“ನಿಮಗೆ ಹಳೆಯ 500ರ ನೋಟು ಹಾಗೂ ಅದರ ಭಾವನೆಗಳನ್ನು ನೋಡಬೇಕಾದರೆ ನೀವು “5ಜಿ’ಗೆ ಬನ್ನಿ …’
– ಹೀಗೆ ಕೇಳಿಕೊಂಡರು ನಿರ್ದೇಶಕ ಗುರುವೇಂದ್ರ ಶೆಟ್ಟಿ. ಅವರು ಹೇಳಿದ್ದು “5ಜಿ’ ಚಿತ್ರದ ಬಗ್ಗೆ. ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವಾರ “5ಜಿ’ ತೆರೆಗೆ ಬರಬಹುದು. ಅಷ್ಟಕ್ಕೂ 500ರ ನೋಟಿಗೂ, ಚಿತ್ರಕ್ಕೂ ಏನು ಸಂಬಂಧ ಎಂದು ನೀವು ಕೇಳಬಹುದು. ಅದೇ ಸಿನಿಮಾದ ಇಂಟ್ರೆಸ್ಟಿಂಗ್ ಪಾಯಿಂಟ್.
ಸಿನಿಮಾದಲ್ಲಿ 500 ರೂಪಾಯಿಯ ನೋಟು ಪ್ರಮುಖ ಪಾತ್ರ ವಹಿಸುತ್ತದೆ. ಇನ್ನೂ ಮುಂದುವರಿದು ಹೇಳಬೇಕಾದರೆ ಅದು ಕೂಡಾ 500 ರೂಪಾಯಿಯ ನೋಟು ಕೂಡಾ ಚಿತ್ರದಲ್ಲೊಂದು ಪಾತ್ರವಾಗಿದೆ. ಆರಂಭದಿಂದ ಕೊನೆವರೆಗೂ ಸಿನಿಮಾದಲ್ಲಿ ಈ ನೋಟು ಬರುತ್ತದೆ ಎನ್ನುವುದು ನಿರ್ದೇಶಕ ಗುರುವೇಂದ್ರ ಶೆಟ್ಟಿ ಮಾತು.
ಚಿತ್ರದ ಬಗ್ಗೆ ಮಾತನಾಡುವ ಗುರುವೇಂದ್ರ ಶೆಟ್ಟಿ, “ಚಿತ್ರದಲ್ಲಿ ಗಾಂಧೀಜಿಯಿಂದ ಇಲ್ಲಿವರೆಗಿನ ಐದು ಜನರೇಶನ್‌ಗಳ ಬಗ್ಗೆ ಹೇಳಿದ್ದೇನೆ. ಯಾವುದೋ ಒಂದು ಕ್ಷೇತ್ರದ ಕುರಿತು ಹೇಳಿಲ್ಲ. ಇಲ್ಲಿ ಎಲ್ಲಾ ಕ್ಷೇತ್ರಗಳ ಕುರಿತು ಹೇಳಿದ್ದೇನೆ. ಬದಲಾದ ಸಮಾಜ, ಮನಸ್ಥಿತಿಗಳ ಬಗ್ಗೆಯೂ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದೇನೆ. ಚಿತ್ರದಲ್ಲಿ ಯಾವೊಂದು ಪಾತ್ರವೂ ಆರಂಭದಿಂದ ಅಂತ್ಯದವರೆಗೆ ಟ್ರಾವೆಲ್ ಮಾಡುವುದಿಲ್ಲ. ಪಾತ್ರಗಳು ಬದಲಾಗುತ್ತಿರುತ್ತವೆ. ಸಿನಿಮಾದುದ್ದಕ್ಕೂ ಸಾಗಿ ಬರುವ ಪಾತ್ರವೆಂದರೆ ಅದು 500ರ ನೋಟು. ಚಿತ್ರದಲ್ಲಿ ಬರುವ ಆ ಒಂದು ನೋಟು ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ನೋಟಿನಲ್ಲಿ ಗಾಂಧಿ ಫೋಟೋ ಎದುರು ತಿರುಗಿರುತ್ತದೆ.
ಆ ನೋಟಿನ ಹಿಂದಿನ ರಹಸ್ಯವೇನು, ಫೋಟೋ ಯಾಕಾಗಿ ತಿರುಗಿದೆ ಎಂಬ ಅಂಶಗಳ ಮೂಲಕ ಸಿನಿಮಾ ಸಾಗುತ್ತದೆ’ ಎನ್ನುವುದು ಗುರುವೇಂದ್ರ ಶೆಟ್ಟಿ ಮಾತು. ಕಮರ್ಷಿಯಲ್ ಸಿನಿಮಾಗಳ ಸಿದ್ಧಸೂತ್ರಗಳನ್ನು ಬಿಟ್ಟು ಮಾಡಿದ ಸಿನಿಮಾ ಇದಾಗಿದ್ದು, ಜನ ಸ್ವೀಕರಿಸುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ.
ಚಿತ್ರದಲ್ಲಿ ಪ್ರವೀಣ್ ನಾಯಕರಾಗಿ ನಟಿಸಿದ್ದಾರೆ. ಇಲ್ಲಿ ಅವರದು ಬಿಝಿ ಇರುವ ನಿರುದ್ಯೋಗಿ ಪಾತ್ರ. ಪ್ರೇಕ್ಷಕರನ್ನು ತುಂಬಾ ನಗಿಸುತ್ತಾರಂತೆ. ನಿರ್ದೇಶಕರು ಹೊಸ ಕಥೆಯನ್ನು ಜನರಿಗೆ ಅರ್ಥವಾಗುವ ತರಹ ಹೇಳಿದ್ದಾರೆಂಬುದು ಪ್ರವೀಣ್ ಮಾತು. ನಿಧಿ ಸುಬ್ಬಯ್ಯ ಈ ಚಿತ್ರದ ನಾಯಕಿ. ಅವರಿಲ್ಲಿ ಪತ್ರಕರ್ತೆಯಾಗಿ ನಟಿಸಿದ್ದಾರೆ. ಸತ್ಯವನ್ನು ತುಂಬಾ ಇಷ್ಟಪಡುವ, ಸತ್ಯವನ್ನೇ ಜನರಿಗೆ ತೋರಿಸಬೇಕೆಂದು ಬಯಸುವ ಪತ್ರಕರ್ತೆಯಂತೆ. ಚಿತ್ರವನ್ನು ಜಗದೀಶ್ ನಿರ್ಮಿಸಿದ್ದಾರೆ.