ಎನ್.ಆರ್.ಪುರ: ತಮ್ಮ ಮದುವೆ ವಿಚಾರವಾಗಿ ಹೇಳಿಕೆ ನೀಡಿರುವ ಸಂಸದೆ ಶೋಭಾ ಕರಂದ್ಲಾಜೆಗೆ ರಾಜಕಾರಣಿಯಾಗುವ ಅರ್ಹತೆಯೇ ಇಲ್ಲ ಎಂದು ಕೆ.ಪಿ.ಸಿ.ಸಿ ಕಾರ್ಯಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದೆಯಾಗಿ ಈ ಭಾಗದ ರೈತರ, ಅಡಿಕೆ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವುದನ್ನು ಬಿಟ್ಟು ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ಅಲ್ಲದೇ ಜಾತಿ, ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ ಸಮಾಜದಲ್ಲಿ ಶಾಂತಿಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಫಸಲ್ ಬಿಮಾ ಯೋಜನೆಯಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ. ಯೋಜನೆಯಡಿ ವಿಮಾ ಕಂಪನಿಗೆ ಹಣ ಮಾಡಿಕೊಡುವ ಹುನ್ನಾರ ಅಡಗಿದೆ. 2016ನೇ ಸಾಲಿನಲ್ಲಿ ದೇಶದಲ್ಲಿ 9 ಸಾವಿರ ಕೋಟಿ ವಿಮಾ ಹಣ ಸಂಗ್ರಹವಾಗಿದ್ದು, ಅದರಲ್ಲಿ ರೈತರಿಗೆ ವಿಮಾ ಮೊತ್ತ 2764 ಕೋಟಿ ನೀಡಲಾಗಿದೆ. ಕೇಂದ್ರ ಸರಕಾರ ರೈತರ ಹೆಸರಲ್ಲಿ ವಿಮಾ ಕಂಪನಿಗೆ 6236 ಕೋಟಿ ಲಾಭ ಮಾಡಿಕೊಟ್ಟಿದೆ ಎಂದರು.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ಎಸ್.ಎಂ. ಕೃಷ್ಣ, ತಪ್ಪು ನಿರ್ಧಾರದಿಂದ ಪಕ್ಷ ತೊರೆದಿದ್ದಾರೆ. ಎಚ್. ವಿಶ್ವನಾಥ್‌ರವರಿಗೆ ಪಕ್ಷ ಶಾಸಕ, ಸಚಿವ, ಸಂಸದ, ಸೇರಿದಂತೆ ವಿವಿಧ ಅವಕಾಶ ಕಲ್ಪಿಸಿದೆ. ಅಲ್ಲದೇ ಅವರ ಮಗನನ್ನು ಜಿ.ಪಂ ಸದಸ್ಯನನ್ನಾಗಿ ಮಾಡಿದೆ. ಆದರೂ ಪಕ್ಷ ತೊರೆದು ಜೆಡಿಎಸ್ ಸೇರಿದ್ದಾರೆ. ಜಯಪ್ರಕಾಶ್ ಹೆಗ್ಡೆ ಯವರು ಆತುರದಿಂದ ಪಕ್ಷ ತೊರೆದಿದ್ದಾರೆ. ಅವರ
ಸಿದ್ಧಾಂತಕ್ಕೂ ಬಿಜೆಪಿ ಸಿದ್ಧಾಂತಕ್ಕೂ ವ್ಯತ್ಯಾಸ ಇದೆ. ಕೆಲವೇ ದಿನದಲ್ಲಿ ಇವರೆಲ್ಲ ಬೇರೆ ಪಕ್ಷದ ನಿಲುವಿನಿಂದ ಭ್ರಮನಿರಸನಗೊಳ್ಳಲಿದ್ದಾರೆ. ಪಕ್ಷ ಚುನಾವಣೆಗೆ ಸಿದ್ಧವಾಗಿದ್ದು ಅವಧಿ ಮುಂಚೆ ಚುನಾವಣೆಯಿಲ್ಲ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು ಆದಷ್ಟು ಶೀಘ್ರ ಅಭ್ಯರ್ಥಿಗಳನ್ನು ಘೋಷಿಸಲಾಗುವುದು ಎಂದರು.
ಉಸ್ತುವಾರಿ ವಿಷ್ಣುನಾಥನ್ ಮಾತನಾಡಿ, ಸರ್ಕಾರದ ಸಾಧನೆಗಳನ್ನು ಮನೆ, ಮನೆಗೆ ತಿಳಿಸುವ ಕೆಲಸ ಮಾಡುತ್ತಿದ್ದು ಪಕ್ಷ ರಾಜ್ಯದಲ್ಲಿ ಪಕ್ಷ ಮತ್ತೂಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು.