ನವದೆಹಲಿ: ಒಂದು ವೇಳೆ ಕೋವಿಡ್ 19 ಮತ್ತು ಅಲೋಪತಿ ವಿರುದ್ಧ ನೀಡಿರುವ ಹೇಳಿಕೆಯನ್ನು ವಾಪಸ್ ಪಡೆದರೆ ಯೋಗ ಗುರು ಬಾಬಾರಾಮ್ ದೇವ್ ವಿರುದ್ ಪೊಲೀಸರಿಗೆ ನೀಡಿರುವ ದೂರು ಮತ್ತು ಒಂದು ಸಾವಿರ ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆಯ ನೋಟಿಸ್ ಅನ್ನು ಹಿಂಪಡೆಯುವುದಾಗಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ತಿಳಿಸಿದೆ.
ಇದನ್ನೂ ಓದಿ:ವಾರಣಾಸಿ: ನವಜಾತ ಶಿಶುವಿಗೆ ಕೋವಿಡ್ 19 ಪಾಸಿಟಿವ್, ತಾಯಿಗೆ ಕೋವಿಡ್ ನೆಗೆಟಿವ್…
ಕೋವಿಡ್ ಸೋಂಕು ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಆಧುನಿಕ ವೈದ್ಯ ಪದ್ಧತಿಯನ್ನು ಗುರಿಯಾಗಿರಿಸಿಕೊಂಡು ಬಾಬಾ ರಾಮ್ ದೇವ್ ವಾಸ್ತವವಾಗಿ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ ಎಂದು ಐಎಂಎ ರಾಷ್ಟ್ರೀಯ ಮುಖ್ಯಸ್ಥ ಡಾ.ಜೆ.ಜಯಲಾಲ್ ತಿಳಿಸಿದ್ದಾರೆ.
ಯೋಗಗುರು ಬಾಬಾರಾಮ್ ದೇವ್ ವಿರುದ್ಧ ಹಠಸಾಧಿಸುತ್ತಿಲ್ಲ. ಆದರೆ ಅವರ ಹೇಳಿಕೆ ಕೋವಿಡ್ 19 ಲಸಿಕೆ ವಿರುದ್ಧವಾಗಿದೆ. ಅವರ ಹೇಳಿಕೆ ಜನರಲ್ಲಿ ಗೊಂದಲ ಮೂಡಿಸಬಹುದು ಎಂದು ಭಾವಿಸುತ್ತೇವೆ. ಅವರು ಅಪಾರ ಅನುಯಾಯಿಗಳನ್ನು ಹೊಂದಿರುವುದರಿಂದ ನಮ್ಮ ಕಳವಳಕ್ಕೆ ಕಾರಣವಾಗಿದೆ ಎಂದು ಡಾ.ಜಯಲಾಲ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಒಂದು ವೇಳೆ ಯೋಗಗುರು ಬಾಬಾ ರಾಮ್ ದೇವ್ ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆದರೆ, ಐಎಂಎ ಕೂಡಾ ಅವರ ವಿರುದ್ಧ ದಾಖಲಿಸಿರುವ ಪೊಲೀಸ್ ದೂರು ಮತ್ತು ಮಾನನಷ್ಟ ಮೊಕದ್ದಮೆಯ ನೋಟಿಸ್ ವಾಪಸ್ ಪಡೆಯುವುದಾಗಿ ಡಾ.ಜಯಲಾಲ್ ಮಾಹಿತಿ ನೀಡಿದ್ದಾರೆ.