕೆ ಅಮೆರಿಕ ಈಗ ಇನ್ನೊಂದು ಆಘಾತ ನೀಡಿದೆ. ಪಾಕ್‌ಗೆ 11 ಸಾವಿರ ಕೋಟಿ ರೂ. ಭದ್ರತಾ ನೆರವನ್ನು ನೀಡುವ ಪ್ರಸ್ತಾವನೆಯನ್ನು ಅಮೆರಿಕ ರದ್ದುಗೊಳಿಸಿದೆ.

Advertisement

ಅಮೆರಿಕಕ್ಕೆ ಪಾಕ್‌ ಏನೂ ಮಾಡಿಲ್ಲ. ಹೀಗಾಗಿ ನಾವು ಪಾಕ್‌ಗೆ ಹಣ ನೀಡಲಾಗದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಕೆಲವೇ ದಿನಗಳ ಹಿಂದಷ್ಟೇ ಪಾಕ್‌ ವಿರುದ್ಧ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಿಡಿಕಾರಿದ್ದರು. ಅಲ್‌ಖೈದಾ ಉಗ್ರ ಒಸಾಮಾ ಬಿನ್‌ ಲಾಡೆನ್‌ನನ್ನು ಪಾಕಿಸ್ಥಾನ ರಕ್ಷಿಸಿತ್ತು ಎಂದು ಟ್ರಂಪ್‌ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ರಕ್ಷಣಾ ಇಲಾಖೆಯ ವಕ್ತಾರ ಕರ್ನಲ್‌ ರಾಬ್‌ ಮ್ಯಾನಿಂಗ್‌, ಪಾಕ್‌ಗೆ ಆರ್ಥಿಕ ನೆರವು ತಡೆ ಹಿಡಿದಿರುವ ಘೋಷಣೆ ಮಾಡಿದ್ದಾರೆ.

ಟ್ರಂಪ್‌ ಅಧಿಕಾರಕ್ಕೆ ಬಂದ ಅನಂತರದಲ್ಲಿ ಪಾಕ್‌ಗೆ ನೀಡಲಾಗುತ್ತಿರುವ ಬಹುತೇಕ ಆರ್ಥಿಕ ನೆರವನ್ನು ಅಮೆರಿಕ ರದ್ದುಗೊಳಿಸಿದೆ. ಕಳೆದ ಸೆಪ್ಟಂಬರ್‌ನಲ್ಲಿ 2 ಸಾವಿರ ಕೋಟಿ ರೂ. ಸೇನಾ ನೆರವನ್ನು ನಿರಾಕರಿಸಲಾಗಿತ್ತು. ಆಗಲೂ ಉಗ್ರರ ವಿರುದ್ಧ ಕಠಿನ ಕ್ರಮ ಕೈಗೊಳ್ಳದಿದ್ದರೆ ಆರ್ಥಿಕ ನೆರವು ನೀಡಲಾಗದು ಎಂದು ಟ್ರಂಪ್‌ ಗುಡುಗಿದ್ದರು. ಅಷ್ಟೇ ಅಲ್ಲ, ಯುದ್ಧ ವಿಮಾನ ಖರೀದಿಗೆ ನೀಡಲಾಗು ತ್ತಿದ್ದ ಆರ್ಥಿಕ ನೆರವನ್ನೂ ರದ್ದು ಗೊಳಿಸಲಾಗಿತ್ತು. ಇನ್ನೊಂದೆಡೆ ಪಾಕಿಸ್ಥಾನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹಾಗೂ ಚೀನದಿಂದ ಸಾಲಕ್ಕಾಗಿ ಎದುರು ನೋಡುತ್ತಿದೆ. ಅಮೆರಿಕದಲ್ಲಿ ಟ್ರಂಪ್‌ ಅಧಿಕಾರಕ್ಕೇರುತ್ತಿದ್ದಂತೆ ಪಾಕ್‌ ವಿರೋಧಿ ನೀತಿ ತಳೆದಿದ್ದರಿಂದ ಸಂಬಂಧ ಹದಗೆಟ್ಟಲಾರಂಭಿಸಿತ್ತು.
 

Advertisement

Udayavani is now on Telegram. Click here to join our channel and stay updated with the latest news.

Next