Advertisement

ಯಾವುದೂ ಶಾಶ್ವತ ಅಲ್ಲ..! ; ಶಿಗ್ಗಾವಿಯಲ್ಲಿ ಭಾವುಕರಾದ ಸಿಎಂ ಬೊಮ್ಮಾಯಿ

06:18 PM Dec 19, 2021 | Team Udayavani |

ಹಾವೇರಿ: ಜೀವನದಲ್ಲಿ ಯಾವುದೂ ಶಾಶ್ವತ ಅಲ್ಲ. ಬದುಕೇ ಶಾಶ್ವತ ಅಲ್ಲ, ಈ ಸ್ಥಾನಮಾನಗಳೂ ಶಾಶ್ವತ ಅಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾವುಕರಾಗಿ ಮಾತನಾಡಿದ ಪ್ರಸಂಗ ಭಾನುವಾರ ನಡೆಯಿತು.

Advertisement

ಶಿಗ್ಗಾವಿ ಪಟ್ಟಣದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ”ಜೀವನದಲ್ಲಿ ಯಾವುದೂ ಶಾಶ್ವತ ಅಲ್ಲ. ಬದುಕೇ ಶಾಶ್ವತ ಅಲ್ಲ, ಈ ಸ್ಥಾನಮಾನಗಳೂ ಶಾಶ್ವತ ಅಲ್ಲ. ಈ ಅರಿವು ನಮಗೆ ಪ್ರತಿ ಕ್ಷಣ ಇರಬೇಕು. ನಿಮ್ಮ ಆಶೀರ್ವಾದದಿಂದ ನಾನು ಸಿಎಂ ಆಗಿದ್ದೇನೆ  ಈ ಕ್ಷೇತ್ರದ ಹೊರಗೆ ನಾನು ಗೃಹ ಮಂತ್ರಿ, ನೀರಾವರಿ ಸಚಿವ, ಸಿಎಂ ಆದರೆ ಶಿಗ್ಗಾವಿಗೆ ಬಂದಾಗ ಬರೀ ಬಸವರಾಜ ಬೊಮ್ಮಾಯಿ ಅಷ್ಟೇ. ಇಲ್ಲಿ ಬಸವರಾಜ ಬೊಮ್ಮಾಯಿ ಅನ್ನೋದಷ್ಟೆ ಶಾಶ್ವತ, ಉಳಿದೆಲ್ಲಾ ಅಧಿಕಾರ ಪದವಿ ಶಾಶ್ವತ ಅಲ್ಲ. ನಾನು ನಿಮ್ಮೂರಿಗೆ ಬಂದಾಗ ರೊಟ್ಟಿ ತಿನ್ನಿಸಿದ್ದೀರಿ, ನವಣಕ್ಕಿ ಅನ್ನ ಮಾಡಿ ತಿನಿಸಿದಿರಿ. ನಾನು ಅದನ್ನ ಮರೆಯೋಕೆ ಸಾಧ್ಯವಿಲ್ಲ” ಎಂದು ಸಿಎಂ  ಗದ್ಗದಿತರಾದರು.

”ನಾನು ಭಾವನಾತ್ಮಕವಾಗಿ ಮಾತಾಡಬಾರದು ಅಂತ ಬಹಳ ಪ್ರಯತ್ನ ಮಾಡುತ್ತೇನೆ. ಆದರೆ ನಿಮ್ಮನ್ನು ನೋಡಿದಾಗ ಆ ಭಾವನೆ ಬರುತ್ತವೆ. ದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ನಿಮ್ಮ ಆಶೀರ್ವಾದ ಶಕ್ತಿ ಇಲ್ಲಿವರೆಗೂ ತಂದು ನಿಲ್ಲಿಸಿದೆ. ಮುಂದೆ ಸವಾಲು ಎದುರಿಸೋ ಶಕ್ತಿ ಕೂಡಾ ನಿಮ್ಮ ಆಶೀರ್ವಾದ ದಿಂದ ಸಿಗಲಿದೆ” ಎಂದರು.

”ಇದು ಸಂತರ ನಾಡಾಗಿದ್ದು, ವೈಚಾರಿಕತೆ, ವಿಭಿನ್ನ ಚಿಂತನೆ ಮಾಡಿದ ಕನಕದಾಸರು, ಶಿಶುನಾಳ ಷರೀಫರು ನಡೆದಾಡಿದ ಅಪರೂಪದ ಮಣ್ಣಿನ ಗುಣ ಶಿಗ್ಗಾವಿ ಕ್ಷೇತ್ರದ್ದು. ಈ ವೈಚಾರಿಕತೆ ಹಿಡಿದುಕೊಂಡು ಎಲ್ಲರೂ ಒಂದುಗೂಡಿ ಕೆಲಸ ಮಾಡಿದರೆ ಗೆಲುವು,ಇಲ್ಲದಿದ್ದರೆ ಕಷ್ಟ”ಎಂದರು.

Advertisement

”ವೀರರಾಣಿ ಕಿತ್ತೂರ ಚೆನ್ನಮ್ಮ ರಾಜ್ಯ ಪಡೆಯೋಕೆ ಹೋರಾಟ ಮಾಡಲಿಲ್ಲ. ಅಲೆಕ್ಸಾಂಡರ್ ದೂರದ ದೇಶದಿಂದ ಸಿಂಧು ತಟದವರೆಗೆ ಆಕ್ರಮ ಮಾಡಿಕೊಂಡು ಬಂದ.ಆದರೆ ಕಿತ್ತೂರು ಚೆನ್ನಮ್ಮ ರಾಜ್ಯದ ಜನರ ರಕ್ಷಣೆಗೆ, ಸ್ವಾಭಿಮಾನಕ್ಕಾಗಿ ಹೋರಾಡಿದಳು. ಪ್ರತಿಯೊಬ್ಬ ಕಿತ್ತೂರು ನಾಗರಿಕ ಯೋಧರಾಗಿ ಪರಿವರ್ತನೆ ಮಾಡಿದಳು. ಇಂದು ಈ ರಾಜ್ಯ, ಸಮುದಾಯದ ಮುಂದೆ ಇರೋದು ಅಸ್ಮಿತೆ, ಸ್ವಾಭಿಮಾನಕ್ಕಾಗಿ ಯೋಧರಾಗಿ ಹೋರಾಟ ಮಾಡೋ ಅಗತ್ಯ ಇದೆ. ಇತಿಹಾಸ ನಾವು ಅರ್ಥ ಮಾಡಿಕೊಳ್ಳಬೇಕಿದೆ. ಒಂದು ಸಮುದಾಯ ಬಹಳ ಮುಂದೆ ಹೋಗಿ ಇನ್ನೊಂದು ಸಮುದಾಯ ಹಿಂದುಳಿದರೆ ಮುಂದೆ ಹೋದ ಸಮುದಾಯಕ್ಕೂ ಒಳ್ಳೆಯದಾಗಲ್ಲ” ಎಂದರು.

ಕಾರ್ಯಕ್ರಮದಲ್ಲಿ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಸಚಿವರಾದ ಮುರುಗೇಶ ನಿರಾಣಿ, ಶಂಕರಪಾಟೀಲ ಮುನೇನಕೊಪ್ಪ, ಶಾಸಕ ಬಸವನಗೌಡ ಪಾಟೀಲ ಯತ್ನಾಳ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next