Advertisement

ಬಜೆಟ್‌ನಲ್ಲಿ ಅವಿಭಜಿತ ದ.ಕ.ಕ್ಕೆ ದಕ್ಕಿದ್ದು ಸೊನ್ನೆ!

11:33 AM Jul 06, 2018 | |

 ಮಂಗಳೂರು/ಉಡುಪಿ: ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ಮೊದಲ ಬಜೆಟ್‌ ಕರಾವಳಿ ಭಾಗಕ್ಕೂ ಒಂದಷ್ಟು ನಿರೀಕ್ಷೆ ಮೂಡಿಸಿದ್ದು ಅದು ಸುಳ್ಳಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಎರಡೂ ಜಿಲ್ಲೆಗೆ ಸಿಕ್ಕಿದ್ದು ಸೊನ್ನೆ. ಯಾವುದೇ ಯೋಜನೆ ಘೋಷಣೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಎರಡೂ ಜಿಲ್ಲೆಗಳಲ್ಲಿ ಆಕ್ರೋಶ  ವ್ಯಕ್ತವಾಗಿದೆ. ಗುರುವಾರದ ಬಜೆಟ್‌ ಭಾಷಣದಲ್ಲಿ ಸಿಎಂ ಕುಮಾರಸ್ವಾಮಿ ಎಲ್ಲೂ ದ.ಕ., ಉಡುಪಿ ಹೆಸರನ್ನೇ ಪ್ರಸ್ತಾವಿಸಿಲ್ಲ. ಉತ್ತರ ಕನ್ನಡದ ಕಾರವಾರದಲ್ಲಿ ಇಸ್ರೇಲ್‌ ಮಾದರಿ ನೀರಾವರಿ ಯೋಜನೆಯನ್ನು ಹೆಸರಿಸಿದ್ದು ಬಿಟ್ಟರೆ ಇಡೀ ಕರಾವಳಿ ಜಿಲ್ಲೆಗಳಿಗೆ ಯಾವುದೇ ಯೋಜನೆ ಘೋಷಿಸಿಲ್ಲ. ದಕ್ಷಿಣ ಕನ್ನಡ ಜಿಲ್ಲೆಗೆ ಚುನಾವಣಾ ಪೂರ್ವದಲ್ಲಿ ಭೇಟಿ ನೀಡಿದ್ದ ಸಂದರ್ಭಗಳಲ್ಲಿ ಕುಮಾರಸ್ವಾಮಿಯವರು ಹಲವಾರು ಯೋಜನೆಗಳ ಭರವಸೆಗಳನ್ನು ನೀಡಿದ್ದರು. ಆದರೆ ಒಂದೂ ಈಡೇರಿಲ್ಲ. ಬದಲಿಗೆ ಸಿದ್ದರಾಮಯ್ಯ ಸರಕಾರದಲ್ಲಿ ಘೋಷಿಸಿದ್ದ ಯೋಜನೆಗಳನ್ನೇ ಮುಂದುವರಿಸುವುದಾಗಿ ಸಮಾಧಾನ ಪಡಿಸುವ ಯತ್ನ ಮಾಡಿದ್ದಾರೆ.   

Advertisement

ನಿರೀಕ್ಷೆಗಳು ಠುಸ್‌ 
ಜಿಲ್ಲೆಗಳ ರಬ್ಬರ್‌ ಬೆಳೆಗಾರರಿಗೆ ಹಾಗೂ ಅಡಿಕೆ ಬೆಳೆಗಾರರಿಗೆ ಬೆಂಬಲ ಬೆಲೆ, ಹಳದಿ ರೋಗಕ್ಕೆ ಪರಿಹಾರಕ್ಕೆ ಪ್ರಯೋಗಾಲಯ ಸ್ಥಾಪನೆ, ಕರಾವಳಿಗೆ ವಿಶೇಷ ಮರಳು ನೀತಿ, ಕೋಮು ಸಂಘರ್ಷ, ಹತ್ಯೆಗಳನ್ನುತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ಕಾರ್ಯಪಡೆ ರಚನೆ ಹಾಗೂ ವಿಶೇಷ ದಳಗಳ ನಿಯೋಜನೆ, ಪ್ರವಾಸೋದ್ಯಮ ಯೋಜನೆಗಳು, ಸೋಲಾರ್‌ ಪಾರ್ಕ್‌ಗಳ ಸ್ಥಾಪನೆ, ಮಂಗಳೂರು ನಗರದಲ್ಲಿ ಮೆಟ್ರೋ ರೀತಿಯ ವ್ಯವಸ್ಥೆ ಬಗ್ಗೆ ಆಶಾವಾದ ಇತ್ತು. ಆದರೆ ಎಲ್ಲ ನಿರೀಕ್ಷೆ ಠುಸ್‌ ಆಗಿದೆ.

ದ.ಕ., ಉಡುಪಿ ವಿರುದ್ಧ ಸೇಡು ತೀರಿಸಿಕೊಂಡರಾ?
ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದರು. ಜಿಲ್ಲೆಯಲ್ಲಿ ಮೂರು ಸ್ಥಾನಗಳಲ್ಲಿ ಜೆಡಿಎಸ್‌ ಸ್ಪರ್ಧೆ ಮಾಡಿತ್ತು. ಉಡುಪಿ ಜಿಲ್ಲೆಯಲ್ಲೂ ಜೆಡಿಎಸ್‌ ಮೂರನೇ ಸ್ಥಾನಕ್ಕೆ ಕುಸಿದಿತ್ತು.ಈಗ ಬಜೆಟ್‌ನಲ್ಲಿ ಅವಳಿ ಜಿಲ್ಲೆಗಳನ್ನು ಕಡೆಗಣಿಸಿರುವುದಕ್ಕೆ ಜೆಡಿಎಸ್‌ಗೆ ಈ ಜಿಲ್ಲೆಗಳಲ್ಲಿ ಹಿನ್ನಡೆಯಾಗಿದ್ದೇ ಕಾರಣ ಎಂದೂ ರಾಜಕೀಯವಾಗಿ ವ್ಯಾಖ್ಯಾನಿಸಲಾಗುತ್ತಿದೆ.   

ಚುನಾವಣೆ ಸಂದರ್ಭ ನೀಡಿದ್ದ  ಭರವಸೆಗಳೇನು
 * ಮೀನುಗಾರರ, ನೇಕಾರರ, ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ, ಡಿಸೆಲ್‌ ಸಬ್ಸಿಡಿ, ರಕ್ಷಣಾ ವಿಮೆ ಸೌಲಭ್ಯಗಳು            * ಅಡಿಕೆ ಬೆಳೆಗೆ ರೋಗಗಳ ಬಗ್ಗೆ ಸಂಶೋಧನಾ ಕೇಂದ್ರ  
*  ಮರಳು ನೀತಿ ಪರಿಷ್ಕರಣೆ, ಕೈಗೆಟಕುವ ದರದಲ್ಲಿ ಮರಳು 
*  ಕೋಮುಗಲಭೆ ಆಗದಂತೆ ಕಟ್ಟುನಿಟ್ಟಿನ ಕ್ರಮ
*  ಪ್ರತಿ ಗ್ರಾ.ಪಂ., ನಗರ ಪಂ. ವ್ಯಾಪ್ತಿಯಲ್ಲಿ ಕೆರೆಗಳ ಹೂಳೆತ್ತುವಿಕೆ 

ನಿರೀಕ್ಷೆ ಈಡೇರಿಲ್ಲ
ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಪುನಶ್ಚೇತನ, ಬ್ರಹ್ಮಾವರದ ಕೃಷಿ ಕಾಲೇಜು ಪ್ರಸ್ತಾವದ ಮುಂದುವರಿದ ಯೋಜನೆಗಳ ಬಜೆಟ್‌ನಲ್ಲಿ ಪ್ರಸ್ತಾವವಿಲ್ಲ. ಕಾರ್ಕಳಕ್ಕೆ ಒಳಚರಂಡಿ ಯೋಜನೆ, ಕುಡಿಯುವ ನೀರು ಯೋಜನೆಗಳಿಗೆ ನಿರೀಕ್ಷೆಗಳನ್ನು ಇರಿಸಿಕೊಂಡಿದ್ದರೂ ಇದಾವುದೂ ಬಜೆಟ್‌ನಲ್ಲಿ ಪ್ರಸ್ತಾವಗೊಂಡಿಲ್ಲ. ಮಲ್ಪೆ ಬಂದರಿನ ಅಭಿವೃದ್ಧಿಗೆ 20 ಕೋ.ರೂ. ಅನುದಾನವೂ ಸಿಕ್ಕಿಲ್ಲ.

Advertisement

ಬಜೆಟ್ ಬಗ್ಗೆ ಶಾಸಕರ ಅಭಿಪ್ರಾಯಗಳು  

ಇದು ರಾಜಕೀಯ ಪ್ರೇರಿತ ಬಜೆಟ್‌. ಈ ಬಾರಿಯ ಬಜೆಟ್‌ನಲ್ಲಿ ಕರಾವಳಿ ಮಂದಿ ಅನೇಕ ನಿರೀಕ್ಷೆಗಳನ್ನು ಹೊಂದಿದ್ದರು. ಮೀನುಗಾರರ ಸಾಲಮನ್ನಾ ಮಾಡುವ, ಮಂಗಳೂರಿನಲ್ಲಿ ನೆರೆ ಹಾನಿಗೊಳಗಾದ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್‌ ಘೋಷಿಸುವ ಭರವಸೆ ಇತ್ತು. ಕೇವಲ 3 ಜಿಲ್ಲೆಗಳನ್ನು ಗಮನದಲ್ಲಿ ಇರಿಸಿಕೊಂಡು ಈ ಬಜೆಟ್‌ ಮಂಡಿಸಲಾಗಿದೆ. 
ಡಾ| ವೈ. ಭರತ್‌ ಶೆಟ್ಟಿ, ಮಂಗಳೂರು ಉತ್ತರ ಶಾಸಕ

ಕರಾವಳಿಯನ್ನು ಸಂಪೂರ್ಣವಾಗಿ ಅವಗಣಿಸಿ, ದ್ವೇಷ ರಾಜಕೀಯವನ್ನು ಮಾಡಿರುವ ಈ ಬಜೆಟ್‌ ರಾಜ್ಯದ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟದಾದುದು. ತುಂಬೆ ಅಣೆಕಟ್ಟು ಎತ್ತರಿಸಿದ್ದರಿಂದ ಭೂಮಿ ಕಳೆದುಕೊಂಡ ಕೃಷಿಕರಿಗೆ 120 ಕೋಟಿ ರೂ. ಪರಿಹಾರದ ಪ್ಯಾಕೇಜ್‌ ನೀಡುವಂತೆ ಮನವಿ ಮಾಡಿದ್ದೆ. ಅದರ ಉಲ್ಲೇಖವೇ ಇಲ್ಲ. 
– ಡಿ. ವೇದವ್ಯಾಸ ಕಾಮತ್‌, ಮಂ.ದಕ್ಷಿಣ ಶಾಸಕ

ರಾಜ್ಯದ ಆರ್ಥಿಕ ಶಿಸ್ತು ಕಾಪಾಡಿಕೊಂಡು, ರೈತರ ಸಾಲಮನ್ನಾದಂತಹ ದಿಟ್ಟ ಕಾರ್ಯ ಕ್ರಮ ಜಾರಿಗೆ ತಂದಿದ್ದಾರೆ. ಮುಖ್ಯ ಮಂತ್ರಿ ಮಾತೃಶ್ರೀ ಯೋಜನೆ, ಸಂಧ್ಯಾ ಸುರಕ್ಷಾ ಮಾಸಾಶನ ಏರಿಕೆ, ವಿಕಲಚೇತನರಿಗೆ ಮನೆ 
ನಿರ್ಮಾಣ, ಬಡವರಿಗೆ ಅಂಗಾಂಗ ಕಸಿಚಿಕಿತ್ಸೆಗಳಿಗೆ 30 ಕೋಟಿ ರೂ. ಅನುದಾನ ಮತ್ತಿತರ ಕಾರ್ಯಕ್ರಮಗಳು ದುರ್ಬಲ ವರ್ಗದ ಏಳಿಗೆಗೆ ಪೂರಕ.
ಯು.ಟಿ. ಖಾದರ್‌, ವಸತಿ, ನಗರಾಭಿವೃದ್ಧಿ ಸಚಿವ

ಕರಾವಳಿ ಪ್ರದೇಶಕ್ಕೆ ಇದು ಶೂನ್ಯ ಬಜೆಟ್‌. ಕರಾವಳಿ ಪ್ರದೇಶದ ಬಿಜೆಪಿಯ ಭದ್ರ ಕೋಟೆಯಾಗಿದೆ; ಇದೇ ಕಾರಣಕ್ಕೆ ಈ ಪ್ರದೇಶವನ್ನು ಕಡೆಗಣಿಸಲಾಗಿದೆ. ಉಳ್ಳಾಲದಿಂದ ಕಾರವಾರದ ವರೆಗಿನ ಬಂದರು ಪ್ರದೇಶಗಳಲ್ಲಿ ಹೂಳು ತುಂಬಿದ್ದು, ಇದಕ್ಕೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ಹಣ ಬಿಡುಗಡೆ ಮಾಡಬಹುದು ಎಂಬ ವಿಶ್ವಾಸವಿತ್ತು. 
– ಉಮಾನಾಥ ಕೋಟ್ಯಾನ್‌, ಮೂಡಬಿದಿರೆ ಶಾಸಕ

ಕರಾವಳಿ ಭಾಗಕ್ಕೆ ಚೆಂಬು; ಮಂಡ್ಯ, ರಾಮನಗರ, ಹಾಸನದವರಿಗೆ ಕೊಡ ಕೊಟ್ಟಿದ್ದಾರೆ. ರೈತರ ಸಾಲ ಮನ್ನಾ ಮಾಡುತ್ತೇವೆ ಎಂದವರು ನಿರಾಶೆಗೊಳಿಸಿದ್ದಾರೆ. ಕೇವಲ 25 ಸಾವಿರ ರೂ. ಮಾತ್ರ ಬೆಳೆ ಸಾಲ ಮನ್ನಾ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ದೊಡ್ಡ ರೈತರು, ಸಣ್ಣ ರೈತರು ಎಂಬುದಾಗಿ ವರ್ಗೀಕರಿಸಿ ಸರಕಾರದಿಂದ ಸಿಗುವ ಸವಲತ್ತುಗಳನ್ನು ಕಸಿದುಕೊಳ್ಳುವ ಕೆಲಸ ಮಾಡಿದ್ದಾರೆ.
-ಸಂಜೀವ ಮಠಂದೂರು, ಪುತ್ತೂರು ಶಾಸಕ

ಈ ಬಜೆಟ್‌ನಲ್ಲಿ ಕರಾವಳಿ ಭಾಗವನ್ನು ಅವಗಣಿಸಲಾಗಿದೆ. ಕೋಲಾರ, ಕೊಪ್ಪಳ, ಚಿತ್ರ ದುರ್ಗ, ಗದಗಗಳಿಗೆ ಇಸ್ರೇಲ್‌ ಮಾದರಿ ಕೃಷಿ ಪದ್ಧತಿ ಅನುಷ್ಠಾನವನ್ನು ಪ್ರಸ್ತಾವಿಸಿದ್ದಾರೆ. ಆದರೆ ಸಣ್ಣ ರೈತರಿರುವ ದ. ಕನ್ನಡ ಜಿಲ್ಲೆಗೆ ಅದು ಸೂಕ್ತವಾಗಿದೆಯಾದರೂ, ಜಿಲ್ಲೆಯನ್ನು ಬಿಟ್ಟಿದ್ದಾರೆ. ಬಜೆಟ್‌ನಲ್ಲಿ ಮೀನುಗಾರರಿಗೆ ಯಾವುದೇ ಯೋಜನೆ ನೀಡಿಲ್ಲ. ಮಲತಾಯಿ ಧೋರಣೆ ಅನುಸರಿಸಿರುವುದು ಸ್ಪಷ್ಟ.
-ರಾಜೇಶ್‌ ನಾೖಕ್‌, ಬಂಟ್ವಾಳ ಶಾಸಕ

ಜಿಲ್ಲೆಯನ್ನು ಸಂಪೂರ್ಣವಾಗಿ ಅವಗಣಿಸಿ ಬಜೆಟ್‌ ಮಂಡಿಸಲಾಗಿದೆ. ಎಂಡೋ ಸಲ್ಫಾನ್‌ ದುರಂತದಿಂದ ಸಂತ್ರಸ್ತರಾದವರ ಬಗ್ಗೆ ಕಿಂಚಿತ್ತೂ ಕರುಣೆ ತೋರದ ಎಂಡೋಪೀಡಿತರ ಶಾಪಕ್ಕೆ ಗುರಿ ಯಾಗುವ ಬಜೆಟ್‌ ಇದಾಗಿದೆ. ಬೆಲೆ ಕುಸಿತದಿಂದ ಕಂಗೆಟ್ಟಿರುವ ಅಡಿಕೆ ಮತ್ತು ರಬ್ಬರ್‌ ಬೆಳೆಗಾರರಿಗೆ ಬೆಂಬಲ ಬೆಲೆಯನ್ನು ನೀಡದ ರೈತ ವಿರೋಧಿ ಬಜೆಟ್‌. ರೈತರಿಗೆ ಸಾಲ ಮನ್ನಾ ಎಂಬ ಕಣ್ಣೊರೆಸುವ ತಂತ್ರವನ್ನಷ್ಟೆ ಅನುಸರಿಸಲಾಗಿದೆ. 
 -ಹರೀಶ್‌ ಪೂಂಜ, ಬೆಳ್ತಂಗಡಿ ಶಾಸಕ

ಮಂಡ್ಯ, ರಾಮನಗರಕ್ಕಷ್ಟೇ ಸೀಮಿತ ಬಜೆಟ್‌ ಇದು. ಕರಾವಳಿ, ಮಲೆ ನಾಡು ಸೇರಿದಂತೆ ಉಳಿದ ಜಿಲ್ಲೆಗಳನ್ನು ಸಂಪೂರ್ಣವಾಗಿ ಅವಗಣಿಸ ಲಾಗಿದೆ. ಬಜೆಟ್‌ ಮಂಡಿಸುವ ಸಂಪ್ರದಾಯ ಮಾಡಿದ್ದು ಬಿಟ್ಟರೆ, ಇದರಲ್ಲಿ ಯಾವುದೇ ದೂರದೃಷ್ಟಿ, ಜನಪರ ಕಾಳಜಿ ಇಲ್ಲ. ಉದಾ ಹರಣೆಗೆ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ, ಶೇ.0 ಬಡ್ಡಿಯಲ್ಲಿ ನೀಡುತ್ತಿದ್ದ ಸಾಲವನ್ನು 2 ಲಕ್ಷ ರೂ.ಗಳಿಗೆ ಇಳಿಸಲಾಗಿದೆ. 
-ಎಸ್‌. ಅಂಗಾರ, ಸುಳ್ಯ ಶಾಸಕ

ಕಳೆದ 15 ವರ್ಷಗಳಲ್ಲಿ ಮಂಡನೆಯಾದವುಗಳ ಪೈಕಿ ಈ ಬಜೆಟ್‌ ಅತ್ಯಂತ ಕೆಟ್ಟದು.  ವಿಶೇಷವಾಗಿ ಮೀನುಗಾರರಿಗೆ ಯಾವುದೇ ಯೋಜನೆ ನೀಡಿಲ್ಲ. ರೈತರ ಸಾಲ ಮನ್ನಾ ಕೂಡ ಅಸಮರ್ಪಕವಾಗಿದೆ. ಕರಾವಳಿಯಲ್ಲಿ ಜೆಡಿಎಸ್‌ ಪಕ್ಷವು ಠೇವಣಿ ಕಳೆದುಕೊಂಡಿರುವುದಕ್ಕೆ ಕುಮಾರ ಸ್ವಾಮಿ ಸೇಡು ತೀರಿಸಿಕೊಂಡಂತಿ ದೆ. ಈ ರಾಜ್ಯದಲ್ಲಿ ಹುಟ್ಟಿ ಬೆಳೆದ ದಾರ್ಶನಿಕ ಮಧ್ವಾಚಾರ್ಯರ ಜನ್ಮದಿನಾಚರಣೆಯನ್ನೂ ಆಚರಿಸಬೇಕು. 
-ಕೆ. ರಘುಪತಿ ಭಟ್‌, ಉಡುಪಿ ಶಾಸಕರು

ಕರಾವಳಿ ಭಾಗಕ್ಕೆ ಯಾವ ಹೊಸ ಯೋಜನೆಯನ್ನು ಘೋಷಣೆ ಮಾಡಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶವಿದ್ದರೂ ಯಾವುದೇ ಯೋಜನೆ ಇಲ್ಲ. ಇದೊಂದು ನಿರಾಸೆಯ ಬಜೆಟ್‌. ಹೊಸ ಕುಡಿಯುವ ನೀರಿನ ಯೋಜನೆ, ರಸ್ತೆಗಳ ಅಭಿವೃದ್ಧಿಗಳ ಬಗ್ಗೆ ಸ್ಪಷ್ಟತೆ ಇಲ್ಲ. ಇದೊಂದು ನೀರಸ ಹಾಗೂ ಪಕ್ಷಪಾತಿ ಬಜೆಟ್‌.
– ವಿ. ಸುನಿಲ್‌ ಕುಮಾರ್‌, ಕಾರ್ಕಳ ಶಾಸಕರು, ವಿರೋಧ ಪಕ್ಷದ ಮುಖ್ಯ ಸಚೇತಕರು.

ಬಜೆಟ್‌ ಕರಾವಳಿ ಭಾಗದ ಜನರನ್ನು ಕಡೆಗಣಿಸಿದೆ. ಮೀನುಗಾರರ ಕುರಿತು ಮನವಿ ನೀಡಿದ್ದರೂ ಮುಖ್ಯಮಂತ್ರಿಗಳು ಸ್ಪಂದಿಸಿಲ್ಲ. ಕೇವಲ ಮೂರು ಜಿಲ್ಲೆಗಳಿಗೆ ಮಾತ್ರ ಮಾನ್ಯತೆ ನೀಡಿದ್ದಾರೆ. ಬಜೆಟ್‌ ಜೆಡಿಎಸ್‌ ಪ್ರಣಾಳಿಕೆಯಂತಿದೆ.
-ಬಿ.ಎಂ. ಸುಕುಮಾರ ಶೆಟ್ಟಿ, ಬೈಂದೂರು ಶಾಸಕರು

ಕಾಪು ಕ್ಷೇತ್ರದ ಹೆಜಮಾಡಿ ಬಂದರಿನ ಬಗ್ಗೆ ಭಾರೀ ನಿರೀಕ್ಷೆಯಿದ್ದರೂ ನಿರ್ಲಕ್ಷಿಸಲಾಗಿದೆ. ಕಾಪು ತಾಲೂಕು ಸಹಿತ ಕಳೆದ ಬಾರಿ ಪ್ರಾರಂಭಗೊಂಡಿದ್ದ ತಾಲೂಕುಗಳಿಗೆ ಹೆಚ್ಚಿನ ಅನುದಾನ ದೊರಕುವ ನಿರೀಕ್ಷೆಯಿತ್ತು. ಒಟ್ಟಾರೆಯಾಗಿ ಬಜೆಟ್‌ ಪೂರ್ಣ ನಿರಾಸೆ ಮೂಡಿಸಿದೆ. ಕರಾವಳಿ ಜಿಲ್ಲೆಗಳ ಬಗ್ಗೆ ನಿರ್ಲಕ್ಷ ವನ್ನು ಖಂಡಿಸುತ್ತೇವೆ. ಸರಕಾರದ ಪಕ್ಷಪಾತ ಧೋರಣೆ ವಿರುದ್ಧ ಜನಾಂದೋಲನ ರೂಪಿಸುವುದರ ಅಗತ್ಯವಿದೆ.
 - ಲಾಲಾಜಿ ಮೆಂಡನ್‌, ಕಾಪು ಶಾಸಕರು

ಮೀನುಗಾರರ ಸಮಸ್ಯೆ, ಬಂದರು ಸಮಸ್ಯೆ, ವಾರಾಹಿ ನೀರಾವರಿ ವಿಚಾರ ಕುರಿತು ಪ್ರಸ್ತಾವ ಮಾಡಿಲ್ಲ ಹಾಗೂ ಯಾವುದೇ ಪ್ರಮುಖ ಯೋಜನೆ ಗಳನ್ನು ಘೋಷಿಸಿಲ್ಲ. ಜೆಡಿಎಸ್‌ ಪ್ರಣಾಳಿಕೆ ರೈತರ ಎಲ್ಲ ಸಾಲ ಮನ್ನಾ ಮಾಡುವುದಾಗಿ ಘೋಷಿಸಿತ್ತು. ಈಗ ಕೇವಲ ಬೆಳೆ ಸಾಲವನ್ನು ಮಾತ್ರ ಮನ್ನಾ ಮಾಡಲಾಗಿದೆ. ಸದನದಲ್ಲಿ ಕರಾವಳಿಗೆ ನ್ಯಾಯ ಒದಗಿಸಬೇಕು ಎಂದು ಎರಡು ಸದನಗಳಲ್ಲಿ ಹೋರಾಟ ನಡೆಸಲಿದ್ದೇವೆ. 
– ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್‌ ವಿಪಕ್ಷದ ನಾಯಕ  

ಬಡವರ ಪರ ಕಾಳಜಿ ಇರುವ ಬಜೆಟ್‌ ಆಗಿದೆ. ಕ್ಲಿಷ್ಟಕರ ಪರಿಸ್ಥಿತಿ ಇದ್ದರೂ ಕೊಟ್ಟ ಮಾತಿನಂತೆ ರೈತರ ಸಾಲ ಮನ್ನಾವನ್ನು ಮಾಡಿದ್ದಾರೆ. ಮೀನುಗಾರರಿಗೆ ಸಿದ್ದರಾಮಯ್ಯ ಘೋಷಿಸಿದ ಹಿಂದಿನ ಯೋಜನೆಗಳು ಮುಂದುವರಿಯಲಿವೆ.
– ಪ್ರಮೋದ್‌ ಮಧ್ವರಾಜ್‌, ಮಾಜಿ ಸಚಿವರು,

ಕಾಂಗ್ರೆಸ್‌ ಸರಕಾರದ ತಾರತಮ್ಯ ನೀತಿ ಮೈತ್ರಿ ಸರಕಾರದ ಬಜೆಟ್‌ನಲ್ಲಿಯೂ ಮುಂದುವರಿದಿದೆ. ಕೇವಲ ಎರಡು ಜಿಲ್ಲೆಗೆ ಮಾತ್ರ ಸೀಮಿತವಾಗಿ ಬಜೆಟ್‌ ಮಂಡಿಸುವ ಮೂಲಕ ರಾಜ್ಯದ ಜನತೆಗೆ ಕುಮಾರಸ್ವಾಮಿಯವರು ದ್ರೋಹವೆಸಗಿದ್ದಾರೆ. ಕರಾವಳಿ ಜಿಲ್ಲೆಗೆ ಕಳೆದ 4 ಬಜೆಟ್‌ನಲ್ಲಿ ಪ್ರಕಟಿಸಿದ ಯೋಜನೆಗಳು ಕೇವಲ ಘೋಷಣೆಗೆ ಸೀಮಿತವಾಗಿವೆ. ಈ ಬಜೆಟ್‌ನಲ್ಲಿಯೂ ಕರಾವಳಿಯನ್ನು ನಿರ್ಲಕ್ಷಿಸಲಾಗಿದೆ.  ಮೀನುಗಾರರು ಮತ್ತು ಅಡಿಕೆ ಬೆಳೆಗಾರರನ್ನು ರಾಜ್ಯ ಸರಕಾರ ಸಂಪೂರ್ಣ ಮರೆತಿದೆ. ಇದನ್ನು ಬಜೆಟ್‌ ಎಂದು ಪರಿಗಣಿಸಲು ಸಾಧ್ಯವಿಲ್ಲ 
-ನಳಿನ್‌ಕುಮಾರ್‌ ಕಟೀಲು, ಸಂಸದರು, ದ.ಕ.

ಬಜೆಟ್‌ನಲ್ಲಿ 34,000 ಕೋಟಿ ರೂ. ರೈತರ ಸಾಲ ಮನ್ನಾ ಮಾಡುವ ಘೋಷಣೆ ಮಾಡಿರುವ ರೈತಪರ ಬಜೆಟ್‌ ಮಂಡಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರ ಅಭಿವೃದ್ಧಿಗಾಗಿ ಹೊಸ ಬಜೆಟ್‌ ರಚಿಸುವ ಮುಖಾಂತರ ಬ್ರಾಹ್ಮಣ ಸಮುದಾಯಕ್ಕೂ ನ್ಯಾಯ ಒದಗಿಸಿದ್ದಾರೆ. 
-ಐವನ್‌ ಡಿ’ಸೋಜಾ, ವಿಧಾನ ಪರಿಷತ್‌ ಸದಸ್ಯ

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸಾಲಮನ್ನಾ ಪ್ರಸ್ತಾಪಿಸಿದ್ದು, ಇದರಿಂದ ರೈತಾಪಿ ವರ್ಗಕ್ಕೆ ಸಂತಸವಾಗಿದೆ. ಈ ಹಿಂದೆ ಕಾಂಗ್ರೆಸ್‌ ಸರಕಾರ ಮಂಡಿಸಿದ್ದ ಬಜೆಟ್‌ನ ಕಾರ್ಯಕ್ರಮಗಳನ್ನು ಮುಂದುವರಿಸಿದ್ದಾರೆ. ಒಟ್ಟಿನಲ್ಲಿ ಇದೊಂದು ಉತ್ತಮ ಮತ್ತು ಜನಪರವಾದ ಬಜೆಟ್‌.
-ಬಿ. ರಮಾನಾಥ ರೈ, ಮಾಜಿ ಸಚಿವ

ತಾಲೂಕುಗಳ  ಪ್ರಮುಖ ನಿರೀಕ್ಷೆಗಳು
ಸಮ್ಮಿಶ್ರ ಸರಕಾರದ ಬಜೆಟ್‌ನಲ್ಲಿ ಕರಾವಳಿಯ ಹಲವು ನಿರೀಕ್ಷೆ‌ಗಳು ಈಡೇರುವ ವಿಶ್ವಾಸ ಇತ್ತು ಆದರೆ ಅವೆಲ್ಲವೂ ಹುಸಿಯಾಗಿದೆ. ಪ್ರಮುಖ ತಾಲೂಕುಗಳ ನಿರೀಕ್ಷೆಗಳು ಏನಿದ್ದವು-ಇಲ್ಲಿದೆ ಒಂದು ನೋಟ.

ಬಂಟ್ವಾಳ
1    ಇಲ್ಲೊಂದು ಉದ್ಯಮ ಕೇಂದ್ರ ಸ್ಥಾಪನೆ ಅತ್ಯಂತ ಮಹತ್ವದ್ದು. 
2    ತೆಂಗು ಉದ್ಯಮದ ಘಟಕ ಅಥವಾ ಕೌಶಲ ಅಭಿವೃದ್ಧಿ ಕೇಂದ್ರ ಬೇಕು.
3    ವರ್ತುಲದ ಸಂಪರ್ಕ ಜಾಲ ಬೇಕಾಗಿದೆ. 

ಮಂಗಳೂರು
1   ಕುಡಿಯುವ ನೀರಿಗೆ ಸಮಗ್ರ ಯೋಜನೆ ಆಗಬೇಕಿದೆ.
2   ವಸತಿರಹಿತರಿಗೆ ಮನೆ ನಿರ್ಮಾಣಕ್ಕೆ ಯೋಜನೆ ಇಲ್ಲ.
3   ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ ಅನುದಾನ ಸಿಗಬೇಕು.

ಪುತ್ತೂರು
1    ಪುತ್ತೂರನ್ನು ಜಿಲ್ಲಾ ಕೇಂದ್ರವಾಗಿಸಬೇಕು.
2    ಪೊಲೀಸ್‌ ತರಬೇತಿ ಕೇಂದ್ರ, ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕು.
3    ಬೆಂದ್ರ್ತೀರ್ಥ, ಬೀರಮಲೆ ಗುಡ್ಡ, ಬಾಲವನ ಅಭಿವೃದ್ಧಿ ಆಗಬೇಕು.

ಮಂಗಳೂರು ನಗರ
1    ಸಂಚಾರ ದಟ್ಟನೆ ನಿವಾರಣೆಗೆ ಉಪಕ್ರಮಗಳು
2    ಐಟಿ ಉದ್ಯಮಗಳು, ಸಾಗರ ಪ್ರವಾ ಸೋದ್ಯಮ, ಕೈಗಾರಿಕೆಗಳಿಗೆ ಉತ್ತೇಜನ
3    ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಮೂಲಸೌಕರ್ಯ ಅಗತ್ಯ.

ಕಾರ್ಕಳ
1    ಒಳಚರಂಡಿ ಹಲವು ವರ್ಷಗಳ ಬೇಡಿಕೆ
2    ಕುಡಿಯುವ ನೀರಿನ ಯೋಜನೆಗಳು ಸಮರ್ಪಕವಾಗಬೇಕು.
3    ಕಾಡುಪ್ರಾಣಿಗಳ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು.

ಬೆಳ್ತಂಗಡಿ
1    ಸರಕಾರಿ ಪಾಲಿಟೆಕ್ನಿಕ್‌ ಸ್ಥಾಪನೆಯಾಗಬೇಕಿದೆ.
2    ಕೈಗಾರಿಕೆ ಸ್ಥಾಪನೆ ಮೂಲಕ ಉದ್ಯೋಗಾವಕಾಶ ಸೃಷ್ಟಿ 
3    ಶಾಶ್ವತವಾದ ಎಂಡೋ ಪುನವ‌ìಸತಿ ಕೇಂದ್ರ

ಉಡುಪಿ
1    ನಾಲ್ಕುತಾಲೂಕುಗಳು ಘೋಷಣೆ ಯಾದರೂ ಇವುಗಳಿಗೆ ಬೇಕಾದ ಆದ್ಯತೆಗಳು ಬಜೆಟ್‌ನಲ್ಲಿ ಕಂಡಿಲ್ಲ. 
2    ಮೀನುಗಾರರಿಗೆ ನೆರವು ಸಿಗಬೇಕಾಗಿದೆ.
3    ಸರಕಾರಿ ವೈದ್ಯಕೀಯ, ಎಂಜಿನಿ ಯರಿಂಗ್‌ ಕಾಲೇಜು ಬೇಕು.

ಸುಳ್ಯ
1    ಹಳದಿ ರೋಗದಿಂದ ಸಂತ್ರಸ್ತರಿಗೆ ಪರಿಹಾರಕ್ಕೆ ಸ್ಪಂದನೆ ಸಿಕ್ಕಿಲ್ಲ.
2    ಟಯರ್‌ ಉತ್ಪಾದನೆ ಪ್ಯಾಕ್ಟರಿ ಅನುಷ್ಠಾನಕ್ಕೆ ಮನ್ನಣೆ ಸಿಕ್ಕಿಲ್ಲ.
3    ರಸ್ತೆ, ಸೇತುವೆ ವಿಶೇಷ ಅನುದಾನ ಇಲ್ಲ. 

ಕುಂದಾಪುರ
1    ಆರ್‌ಟಿಒ ಕಚೇರಿ ಸ್ಥಾಪನೆ ಆಗಬೇಕಾಗಿದೆ.
2   ಸರಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ, 
3    ವಾರಾಹಿ ಯೋಜನೆ ಮುಂದುವರಿಸಲು ಅನುದಾನದ ಪ್ರಸ್ತಾವವಿಲ್ಲ.

ಮೂಡಬಿದಿರೆ
1    ಒಳಚರಂಡಿ ಯೋಜನೆಗೆ 85 ಕೋಟಿ ರೂ. ಅನುದಾನ ನಿರೀಕ್ಷೆ.
2    ಮಿನಿ ವಿಧಾನಸೌಧ ನಿರ್ಮಾಣ ಆಗಬೇಕಿದೆ.
3    ಕೆಎಸ್‌ಆರ್‌ಟಿಸಿ ಬಸ್‌ ಡಿಪೋ ನಿರ್ಮಾಣ ಬೇಡಿಕೆ.

ಬೈಂದೂರು
1    ಬಂದರುಗಳ ಅಭಿವೃದ್ಧಿಗೆ ಅನುದಾನ ಸಿಗಬೇಕಾಗಿದೆ.
2    ತಾಲೂಕು ಅನುಷ್ಠಾನಕ್ಕೆ ಸೂಕ್ತ ಅನುದಾನ ಬೇಕಿದೆ.
3    ನಕ್ಸಲ್‌ ಮತ್ತು ಮಲೆನಾಡು ಅಭಿವೃದ್ಧಿ ದೃಷ್ಟಿಯಲ್ಲಿ ವಿಶೇಷ ಪ್ಯಾಕೇಜ್‌. 

ಕಾಪು
1    ತಾಲೂಕು ಅನುಷ್ಠಾನಕ್ಕೆ  ಅನುದಾನ ನಿರೀಕ್ಷೆ
2    ಇಲಾಖೆಗಳಿಗೆ ಅಗತ್ಯ ಸಿಬಂದಿ ನೇಮಕ.
3    ಹೆಜಮಾಡಿ ಮೀನುಗಾರಿಕಾ ಬಂದರು. 

Advertisement

Udayavani is now on Telegram. Click here to join our channel and stay updated with the latest news.

Next