ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಸಂಸ್ಥೆಗಳು ಪೂರ್ಣ ಪ್ರಮಾಣ ದಲ್ಲಿ ತ್ರಿಭಾಷಾ ನೀತಿ ಅನುಸರಿಸುವುದು ಕಡ್ಡಾಯವಾಗಬೇಕು. ಜತೆಗೆ ಸ್ಥಳೀಯ ಭಾಷೆಗೆ ಮೊದಲ ಆದ್ಯತೆ ನೀಡುವುದು ಸಂಸ್ಥೆಗಳ ಜವಾಬ್ದಾರಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳವಾರ ಕೇಂದ್ರ ಸ್ವಾಮ್ಯದ ಸಿಂಡಿಕೇಟ್ ಬ್ಯಾಂಕ್, ಭಾರತೀಯ ಜೀವ ವಿಮಾ ನಿಗಮ ಮತ್ತು ನಬಾರ್ಡ್ ಮುಖ್ಯ ಕಚೇರಿಗೆ ಭೇಟಿ ನೀಡಿ ದೈನಂದಿನ ವ್ಯವಹಾರಗಳಲ್ಲಿ ಕನ್ನಡ ಅನುಷ್ಠಾನ, ಸ್ಥಳೀಯರಿಗೆ ಉದ್ಯೋಗ ಒದಗಿಸುವ ಡಾ.ಸರೋಜಿನಿ ಮಹಿಷಿ ವರದಿ ಅನುಷ್ಠಾನ ಹಾಗೂ ನಾಮಫಲಕಗಳಲ್ಲಿ ತ್ರಿಭಾಷಾ ಸೂತ್ರ ಅಳ ವಡಿಸುವ ಬಗ್ಗೆ ಪರಿಶೀಲನಾ ಸಭೆ ನಡೆಸಿ, ಸಂಸ್ಥೆಗಳು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು.
ಈ ಮೂರು ಸಂಸ್ಥೆಗಳ ಮುಖ್ಯಸ್ಥರು ಕೇಂದ್ರದೊಂದಿಗಿನ ವ್ಯವಹಾರ ಮತ್ತು ಸ್ಥಳೀಯ ಜನರ ನಡುವಿನ ಸಂಪರ್ಕಕ್ಕೂ ಹಿಂದಿ ಮತ್ತು ಇಂಗ್ಲಿಷ್ ಭಾಷೆ ಬಳಸುತ್ತಿರು ವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ಇದು ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಯ ಸ್ಪಷ್ಟ ಉಲ್ಲಂಘನೆ. ಪ್ರತಿ ಸಂಸ್ಥೆಗಳಲ್ಲಿ ಕನ್ನಡ ಅನುಷ್ಠಾನ ಘಟಕ ತೆರೆಯುವುದು ಕಡ್ಡಾಯ. ಬೇರೆ ಭಾಷೆಯ ಅಧಿಕಾರಿಗಳು ಕನಿಷ್ಠ ಪಕ್ಷ ಕನ್ನಡದಲ್ಲಿ ಮಾತನಾಡುವುದನ್ನು ಕಲಿಯಬೇಕು ಎಂದು ಸೂಚನೆ ನೀಡಿದರು.
ಈಗಾಗಲೇ ಸರೋಜಿನಿ ಮಹಿಷಿ ವರದಿಯನ್ವಯ ಸಿ ಮತ್ತು ಡಿ ವೃಂದದ ನೇಮಕಾತಿಯಲ್ಲಿ ಶೇ.80 ಹಾಗೂ 100ರಷ್ಟು ನೇಮ ಕಾತಿಯನ್ನು ಸ್ಥಳೀಯರಿಗೆ ನೀಡಲಾಗಿದೆ. ಎ ಮತ್ತು ಬಿ ವೃಂದದಲ್ಲಿ ಶೇ.40 ಹಾಗೂ 20 ಆದ್ಯತೆ ನೀಡಲಾಗಿದೆ. ನಾಮಫಲಕದಲ್ಲಿ ತ್ರಿಭಾಷಾ ಸೂತ್ರ ಅನುಸರಿಸಲಾಗಿದೆ. ಅರ್ಜಿ ನಮೂನೆಗಳು ಸೇರಿದಂತೆ ಹಲವು ನಮೂನೆಗಳು ಕನ್ನಡದಲ್ಲಿದ್ದು, ಮುಂದಿನ ವಾರ್ಷಿಕ ವರದಿ, ಹಾಜರಾತಿ ಪುಸ್ತಕ ಸೇರಿದಂತೆ ಒಳ ವ್ಯವಹಾರದ ನಮೂನೆಗಳನ್ನು ಸಹ ಕನ್ನಡದಲ್ಲಿ ಮುದ್ರಿಸಲಾಗುವುದು ಎಂದು ಸಿಂಡಿಕೇಟ್ ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿದರು.
ಭಾರತೀಯ ಜೀವ ವಿಮಾ ನಿಗಮ ದಲ್ಲಿ ಶೇ.95ಕ್ಕೂ ಹೆಚ್ಚು ಕನ್ನಡದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯನಿರ್ವ ಹಿಸುತ್ತಿದ್ದಾರೆ. ಕಳೆದ 25 ವರ್ಷಗಳಿಂದ ಸಿ ಮತ್ತು ಡಿ ವೃಂದದ ನೇಮಕಾತಿ ನಡೆದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಸಂಸ್ಥೆ ಕನ್ನಡ ಮತ್ತ ಕನ್ನಡದವರಿಗೆ ಆಧ್ಯತೆ ನೀಡಿರುವುದಕ್ಕೆ ಪ್ರಾಧಿಕಾರದ ಅಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದರು.
ನಬಾರ್ಡ್ ಸಂಸ್ಥೆ ಸ್ಥಳೀಯರೊಂದಿಗೆ ವ್ಯವಹರಿಸಲು ಸ್ಥಳೀಯ ಭಾಷೆಗೆ ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ಸಂಸ್ಥೆ ಜನಾನು ರಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂಬುದನ್ನು ಅಧಿಕಾರಿಗಳಿಗೆ ಪ್ರಾಧಿಕಾರದ ಕಾರ್ಯ ದರ್ಶಿ ಡಾ.ಕೆ.ಮುರಳೀಧರ್ ಮನವರಿಕೆ ಮಾಡಿಕೊಟ್ಟರು. ಹಿರಿಯ ಸಾಹಿತಿ ಡಾ. ಚಂದ್ರಶೇಖರ್ ಪಾಟೀಲ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.