ಮೈಸೂರು: ಬೆಳಕಿನ ಹಬ್ಬವಾದ ದೀಪಾವಳಿ ಸಂಭ್ರಮ ನಾಡಿನಾದ್ಯಂತ ಮನೆ ಮಾಡಿದ್ದು, ದೀಪಾವಳಿ ಅಮಾವಾಸ್ಯೆ ಅಂಗವಾಗಿ ಸ್ತ್ರೀ ದೇವತೆಗಳಿಗೆ ಧನಲಕ್ಷ್ಮೀ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದ್ದು, ಮೈಸೂರಿನಲ್ಲೂ ಬಾಲಾ ತ್ರಿಪುರಸುಂದರಿ ದೇವಿಗೆ ನೋಟುಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಸೋಮವಾರ ಅಮಾವಾಸ್ಯೆ ಹಿನ್ನೆಲೆಯಲ್ಲಿ ನಗರದ ದೇವರಾಜ ಮೊಹಲ್ಲಾದಲ್ಲಿರುವ ಅಮೃತೇಶ್ವರ ದೇವಾಲಯದ ಬಾಲಾ ತ್ರಿಪುರಸುಂದರಿ ದೇವಿಯ ಮೂರ್ತಿ ಹಾಗೂ ಗರ್ಭಗುಡಿಯ ಆವರಣವನ್ನು ವಿವಿಧ ನೋಟುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ದೇವಸ್ಥಾನಕ್ಕೆ ಭಕ್ತರು ಕಾಣಿಕೆ ರೂಪದಲ್ಲಿ ನೀಡಿದ್ದ ಸುಮಾರು 10 ಲಕ್ಷ ಮೌಲ್ಯದ ನೋಟುಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು. ಹತ್ತು, ಇಪ್ಪತ್ತು, ಐವತ್ತು, ನೂರು, ಇನ್ನೂರು, ಐನೂರು, ಎರಡು ಸಾವಿರ ಮುಖಬೆಲೆಯ ನೋಟುಗಳು, ನಾಣ್ಯಗಳಿಂದ ಅಮ್ಮನವರು ಮತ್ತು ಅಲ್ಲಿನ ಒಳಾಂಗಣ ಅಲಂಕೃತಗೊಂಡಿದ್ದು, ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ವಿಶೇಷ ಅಲಂಕಾರದಲ್ಲಿ ಅಮ್ಮನನ್ನು ಕಂಡು ಪುನೀತರಾದರು.
ಧನಲಕ್ಷ್ಮೀ ಪೂಜೆ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಬೆಳಗ್ಗೆ ಮಹಾಭಿಷೇಕ, ಅಲಂಕಾರ, ಪಂಚಾಮೃತ ಅಭಿಷೇಕ, ನೈವೇದ್ಯ, ಮಹಾರುದ್ರಾಭಿಷೇಕ, ಸಹಸ್ರನಾಮ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಸೇರಿದಂತೆ ವಿವಿಧ ಪೂಜೆಗಳು ನಡೆದವು. ಅಮಾವಾಸ್ಯೆ ಹಿನ್ನೆಲೆಯಲ್ಲಿ ನವಗ್ರಹ ಪೂಜೆ, ಧನಲಕ್ಷ್ಮೀ ಹೋಮ ಹವನಗಳು ನಡೆದವು. ಜತೆಗೆ ದೇವಸ್ಥಾನಕ್ಕೆ ಬಂದ ಈ ಭಕ್ತರಿಗೆ ಪ್ರಸಾದ ನೀಡಲಾಯಿತು.
ಭಕ್ತರು ನೀಡಿದ ಹಣವನ್ನು ಲೆಕ್ಕ ಬರೆದುಕೊಂಡು ದೇವರಿಗೆ ಅಲಂಕಾರ ಮಾಡಲಾಗಿದೆ. ಪ್ರತಿದಿನ ದೇವಸ್ಥಾನಕ್ಕೆ ಬರುವ ನಗರದ ವರ್ತಕರು ಹಾಗೂ ಭಕ್ತಾದಿಗಳು ತಮ್ಮ ಕೈಲಾದಷ್ಟು ಹಣ ಕೊಡುತ್ತಾರೆ. ಬಳಿಕ ಈ ನೋಟಿನ ಹಾರ ತಯಾರಿಸಿ ದೇವಿಗೆ ಅಲಂಕಾರ ಮಾಡಲಾಗಿದೆ.
ಒಂದು ವಾರ ಈ ಅಲಂಕಾರವಿರಲಿದ್ದು, ಬಳಿಕ ಹಣ ನೀಡಿದ್ದ ಭಕ್ತಾದಿಗಳಿಗೆ ಆ ನೋಟುಗಳನ್ನು ವಾಪಸ್ ನೀಡಲಾಗುತ್ತದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕರು ತಿಳಿಸಿದರು. ಇದಲ್ಲದೇ ಶ್ರೀ ಸತ್ಯನಾರಾಯಣಸ್ವಾಮಿ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜೆ ನೆರವೇರಿಸಲಾಯಿತು.