ತಿರುವನಂತಪುರಂ:ಮಲಯಾಳಂನ ರನ್ ಬೇಬಿ ರನ್, ಅಯ್ಯಪ್ಪನುಂ ಕೋಶಿಯೂಂ ಸೇರಿದಂತೆ ಹಲವು ಹಿಟ್ ಚಿತ್ರಗಳ ಜನಪ್ರಿಯ ನಿರ್ದೇಶಕ ಕೆ.ಆರ್.ಸಚ್ಚಿದಾನಂದನ್(48ವರ್ಷ) ಗುರುವಾರ ರಾತ್ರಿ ತ್ರಿಶ್ಶೂರ್ ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಚಿತ್ರರಂಗದ ಮೂಲಗಳು ತಿಳಿಸಿವೆ.
ಮಲಯಾಳಂ ಚಿತ್ರರಂಗದಲ್ಲಿ ಸಚ್ಚಿ ಎಂದೇ ಜನಪ್ರಿಯತೆ ಪಡೆದುಕೊಂಡಿದ್ದ ಕೆಆರ್ ಮಂಗಳವಾರ ಹೃದಯ ಸ್ತಂಭನಕ್ಕೊಳಗಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಸರ್ಜರಿ ನಡೆಸಿದ ನಂತರ ಚೇತರಿಸಿಕೊಂಡಿದ್ದರು ಎಂದು ವರದಿ ತಿಳಿಸಿದೆ.
ತ್ರಿಶ್ಶೂರ್ ನ ಪ್ರಸಿದ್ಧ ಆಸ್ಪತ್ರೆಯ ಐಸಿಯುನಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ನಿಧನರಾಗಿದ್ದು, ಮಲಯಾಳಂ ಚಿತ್ರರಂಗ ತೀವ್ರ ಆಘಾತ ವ್ಯಕ್ತಪಡಿಸಿದೆ ಎಂದು ವರದಿ ವಿವರಿಸಿದೆ.
ಸಚ್ಚಿ ಅವರು ಕೇರಳ ಹೈಕೋರ್ಟ್ ನಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ ಅವರು ಸಿನಿಮಾರಂಗದತ್ತ ಮುಖಮಾಡಿದ್ದರು. ಆರಂಭಿಕವಾಗಿ ಸಚ್ಚಿ ಹಾಗೂ ಸೇತು ಜೋಡಿ ಜಂಟಿಯಾಗಿ ಚಿತ್ರಕಥೆ ಬರೆಯುವ ಮೂಲಕ ಜನಪ್ರಿಯತೆ ಗಳಿಸಿದ್ದರು. ಈ ಜೋಡಿಯ ಚಾಕೊಲೇಟ್, ಮೇಕಪ್ ಮ್ಯಾನ್, ಸೀನಿಯರ್ಸ್,
ರಾಬಿನ್ ಹುಡ್ ಸಿನಿಮಾ ಬಾಕ್ಸಾಫೀಸ್ ನಲ್ಲಿ ಹಿಟ್ ಆಗಿದ್ದವು.
ಬಳಿಕ ಸಚ್ಚಿ ಅವರು ಸ್ವತಂತ್ರವಾಗಿ ಚಿತ್ರಕಥೆ ಬರೆಯಲು ಆರಂಭಿಸಿದ್ದು, ಮೋಹನ್ ಲಾಲ್ ನಟನೆಯ ರನ್ ಬೇಬಿ ರನ್, ಡ್ರೈವಿಂಗ್ ಲೈಸೆನ್ಸ್, ಶೆರ್ಲಾಕ್ಸ್ ಹೋಮ್ಸ್ ಸಿನಿಮಾಕ್ಕೆ ಚಿತ್ರ ಕಥೆ ಬರೆದಿದ್ದರು. 2015ರಲ್ಲಿ ತೆರೆಕಂಡಿದ್ದ ಅನಾರ್ಕಲಿ ಸಿನಿಮಾವನ್ನು ಕೆಆರ್ ನಿರ್ದೇಶಿಸಿದ್ದ ಪ್ರಥಮ ಸಿನಿಮಾವಾಗಿತ್ತು. ಬಳಿಕ ಈ ವರ್ಷ ತೆರೆಕಂಡಿದ್ದ ಅಯ್ಯಪ್ಪನುಂ ಕೋಶಿಯೂಂ ಸಚ್ಚಿಗೆ ಮತ್ತಷ್ಟು ಜನಪ್ರಿಯತೆ ತಂದುಕೊಟ್ಟಿತ್ತು.