ಬೆಂಗಳೂರು: ಐನೂರು ರೂ. ನೋಟುಗಳನ್ನು ನೀಡಿದರೆ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಹೆಚ್ಚುವರಿಯಾಗಿ ನೀಡುವುದಾಗಿ ನಂಬಿಸಿ ಸಿವಿಲ್ ಕಂಟ್ರ್ಯಾಕ್ಟರ್‌ವೊಬ್ಬರಿಗೆ 25 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಈ ಸಂಬಂಧ ಮಹಾಲಕ್ಷ್ಮೀ ಲೇಔಟ್ ನಿವಾಸಿ ಸಿವಿಲ್ ಕಂಟ್ರ್ಯಾಕ್ಟರ್ ಸಿ.ಕೆ.ಸುರೇಶ್ ಎಂಬವರು ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಶಿವು, ಶಿವಕುಮಾರಸ್ವಾಮಿ, ಶ್ರೀನಿವಾಸ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪ್ರಕರಣವನ್ನು ಹೆಚ್ಚುವರಿ ತನಿಖೆಗಾಗಿ ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ದೂರುದಾರ ಸುರೇಶ್‌ಗೆ ಎರಡು ತಿಂಗಳಿಂದ ಆರೋಪಿ ಶಿವು ನಿರಂತರವಾಗಿ ಕರೆ ಮಾಡಿ, ಸದ್ಯದಲ್ಲೇ ಕೇಂದ್ರ ಸರ್ಕಾರ ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಲಿದೆ. ತಮ್ಮ ಬಳಿ ಕೋಟ್ಯಂತರ ರೂ. 2 ಸಾವಿರ ರೂ. ಮುಖಬೆಲೆಯ ನೋಟುಗಳಿದ್ದು, ಅವುಗಳನ್ನು ಐನೂರು ರೂ. ಮುಖಬೆಲೆಯ ನೋಟುಗಳನ್ನಾಗಿ ಬದಲಾಯಿಸುತ್ತಿದ್ದೇವೆ. ನೀವು ನಮಗೆ ಐನೂರು ಮುಖಬೆಲೆಯ 25 ಲಕ್ಷ ರೂ. ನೀಡಿದರೆ ನಾವು ನಿಮಗೆ 2000 ಮುಖಬೆಲೆಯ 37.5 ಲಕ್ಷ ರೂ. ನೀಡುತ್ತೇವೆ ಎಂದು ನಂಬಿಸಿದ್ದರು. ಆರೋಪಿಗಳ ಮಾತು ನಂಬಿದ ಸುರೇಶ್, ಮೇನಲ್ಲಿ ತಮ್ಮ ಸ್ನೇಹಿತನೊಂದಿಗೆ ಮಂತ್ರಾಲಯಕ್ಕೆ ಹೊರಡಲು ಸಿದ್ಧರಾಗಿದ್ದರು. ಆದರೆ, ನಾವು ತಿರುಪತಿಯಲ್ಲಿ ಇದ್ದೇವೆ, ಇಲ್ಲಿಯೇ ಬನ್ನಿ’ ಎಂದು ಕರೆಸಿಕೊಂಡಿದ್ದಾರೆ.
ತಿರುಪತಿಗೆ ತೆರಳಿದ ಬಳಿಕ ಅಲ್ಲಿಂದ ನೆಲ್ಲೂರಿಗೆ ಕರೆಸಿಕೊಂಡು, ಶ್ರೀನಿವಾಸ್ ಎಂಬಾತನನ್ನು ಪರಿಚಿಯಸಿದ್ದಾರೆ. ಆಗ ಶ್ರೀನಿವಾಸ್, 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ತೋರಿಸಿದ್ದಾನೆ. ಬಳಿಕ ಎಲ್ಲವೂ ಒರಿಜಿನಲ್ ನೋಟು, ಯಾವ ಮೋಸವೂ ಇಲ್ಲ. ನೀವು ತಂದಿ ರುವ ಐನೂರು ನೋಟುಗಳನ್ನು ಕೊಡಿ ಎಂದು ಪಡೆದುಕೊಂಡಿದ್ದಾನೆ. ನಂತರ ನೀವು ಹೊರಗಡೆ ಕಾಯುತ್ತಿರಿ, ನಾವು ಬಂಡಲ್ ಮಾಡಿಕೊಂಡು ಬರುತ್ತೇವೆ’ ಎಂದು ಹೇಳಿ, ನಂತರ ಹೊರಗಡೆ ಬಂದಿದ್ದ ಮತ್ತೂಬ್ಬ ವ್ಯಕ್ತಿ ‘ನೀವು ಇಲ್ಲೇ ಇದ್ದರೆ ಯಾರಿಗಾದರೂ ಅನುಮಾನ ಬಂದು ಪೊಲೀಸರಿಗೆ ತಿಳಿಸುತ್ತಾರೆ. ಹಣವನ್ನು ನೆಲ್ಲೂರು ಟೋಲ್ ಬಳಿ ಕಲೆಕ್ಟ್ ಮಾಡಿಕೊಳ್ಳಿ’ ಎಂದು ತಿಳಿಸಿದ್ದಾನೆ.
ತಿರುಪತಿಯಲ್ಲಿ ಮತ್ತು ಬೆಂಗಳೂರಿನಲ್ಲಿ ವಿವಿಧೆಡೆಗೆ ಬರಹೇಳಿದ್ದಾರೆ. ಬಳಿಕ ಫೋನ್ ಸ್ವಿಚ್ ಆಫ್ ಮಾಡಿದ್ದು, ವಂಚನೆ ಗೊತ್ತಾತಿ ಕೇಸು ದಾಖಲಿಸಿದ್ದಾರೆ. ಆದರೆ, ಪ್ರಕರಣದಲ್ಲಿ ವ್ಯವಸ್ಥಿತ ಜಾಲ ಇರುವುದರಿಂದ ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಹಣ ನೀಡುತ್ತೇವೆಂದು ಲೊಕೇಷನ್ ಬದಲಾವಣೆ: ಆರೋಪಿಗಳು ಹೇಳಿದಂತೆ ಟೋಲ್ ಬಳಿ ಬಹಳ ಹೊತ್ತು ಕಾದರೂ ಯಾರೂ ಬಂದಿಲ್ಲ. ಹೀಗಾಗಿ ಅನುಮಾನಗೊಂಡ ಸುರೇಶ್, ಆರೋಪಿ ಶಿವು ಮತ್ತು ಶಿವಕುಮಾರ್ ಸ್ವಾಮಿಗೆ ಕರೆ ಮಾಡಿದ್ದಾರೆ. ಆಗ ಆರೋಪಿಗಳು, ‘ತಾವು ತಿರುಪತಿಯಲ್ಲಿ 2 ಸಾವಿರ ರೂ. ಮುಖಬೆಲೆಯ ಐದು ಕೋಟಿ ಮೊತ್ತದ ಮತ್ತೂಂದು ವ್ಯವಹಾರದಲ್ಲಿದ್ದೇವೆ. ಇಲ್ಲಿಯೇ ಬನ್ನಿ’ ಎಂದು ಲೈವ್ ಲೊಕೇಷನ್ ಸಹ ಶೇರ್ ಮಾಡಿದ್ದಾರೆ. ಅದನ್ನು ನಂಬಿದ್ದ ಸುರೇಶ್ ಹಾಗೂ ಅವರ ಸ್ನೇಹಿತ ತಿರುಪತಿಗೆ ತೆರಳಿ ಕರೆ ಮಾಡಿದ್ದಾರೆ. ಆಗಲೂ ಆರೋಪಿಗಳು ‘ನಾವು ಬೆಂಗಳೂರಿಗೆ ತೆರಳಿದ್ದೇವೆ, ಅಲ್ಲಿಯೇ ನಿಮಗೆ ಹಣ ಕೊಡುತ್ತೇವೆ’ ಎಂದಿದ್ದಾರೆ. ಆದರೆ ಬೆಂಗಳೂರಿಗೆ ಬಂದು ಕರೆ ಮಾಡಿದಾಗ ಆರೋಪಿಗಳು ಕರೆ ಸ್ವೀಕರಿಸದೇ ವಂಚಿಸಿದ್ದಾರೆ. ಈ ಘಟನೆ ನಡೆದು ಎರಡು ತಿಂಗಳು ಕಾದ ಬಳಿಕ ವಂಚನೆಗೊಳಗಾದ ಸುರೇಶ್ ಠಾಣೆಗೆ ದೂರು ನೀಡಿದ್ದಾರೆ.